ಜ.8ರಂದು ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮೈಸೂರಲ್ಲೂ ಬೆಂಬಲ
ಮೈಸೂರು

ಜ.8ರಂದು ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮೈಸೂರಲ್ಲೂ ಬೆಂಬಲ

December 27, 2019

ಮೈಸೂರು, ಡಿ.26(ಪಿಎಂ)- ಕಾರ್ಮಿಕರಿಗೆ 21 ಸಾವಿರ ರೂ. ಕನಿಷ್ಠ ವೇತನ ನೀಡಬೇಕೆಂಬುದೂ ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಷ್ಟ್ರವ್ಯಾಪಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು 2020ರ ಜ.8 ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿವೆ ಎಂದು ತಿಳಿಸಿದ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಶೇಷಾದ್ರಿ, ಮೈಸೂರು ಜಿಲ್ಲೆಯಲ್ಲೂ ಮುಷ್ಕರ ಯಶಸ್ವಿಗೊಳಿ ಸಲು ಅಂದು ಜಿಲ್ಲೆಯ ಕಾರ್ಮಿಕರು ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೀತಿಗಳು ಬಂಡವಾಳಶಾಹಿಗಳ ಪರವಾಗಿದ್ದು, ಜನಸಾಮಾನ್ಯರು, ರೈತರು ಹಾಗೂ ಕಾರ್ಮಿಕರ ಬದುಕು ಇವರ ಆಡಳಿತಾವಧಿಯಲ್ಲಿ ಅಸಹನೀಯವಾಗಿದೆ. 44 ಕಾರ್ಮಿಕ ಪರ ಕಾನೂನುಗಳನ್ನು ಕೇವಲ 4 ಕೋಡ್ ಮಾಡಲು ಮುಂದಾಗಿದ್ದು, ಈಗಾಗಲೇ 2 ಕೋಡ್‍ಗಳಿಗೆ ಎರಡೂ ಸದನಗಳಲ್ಲೂ ಅನುಮೋದನೆ ಪಡೆಯಲಾಗಿದೆ ಎಂದು ಕಿಡಿಕಾರಿದರು. ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಇದನ್ನು ಖಂಡಿಸುವುದರೊಂ ದಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂದು ಇಡೀ ದೇಶದಲ್ಲಿ ಮುಷ್ಕರ ನಡೆಸಲಾಗುತ್ತಿದೆ. 21 ಸಾವಿರ ರೂ. ಕನಿಷ್ಠ ವೇತನ ನೀಡುವುದು ಸೇರಿದಂತೆ ಒಟ್ಟು 12 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಮುಷ್ಕರ ನಡೆಸಲಾಗುತ್ತಿದೆ ಎಂದರು.

ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸ ಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಬೇಕು. ಎಲ್ಲಾ ಕಾರ್ಮಿಕರಿಗೆ ಮಾಸಿಕ ಕನಿಷ್ಠ 10 ಸಾವಿರ ರೂ. ಪಿಂಚಣಿ ನೀಡಬೇಕು. ರೈತರ ಬೆಳೆ ಗಳಿಗೆ ನ್ಯಾಯಯುತ ಬೆಲೆ ದೊರೆಯಲು ಡಾ.ಸ್ವಾಮಿ ನಾಥನ್ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಅಪ್ರೆಂಟಿಸ್ ಕಾಯ್ದೆಯಲ್ಲಿ ತಿದ್ದುಪಡಿ ತರುವ ಮೂಲಕ ಖಾಯಂ ಕಾರ್ಮಿಕರು ಹಾಗೂ ಕಾರ್ಮಿಕ ಸಂಘಟನೆಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ನೋಟು ಅಪಮೌಲೀ ಕರಣ ಹಾಗೂ ಜಿಎಸ್‍ಟಿ ಜಾರಿ ಫಲವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದ್ದು, ನಿರು ದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದೀಗ ಜನತೆಯ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ತಂತ್ರಗಾರಿಕೆ ನಡೆಸು ವಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ಮುಷ್ಕರ ಸಂಬಂಧ 2020ರ ಜ.4ರಂದು ಮೈಸೂರು ನಗರದಲ್ಲಿ ವಾಕಥಾನ್ ಏರ್ಪಡಿಸಲು ಉದ್ದೇಶಿಸಲಾಗಿದೆ. ಜೊತೆಗೆ ಇದೇ ಡಿ.28ರಂದು ಸಂಜೆ 5ಕ್ಕೆ ಸರಸ್ವತಿ ಪುರಂ ನಲ್ಲಿರುವ ಎಐಟಿಯುಸಿ ಕಚೇರಿಯಲ್ಲಿ ದುಂಡು ಮೇಜಿನ ಸಭೆ ಆಯೋಜಿಸಲಾಗಿದೆ. ಮುಷ್ಕರದಂದು ಸಾಂಕೇತಿಕ ವಾಗಿ ಪ್ರತಿಭಟನೆ ಹಾಗೂ ರ್ಯಾಲಿ ನಡೆಸಲು ಉದ್ದೇಶಿಸ ಲಾಗಿದೆ ಎಂದರು. ಎಐಯುಟಿಯುಸಿ ಪ್ರಧಾನ ಕಾರ್ಯ ದರ್ಶಿ ಚಂದ್ರಶೇಖರ್ ಮೇಟಿ, ಮುಖಂಡರಾದ ಜಯರಾಮ್, ಹೆಚ್.ಪಿ.ರಾಮಕೃಷ್ಣ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »