ಮೈಸೂರು, ಆ.25- ಮೈಸೂರು ರೇಸ್ ಕ್ಲಬ್ (ಎಂಆರ್‍ಸಿ) ಗುತ್ತಿಗೆಯನ್ನು ಇನ್ನೂ ನವೀಕರಿಸಿಲ್ಲ ಎಂದು ಕ್ಲಬ್‍ನ ಮಾಜಿ ಅಧ್ಯಕ್ಷ ಕೆ.ಎ.ಮುದ್ದಪ್ಪ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರ ಹಾಗೂ ಮೈಸೂರು ರೇಸ್ ಕ್ಲಬ್ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳ ನಂತರ ರೇಸ್ ಕ್ಲಬ್ ಗುತ್ತಿಗೆ ಯನ್ನು 30 ವರ್ಷಗಳಿಗೆ ನವೀಕರಿಸಲಾಗಿದೆ ಎಂಬ ವರದಿಯು ಎಂಆರ್‍ಸಿಯ ಗುತ್ತಿಗೆ ಸಮಿತಿ ಅಧ್ಯಕ್ಷ (Leasing committee chairman) ಎಲ್.ವಿವೇಕಾನಂದ ಅವರು ನೀಡಿದ ಮಾಹಿತಿ ಮೇರೆಗೆ `ಮೈಸೂರು ಮಿತ್ರ’ನಲ್ಲಿ ಕಳೆದ ಜುಲೈ 7ರಂದು ಪ್ರಕಟವಾಗಿತ್ತು.
ಎಂಆರ್‍ಸಿ ಮಾಜಿ ಅಧ್ಯಕ್ಷ ಕೆ.ಎ.ಮುದ್ದಪ್ಪ ಈ ಸುದ್ದಿಯ ಕುರಿತು ಅಚ್ಚರಿ ವ್ಯಕ್ತಪಡಿಸಿ, ಪತ್ರಿಕೆಯಲ್ಲಿ ಪ್ರಕಟವಾದಂತೆ ಈ ಹಿಂದಿನ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ -ಜೆಡಿ(ಎಸ್) ಸರ್ಕಾರ ಕ್ಲಬ್‍ನ ಗುತ್ತಿಗೆಯನ್ನು ನವೀಕರಿಸಿ 30 ವರ್ಷಗಳಿಗೆ ವಿಸ್ತರಿಸಲಾಗಿದೆ ಎಂಬುದು ನಿಜವಲ್ಲ ಎಂದು ತಿಳಿಸಿದರು.
ಅಂದು ಪ್ರಕಟಿತ ಸುದ್ದಿಯಲ್ಲಿ, ಗುತ್ತಿಗೆ ಸಮಿತಿ ಹಾಗೂ ಸರ್ಕಾರದ ನಡುವೆ 12 ಬಾರಿ ಸಭೆ ನಡೆದಿದೆ, ಆಗಿನ ಪ್ರವಾಸೋದ್ಯಮ ಇಲಾಖೆಯ ಸಚಿವ ಸಾ.ರಾ.ಮಹೇಶ್ ಹಾಗೂ ಪಿಡಬ್ಲ್ಯೂಡಿ ಸಚಿವ ಎಚ್.ಡಿ.ರೇವಣ್ಣರವರು ಆ ಸಭೆಗಳಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಲಾಗಿತ್ತು.
ಹಚ್ಚಹಸಿರಾದ 139.30 ಎಕರೆ ವಿಸ್ತಾರದ ರೇಸ್‍ಕೋರ್ಸಿಗೆ ಸೇರಿದ ಜಾಗವನ್ನು ಲೋಕೋಪ ಯೋಗಿ ಇಲಾಖೆ ಗುತ್ತಿಗೆ ನೀಡಿದೆ ಎಂದು ವರದಿ ಯಾಗಿತ್ತು. ಕೊನೆಯ ಬಾರಿ ನಡೆದ ಸಭೆ ಯಲ್ಲಿ, ನಗರದ ಪ್ರವಾಸೋದ್ಯಮವನ್ನು ಗಮನ ದಲ್ಲಿರಿಸಿ ಗುತ್ತಿಗೆಯನ್ನು
30 ವರ್ಷಗಳಿಗೆ ನವೀಕರಿಸಬೇಕೆಂಬ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳ ಲಾಗಿದೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. ಗುತ್ತಿಗೆಯು ನವೀಕರಣವಾಗಿಲ್ಲದಿದ್ದರೂ ಈ ಸುದ್ದಿಯನ್ನು ಪತ್ರಿಕೆಗಳಿಗೇಕೆ ನೀಡಲಾಯಿತು, ಸರ್ಕಾರದ ಮುಂದೆ ಈ ಬಗೆಯ ಪ್ರಸ್ತಾಪವಿದೆಯೇ? ಎಂದು `ಮೈಸೂರು ಮಿತ್ರ’ ಮಾಜಿ ಅಧ್ಯಕ್ಷ ಕೆ.ಎ.ಮುದ್ದಪ್ಪರವರನ್ನು ಕೇಳಿದಾಗ ಮುದ್ದಪ್ಪರವರು, ಗುತ್ತಿಗೆ ನವೀಕರಣವಾಗಿಲ್ಲದಿದ್ದರೂ ಮುಂಬರಲಿರುವ ಮೈಸೂರು ರೇಸ್ ಕ್ಲಬ್‍ನ ಅಧ್ಯಕರ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿರಿಸಿ ಕೊಂಡು ಪ್ರಚಾರಕ್ಕಾಗಿ ಈ ರೀತಿಯ ಹೇಳಿಕೆ ನೀಡಿರಬಹುದು ಎಂದು ತಿಳಿಸಿದರು.