ಖಾಸಗಿ ಸಂಸ್ಥೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಪದವಿ ಕೋರ್ಸ್‍ಗೆ
ಮೈಸೂರು: ಮಂಡ್ಯ ಜಿಲ್ಲೆಯ ಸಂಪೂರ್ಣ ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಗ್ರಿ ಸೈನ್ಸ್ ಅಂಡ್ ಹಾರ್ಟಿಕಲ್ಚರಲ್ ಟೆಕ್ನಾಲಜಿ ಯಲ್ಲಿ ಕೃಷಿ ವಿಜ್ಞಾನ ಮತ್ತು ತೋಟಗಾರಿಕೆ ವಿಜ್ಞಾನ ವಿಷಯದ ಬಿಎಸ್ಸಿ ಪದವಿ ಕೋರ್ಸಿಗೆ ಹೆಚ್ಚುವರಿ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲು ಮೈಸೂರು ವಿಶ್ವವಿದ್ಯಾನಿಲಯವು ಸಾರಾಸಗಟಾಗಿ ನಿರಾಕರಿಸಿದೆ.
ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲ ಪತಿ ಪ್ರೊ. ಟಿ.ಕೆ.ಉಮೇಶ ಅಧ್ಯಕ್ಷತೆಯಲ್ಲಿ ಕ್ರಾಫರ್ಡ್ ಭವನದ ಸಭಾಂಗಣದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಆ ಸಂಸ್ಥೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚುವರಿಯಾಗಿ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸದ ಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆಯು ಒಮ್ಮತದ ನಿರ್ಧಾರ ಕೈಗೊಂಡಿತು.
ಸಂಪೂರ್ಣ ಸಂಸ್ಥೆಯು 50 ಎಕರೆ ವಿಶಾಲ ಪ್ರದೇಶ, ಸಂಶೋಧನಾ ಸೌಲಭ್ಯ, ಬೋಧನಾ ವರ್ಗ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲ ಸೌಲಭ್ಯ ಹೊಂದಿರುವುದರಿಂದ ಈಗಾಗಲೇ ನಾಲ್ಕು ವರ್ಷ ಗಳಿಂದ ಬಿಎಸ್ಸಿ (ಹಾನರ್ಸ್) ಇನ್ ಅಗ್ರಿಕಲ್ಚರಲ್ ಸೈನ್ಸ್ ಅಂಡ್ ಟೆಕ್ನಾಲಜಿ, ಹಾರ್ಟಿಕಲ್ಚರಲ್ ಸೈನ್ಸಸ್ ಅಂಡ್ ಟೆಕ್ನಾಲಜಿ ಕೋರ್ಸ್‍ಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, 60 ವಿದ್ಯಾರ್ಥಿಗಳಿಗೆ ಅನುಮತಿ ಪಡೆದಿದೆ. ಹೆಚ್ಚುವರಿ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಕೋರಿದ್ದಾರೆ ಎಂಬ ಪ್ರಸ್ತಾವನೆಯನ್ನು ಕುಲಸಚಿವ ಪ್ರೊ. ರಾಜಣ್ಣ ಸಭೆ ಮುಂದಿಟ್ಟರು.
ಈಗಾಗಲೇ ಅಧ್ಯಯನ ಮಂಡಳಿ ಹಾಗೂ ಸಮಿ ತಿಯು ಸ್ಥಳಕ್ಕೆ ತೆರಳಿ ಖುದ್ದು ಪರಿಶೀಲನೆ ನಡೆಸಿ ಅಗತ್ಯ ಮೂಲ ಸೌಕರ್ಯ ಇರುವುದು ಹಾಗೂ ಎಲ್ಲವೂ ನಿಯ ಮಾನುಸಾರ ನಡೆಯುತ್ತಿರುವ ಕಾರಣ ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಿಂಡಿಕೇಟ್ ಸಭೆಯು ಅನು ಮೋದನೆ ನೀಡಿದೆ ಎಂಬುದನ್ನು ಹಂಗಾಮಿ ಕುಲಪತಿ ಪ್ರೊ. ಉಮೇಶ ಹಾಗೂ ಪರೀಕ್ಷಾಂಗ ಕುಲಪತಿ ಪ್ರೊ. ಜೆ.ಸೋಮಶೇಖರ್ ಸಭೆ ಗಮನಕ್ಕೆ ತಂದರು.
ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸದಸ್ಯ ರಾದ ಅಪ್ಪಾಜಿಗೌಡ, ಪ್ರೊ. ಮಹೇಶಚಂದ್ರ ಗುರು, ಪ್ರೊ. ಸಿ.ಬಸವರಾಜು, ನಾಗೇಶ ಕರಿಯಪ್ಪ ಹಾಗೂ ಇತರರು, ಖಾಸಗಿ ಸಂಸ್ಥೆಯು ತಮಗಿಷ್ಟ ಬಂದಂತೆ ಶುಲ್ಕ ವಸೂಲಿ ಮಾಡಿ, ಹಣದ ದಂಧೆ ನಡೆಸುತ್ತಿದೆ. ವಿಶೇಷ ಕೋರ್ಸ್‍ಗೆ ಅವಕಾಶ ಕೊಟ್ಟರೆ ಕೃಷಿ ವಿಶ್ವ ವಿದ್ಯಾನಿಲಯಗಳಿಗೆ ಪೆಟ್ಟು ಬೀಳಬಹುದು ಹಾಗೂ ಮುಂದೆ ತಾಂತ್ರಿಕ ಅಥವಾ ಕಾನೂನಿನ ತೊಡಕು ಉಂಟಾದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೆಟ್ಟ ಹೆಸರು ಬರಬಹುದಾದ್ದರಿಂದ ಮುಂದಿನ ವರ್ಷದಿಂದ ಹೆಚ್ಚುವರಿ 60 ಮಂದಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದರು.
ಪ್ರೊ. ಸೆಲ್ವಿದಾಸ್ ನಗದು ದತ್ತಿ ಸ್ಥಾಪನೆ, ಪಿಹೆಚ್‍ಡಿ ಪ್ರವೇಶ ಪರೀಕ್ಷೆಯಲ್ಲಿ `ಅಂತರರಾಷ್ಟ್ರೀಯ ಸಂಬಂಧ ಗಳು’ ವಿಷಯ ಸೇರ್ಪಡೆ, 2018ನೇ ಸಾಲಿನಿಂದ ನಾಗಮಂಗಲ ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಪ್ರಥಮ ದರ್ಜೆ ಕಾಲೇಜನ್ನು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಸುಪರ್ದಿಗೆ ಹಸ್ತಾಂತರಿಸಲು ಸಭೆಯು ಸಮ್ಮತಿಸಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಎಂಕಾಂ, ಸ್ನಾತಕೋತ್ತರ ಕೋರ್ಸಿಗೆ ಹೆಚ್ಚುವರಿ ಪ್ರವೇಶಾತಿಗೆ ಅವಕಾಶ ನೀಡುವುದು, ಬಿಬಿಎ (Tourism and Hospitality) ಪರಿಷ್ಕøತ ಪಠ್ಯ ಕ್ರಮಕ್ಕೆ ಅನುಮೋದನೆ, ಯುಜಿ ಸಿಬಿಸಿಎಸ್ ನಿಯಮಾ ವಳಿಗೆ ಸರ್ಕಾರದ ಅನುಮೋದನೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಶೈಕ್ಷಣಿಕ ಮಂಡಳಿ ಸಭೆ ಯಲ್ಲಿ ಸದಸ್ಯರು ಒಪ್ಪಿಗೆ ಸೂಚಿಸಿದರು.
ಕಾಲೇಜು ವಿರುದ್ಧ ಕ್ರಮ: ಅರ್ಹತೆ ಇಲ್ಲದಿದ್ದರೂ 13 ಮಂದಿ ವಿದ್ಯಾರ್ಥಿಗಳನ್ನು ಎಂಎ ಇನ್ ಇಂಗ್ಲಿಷ್‍ಗೆ ಪ್ರವೇಶಾವಕಾಶ ನೀಡಿ ನಿಯಮ ಉಲ್ಲಂಘಿಸಿರುವ ಸೆಂಟ್ ಫಿಲೋಮಿನಾ ಕಾಲೇಜು ವಿರುದ್ಧ ಕ್ರಮ ಜರುಗಿಸಲು ಶೈಕ್ಷಣಿಕ ಮಂಡಳಿಯು ನಿರ್ಧರಿಸಿತು.
ಈ ಸಂಬಂಧ ಇಂಗ್ಲಿಷ್ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಮಹದೇವ ಅವರು ಸಂಸ್ಥೆಯು ತಮ್ಮದೇ ಆದ ಪ್ರವೇಶಾತಿ ನಿಯಮ ಮಾಡಿಕೊಂಡು ವಿಶ್ವವಿದ್ಯಾನಿಲ ಯದ ಮಾರ್ಗಸೂಚಿಯನ್ನು ಕಡೆಗಣಿಸುತ್ತಿದ್ದು, ಕಾಲೇಜು ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಕೋರಿಕೊಂಡ ಹಿನ್ನೆಲೆಯಲ್ಲಿ ಸಭೆ ಈ ತೀರ್ಮಾನ ಕೈಗೊಂಡಿತು.