ಮೈಸೂರು ತಾಪಂ ಆಡಳಿತಾರೂಢ  ಸದಸ್ಯರ ರಾಜಕೀಯ ಜಿದ್ದಾಜಿದ್ದಿ
ಮೈಸೂರು

ಮೈಸೂರು ತಾಪಂ ಆಡಳಿತಾರೂಢ ಸದಸ್ಯರ ರಾಜಕೀಯ ಜಿದ್ದಾಜಿದ್ದಿ

January 29, 2019

ಮೈಸೂರು: ಕೆಲ ತಿಂಗಳಿಂದ ಮೈಸೂರು ತಾಲೂಕು ಪಂಚಾ ಯಿತಿ ಸದಸ್ಯರ ನಡುವಿನ ರಾಜಕೀಯ ಜಿದ್ದಾಜಿದ್ದಿಯಿಂದಾಗಿ ತಾಲೂಕಿನ ಅಭಿ ವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅಧಿಕಾರಕ್ಕಾಗಿ ಹಠಕ್ಕೆ ಬಿದ್ದ ಅಧ್ಯಕ್ಷ, ಉಪಾ ಧ್ಯಕ್ಷರ ಜಿದ್ದಾಜಿದ್ದಿಯಿಂದಾಗಿ ವಿಶೇಷ ಸಭೆ ಗಳು ಪ್ರತಿ ಬಾರಿಯೂ ಮುಂದೂಡಲ್ಪಟ್ಟು, ತಾಲೂಕಿನ ಜನತೆ ಅಭಿವೃದ್ಧಿ ಕಾಮಗಾರಿ ಗಳಿಲ್ಲದೆ ಹೈರಾಣಾಗುವಂತೆ ಮಾಡಿದೆ.

ಇಂದೂ ಸಹ ಅದೇ ಆಯಿತು. 2018 -19ನೇ ಸಾಲಿಗೆ ಸಂಬಂಧಿಸಿದಂತೆ 2 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿ ಸಿದಂತೆ ಕರೆದಿದ್ದ ವಿಶೇಷ ಸಭೆ ಸದಸ್ಯರ ನಡು ವಿನ ರಾಜಕೀಯ ದೊಂಬರಾಟದಿಂದಾಗಿ ಕ್ರಿಯಾಯೋಜನೆ ಅನುಮೋದನೆಯಾಗದೆ ಸಭೆ ಮತ್ತೊಮ್ಮೆ ಮುಂದೂಡಲ್ಪಟ್ಟಿತು.

2018-19ನೇ ಸಾಲಿಗೆ ಅನಿರ್ಬಂಧಿತ ಅನುದಾನ ಮತ್ತು ಲಿಂಕ್ ಡಾಕ್ಯುಮೆಂಟ್ ಅಡಿಯಲ್ಲಿ ನಿಗದಿಯಾಗಿರುವ ಅನುದಾನದ ಕ್ರಿಯಾ ಯೋಜನೆಗೆ ಅನುಮೋದನೆ ನೀಡು ವುದು, ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಬರುವ ತಾಲೂಕು ಮಟ್ಟದ ವಿವಿಧ ಇಲಾಖೆಗಳಿಗೆ ನಿಗದಿಯಾಗಿರುವ ಅನು ದಾನದ ಕ್ರಿಯಾ ಯೋಜನೆಗೆ ಅನುಮೋ ದನೆ ನೀಡುವುದು, 2017-18ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರಕ್ಕೆ ಅನುಮೋದನೆ ನೀಡುವುದು, ಬದಲಿ ಕಾಮಗಾರಿಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡು ವುದಕ್ಕೆ ಸಂಬಂಧಿಸಿದಂತೆ ಕರೆಯ ಲಾಗಿದ್ದ ವಿಶೇಷ ಸಭೆ ಇದಾಗಿತ್ತು.

ಇದೇ ಅಜೆಂಡಾ ಇಟ್ಟುಕೊಂಡು ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ 10.1.2019ರಂದು ಕರೆದಿದ್ದ ವಿಶೇಷ ಸಭೆ ಕೋರಂ ಕೊರತೆಯಿಂದಾಗಿ ಜ.17ಕ್ಕೆ ಮುಂದೂಡಲ್ಪಟ್ಟಿತ್ತು. ಈ ಸಭೆ ಯಲ್ಲೂ ಕೋರಂ ಅಭಾವದಿಂದ ಸಭೆ ಯನ್ನು ಜ.21ರಂದು ಮುಂದೂಡಲಾ ಗಿತ್ತು. ಅಂದೂ ಸಹ ಸದಸ್ಯರು ಸ್ಥಾಯಿ ಸಮಿತಿ ರಚನೆಯಾಗುವವರೆಗೂ ಸಭೆ ನಡೆಸದಂತೆ ತಿಳಿಸಿದ್ದ ಮೇರೆಗೆ ಸ್ಥಾಯಿ ಸಮಿತಿ ರಚನೆ ಕುರಿತು ಚುನಾವಣೆಯ ದಿನಾಂಕ ನಿಗದಿ ಪಡಿಸಿ, ವಿಶೇಷ ಸಭೆಯನ್ನು ಜ.28ಕ್ಕೆ ಮತ್ತೆ ಮುಂದೂಡಲ್ಪಟ್ಟಿತು.

ಅಂತೆಯೇ ಇಂದು ನಡೆಯಬೇಕಿದ್ದ ವಿಶೇಷ ಸಭೆಗೆ ಕೋರಂ ಇತ್ತು. ತಾಪಂನ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಸದ ಸ್ಯರು ಸಭೆಯಲ್ಲಿ ಹಾಜರಿದ್ದರು. ಸಭೆ ಆರಂಭ ವಾಗುತ್ತಿದ್ದಂತೆ ಅಧ್ಯಕ್ಷೆ ಕಾಳಮ್ಮ ಕೆಂಪ ರಾಮಯ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ 2 ಕೋಟಿ ರೂ.ಗಳ ಕ್ರಿಯಾಯೋಜನೆಗೆ ಅನುಮೋದನೆ ನೀಡು ವಂತೆ ಸದಸ್ಯರಲ್ಲಿ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯರು ಮೊದಲು ಸ್ಥಾಯಿ ಸಮಿತಿ ರಚನೆಯಾಗಲಿ. ನಂತರ ಕ್ರಿಯಾ ಯೋಜ ನೆಗೆ ಅನುಮೋದನೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಇದಕ್ಕೊಪ್ಪದ ಕಾಂಗ್ರೆಸ್ ಸದಸ್ಯರು ಅಭಿವೃದ್ಧಿ ದೃಷ್ಟಿ ಯಿಂದ ನಿಗದಿಯಂತೆ ಮೊದಲು ಕ್ರಿಯಾ ಯೋಜನೆಗೆ ಅನುಮತಿ ಪಡೆಯುವುದು ಸೂಕ್ತ ಎಂದು ಸಲಹೆ ನೀಡಿದರು.

ಇದಕ್ಕೆ ಸಮ್ಮತಿಸದ ಜೆಡಿಎಸ್ ಸದಸ್ಯರು ಕ್ರಿಯಾಯೋಜನೆಗೂ ಅನುಮೋದನೆಗೂ ಮುನ್ನ ಸ್ಥಾಯಿ ಸಮಿತಿ ರಚನೆಯಾಗಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಉಪಾ ಧ್ಯಕ್ಷ ಎನ್.ಬಿ.ಮಂಜು ಸಹ ದನಿಗೂಡಿಸಿ ದರು. ಇದಕ್ಕೆ ಸೊಪ್ಪು ಹಾಕದ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಮೊದಲು ಕ್ರಿಯಾಯೋಜ ನೆಗೆ ಅನುಮೋದನೆ ನೀಡುವಂತೆ ಮತ್ತೊಮ್ಮೆ ಸದಸ್ಯರಲ್ಲಿ ಮನವಿ ಮಾಡಿದರು. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋ ದನೆ ಅಗತ್ಯವಿರುವ ಕಾರಣ, ಈ ಬಗ್ಗೆ ಜೆಡಿಎಸ್ ಸದಸ್ಯರ ಮನವೊಲಿಸಿ ಅವ ರನ್ನು ಸಭೆಗೆ ಕರೆ ತರಲು ಮುಂದಾದ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯರ ಯತ್ನ ವಿಫಲವಾಯಿತು.

ಸಭೆಯನ್ನು ಬಹಿಷ್ಕರಿಸಿದ್ದ ಉಪಾಧ್ಯಕ್ಷ ಎನ್.ಬಿ.ಮಂಜು ಮತ್ತು ಇತರೆ ಸದಸ್ಯರ ಮನವೊಲಿಸಿ ಸಭೆಗೆ ಕರೆದೊಯ್ಯಲೆಂದು ಉಪಾಧ್ಯಕ್ಷರ ಕೊಠಡಿಗೆ ತೆರಳಿದ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಅಭಿವೃದ್ಧಿ ಕಾಮ ಗಾರಿಗಳ ದೃಷ್ಟಿಯಿಂದ ಸಭೆಗೆ ಬರುವಂತೆ ಉಪಾಧ್ಯಕ್ಷರು ಮತ್ತು ಇತರೆ ಸದಸ್ಯರನ್ನು ಪರಿಪರಿಯಾಗಿ ಕೇಳಿಕೊಂಡರು. ಆದರೂ ಅಧ್ಯಕ್ಷರ ಪ್ರಯತ್ನ ಕೈಗೂಡಲಿಲ್ಲ. ಅದಕ್ಕೆ ಬದಲಾಗಿ ಅಧ್ಯಕ್ಷರು ನಮ್ಮ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವ ವಿಚಾರಗಳನ್ನು ನಮ್ಮ ಗಮನಕ್ಕೆ ತರದೇ ಏಕವ್ಯಕ್ತಿಯಾಗಿ ಮೆರೆಯುತ್ತಿದ್ದೀರಿ ಎಂದು ಉಪಾಧ್ಯಕ್ಷರ ಕೋಣೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಸದಸ್ಯರ ನಡುವೆ ಏರು ಧ್ವನಿಯ ವಾಗ್ವಾದಗಳು ನಡೆದವು.

ಮೊದಲು ನೀವು ಕರಾರು ಪ್ರಕಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಜೆಡಿಎಸ್ ಮಹಿಳಾ ಸದಸ್ಯರು ಅಧ್ಯಕ್ಷರನ್ನು ಆಗ್ರಹಿಸಿದರು. ಮಾಧ್ಯಮಗಳಿಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದೀರಿ ಎಂದು ಹರಿಹಾಯ್ದರು. ತಮ್ಮ ಮನವಿಗೆ ಉಪಾ ಧ್ಯಕ್ಷರು ಮತ್ತು ಜೆಡಿಎಸ್ ಸದಸ್ಯರು ಸಭೆಗೆ ಬರಲು ನಿರಾಕರಿಸಿದಾಗ ಬರಿಗೈಯ್ಯಲ್ಲಿ ಸಭೆಗೆ ವಾಪಸಾಗಿ ಸಭೆಯನ್ನು ಮುಂದುವರಿಸಿದರು.

ಇರುವಷ್ಟೇ ಸದಸ್ಯರ ನಡುವೆ ಅಭಿವೃಧ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಧಿ ಕಾರಿಗಳಿಂದ ಮಾಹಿತಿ ಕೊಡಿಸುವ ಪ್ರಯತ್ನ ನಡೆಯಿತಾದರೂ, ತಾವು ಬಹಿಷ್ಕಾರ ಹಾಕಿ ಹೊರಬಂದಿದ್ದರೂ ತಮ್ಮ ಗೈರು ಹಾಜರಿ ಯಲ್ಲಿ ಸಭೆ ನಡೆಯುತ್ತಿದೆ ಎಂಬುದು ಊಟಕ್ಕೆ ಕುಳಿತಿದ್ದ ಸದಸ್ಯರಿಗೆ ತಿಳಿಯಿತು. ತಕ್ಷಣ ಊಟ ಮಾಡುತ್ತಿದ್ದ ತಟ್ಟೆಗಳನ್ನೆ ಅಲ್ಲಲ್ಲೇ ಬಿಟ್ಟು ಉಪಾಧ್ಯಕ್ಷ ಎನ್.ಬಿ.ಮಂಜು ನೇತೃತ್ವ ದಲ್ಲಿ ಸಭಾಂಗಣಕ್ಕೆ ತೆರಳಿದರು. ನಾವೆ ಲ್ಲರೂ ಹೊರಗಿದ್ದು, ಸಭೆ ಹೇಗೆ ನಡೆಸು ತ್ತೀರಿ? ಸಭೆಯನ್ನು ಮುಂದೂಡುವಂತೆ ಆಗ್ರಹಿಸಿದರು. ಸಭೆ ಮುಗಿಸದ ಹೊರತು ಸಭಾಂಗಣದಿಂದ ಹೊರ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಇದಕ್ಕೆ ಮಣಿ ಯದ ಅಧ್ಯಕ್ಷರು, ಕ್ರಿಯಾಯೋಜನೆಗೆ ಅನು ಮೋದನೆ ಪಡೆಯುವಂತೆ ಇಓ ಲಿಂಗ ರಾಜಯ್ಯ ಅವರಿಗೆ ಸೂಚಿಸಿದರು. ಈ ಬಗ್ಗೆ ಸಾಕಷ್ಟು ಪರ-ವಿರೋಧ ವಾಗ್ವಾದಕ್ಕೆ ಕಾರಣವಾಯಿತು. ಸಭೆ ನಡೆಸದಂತೆ ವಿರೋಧಿ ಸದಸ್ಯರು ಪಟ್ಟು ಹಿಡಿದ ಕಾರಣ, ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಸಭೆಯನ್ನು ಅನಿವಾರ್ಯವಾಗಿ ಮುಂದೂಡಿದರು. ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರ ರಾಜಕೀಯ ಜಿದ್ದಾಜಿದ್ದಿಯಿಂದಾಗಿ ತಾಲೂ ಕಿನ ಗ್ರಾಮೀಣ ಭಾಗದ ಅಭಿವೃದ್ಧಿ ಕೆಲಸ ಕಾರ್ಯಗಳು ಕುಂಠಿತಗೊಳ್ಳುವಂತಾಗಿದೆ. ಗ್ರಾಮೀಣ ಜನತೆ ಹೈರಾಣಾಗಿದ್ದಾರೆ.

ಹಠಕ್ಕೆ ಬಿದ್ದಿರುವ ಅಧ್ಯಕ್ಷೆ ಕಾಳಮ್ಮ, ಉಪಾಧ್ಯಕ್ಷ ಎನ್.ಬಿ.ಮಂಜು
ಮೈಸೂರು: ಮೈಸೂರು ತಾಲೂಕು ಪಂಚಾ ಯಿತಿ ಗದ್ದುಗೆ ಹಿಡಿದಿದ್ದ ಜೆಡಿಎಸ್ ಒಪ್ಪಂದದಂತೆ ಮೊದಲ ಅವಧಿಗೆ ಕಾಳಮ್ಮ ಕೆಂಪರಾಮಯ್ಯ ಅವರು ಅಧ್ಯಕ್ಷೆಯಾಗಿ, ಎನ್.ಬಿ.ಮಂಜು ಉಪಾಧ್ಯಕ್ಷರಾಗಿ ಅಧಿಕಾರ ಪಡೆದಿದ್ದರು. ಒಪ್ಪಂದದಂತೆ 2016ರ ಮೇ 21ರಂದು ಅಧಿಕಾರಕ್ಕೇರಿದ್ದ ಕಾಳಮ್ಮ 2018ರ ಮೇ ತಿಂಗಳಲ್ಲಿಯೇ ಅಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡುವಂತೆ ಸ್ವಪಕ್ಷೀಯ ಸದಸ್ಯರು ಒತ್ತಾಯಿಸಿದ್ದರು. ಆದರೆ ಕಾಳಮ್ಮ ಕೆಂಪರಾಮಯ್ಯ ನಿರಾಕರಿಸಿದ್ದರು.

ಇದು ಸಹಜವಾಗಿ ಸ್ವಪಕ್ಷೀಯ ಸದಸ್ಯರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಅಧ್ಯಕ್ಷರ ವಿರುದ್ಧ ಅಸಮಾಧಾನ ಹೊರ ಹಾಕುತ್ತಲೇ ಇದ್ದರು. ಹೀಗಾಗಿ ಕಳೆದ ವರ್ಷ ಡಿ.19ರಂದು ಅಧ್ಯಕ್ಷರು ಕರೆದಿದ್ದ ಸಾಮಾನ್ಯ ಸಭೆಗೆ ಸ್ವಪಕ್ಷ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು. ಒಪ್ಪಂದದಂತೆ ನಡೆದು ಕೊಳ್ಳದ ಅಧ್ಯಕ್ಷರನ್ನು ಕೆಳಗಿಳಿಸಲು ಸ್ವಪಕ್ಷ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡಿಸಲು ಮುಂದಾಗಿದ್ದರು. ಡಿ.19ರ ಮಧ್ಯಾಹ್ನ 12 ಗಂಟೆಗೆ ಕರೆದಿದ್ದ ವಿಶೇಷ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಭಾಗವಹಿಸಿದ್ದರು. ಆದರೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಸಭೆಯಿಂದ ದೂರ ಉಳಿದಿದ್ದರು. ತಾಪÀಂ ಇಓ ಲಿಂಗರಾಜಯ್ಯ ಹೆಚ್ಚುವರಿಯಾಗಿ 30 ನಿಮಿಷ ನೀಡಿದ್ದರೂ ಆಡಳಿತ ಪಕ್ಷದ ಸದಸ್ಯರು ಬಾರದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ವಿಫಲವಾಗಿ, ಅಧ್ಯಕ್ಷೆ ಕಾಳಮ್ಮ ಅಧಿಕಾರದಲ್ಲಿ ಮುಂದುವರೆದಿದ್ದರು. ಪಂಚಾಯತ್ ರಾಜ್ ನಿಯಮ 140/3ರ ಪ್ರಕಾರ ಒಮ್ಮೆ ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ಮತ್ತೇ ಎರಡು ವರ್ಷಗಳವರೆಗೂ ಗೊತ್ತುವಳಿ ಮಂಡಿಸಲು ಸಾಧ್ಯವಿಲ್ಲ. ಹಾಗಾಗಿ ಮುಂದಿನ 2 ವರ್ಷ ಕಾಳಮ್ಮ ಕೆಂಪರಾಮಯ್ಯನವರೇ ಅಧ್ಯಕ್ಷರಾಗಿ ಮುಂದುವರೆಯಬಹುದು ಎಂದು ಪ್ರಕಟಿಸಿದ್ದರು.

ಈ ಮಧ್ಯೆ ಕಾಳಮ್ಮ ಕಾಂಗ್ರೆಸ್ ವಲಯದಲ್ಲಿ ಕಾಣಿಸಿಕೊಂಡಿರು ವುದರಿಂದ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಅವರಿಗೆ ಸೆಡ್ಡು ಹೊಡೆದಿದ್ದು, ಸಭೆಗೆ ಗೈರು ಹಾಜರಾಗುವ ಮೂಲಕ ಕೋರಂ ಉಂಟು ಮಾಡಿ ಸಭೆ ನಡೆಯದಂತೆ ಮಾಡುವಲ್ಲಿ ಸಫಲರಾಗಿದ್ದರು. ಇಂದೂ ಸ್ಥಾಯಿ ಸಮಿತಿ ರಚನೆ ವಿಚಾರ ಎತ್ತಿ ಸಭಾತ್ಯಾಗ ಮಾಡಿ ಸಭೆ ಮುಂದೂಡುವಂತಾಯಿತು.

Translate »