ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ತಂದೆ ನಿಧನ
ಮೈಸೂರು

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ತಂದೆ ನಿಧನ

August 26, 2019

ಮೈಸೂರು, ಆ.25(ಎಂಕೆ)- ಇತ್ತೀ ಚೆಗೆ ಆತ್ಮಹತ್ಯೆಗೆ ಶರ ಣಾದ ಖ್ಯಾತ ಉದ್ಯಮಿ, ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಅವರ ತಂದೆ ಗಂಗಯ್ಯ ಹೆಗಡೆ(96) ಇಂದು ಮಧ್ಯಾಹ್ನ ನಿಧನರಾದರು. ತೀವ್ರ ಅನಾ ರೋಗ್ಯದ ಹಿನ್ನೆಲೆ ಕಳೆದ ಒಂದೂವರೆ ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮಧ್ಯಾಹ್ನ 3 ಗಂಟೆಗೆ ಕೊನೆಯುಸಿರೆಳೆ ದಿದ್ದಾರೆ. ಉದ್ಯಮಿ ಸಿದ್ದಾರ್ಥ್ ಪತ್ನಿಯೂ ಆದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಪುತ್ರಿ ಮಾಳವಿಕ ಹಾಗೂ ಸಂಬಂಧಿಕರಿಗೆ ಮೃತ ದೇಹವನ್ನು ಹಸ್ತಾಂ ತರಿಸಲಾಯಿತು. ನಂತರ ಆಂಬುಲೆನ್ಸ್ ಮೂಲಕ ಮೃತ ದೇಹವನ್ನು ಚಿಕ್ಕಮಗಳೂರಿಗೆ ಕೊಂಡೊಯ್ಯಲಾಯಿತು. ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಅವರ ಪುತ್ರ, ಉದ್ಯಮಿ ಸಿದ್ದಾರ್ಥ್ ಸಮಾಧಿ ಪಕ್ಕದಲ್ಲೇ ಅಂದರೆ ಚಿಕ್ಕಮಗಳೂರಿನ ಚಟ್ಟನಹಳ್ಳಿಯ ಚೇತನಹಳ್ಳಿ ಎಸ್ಟೇಟ್‍ನಲ್ಲಿಯೇ ಗಂಗಯ್ಯ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕೊನೆಗೂ ತಿಳಿಯದ ಮಗನ ಸಾವು: ಜುಲೈ 30ರಂದು ಗಂಗಯ್ಯ ಹೆಗಡೆ ಅವರ ಪುತ್ರ, ಕಾಫಿ ಡೇ ಸಂಸ್ಥಾಪಕ, ಬಹುಕೋಟಿ ಉದ್ಯಮಿ ಸಿದ್ದಾರ್ಥ್ ಉಳ್ಳಾಲ ಸಮೀಪದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿದ್ದ ತಂದೆಯನ್ನು ಭೇಟಿಯಾಗಿದ್ದರು. ಆದರೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಂದೆಗೆ ಮಾತ್ರ ಕೊನೆ ಕ್ಷಣದವರೆಗೆ ಮಗನ ಆತ್ಮಹತ್ಯೆ ವಿಚಾರ ತಿಳಿದಿರಲಿಲ್ಲ.

Translate »