ಮೇ 26ರಂದು ಮೈಸೂರು ವಿವಿ 5ನೇ ಹಂಗಾಮಿ ಕುಲಪತಿ ನೇಮಕ ಸಂಭವ
ಮೈಸೂರು

ಮೇ 26ರಂದು ಮೈಸೂರು ವಿವಿ 5ನೇ ಹಂಗಾಮಿ ಕುಲಪತಿ ನೇಮಕ ಸಂಭವ

May 25, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 4ನೇ ಹಂಗಾಮಿ ಕುಲಪತಿ ಪ್ರೊ. ನಿಂಗಮ್ಮ ಸಿ. ಬೆಟ್ಸೂರ್ ಅವರ ಅಧಿಕಾರಾವಧಿ ಶನಿವಾರ ಅಂತ್ಯಗೊಳ್ಳಲಿದ್ದು, 5ನೇ ಹಂಗಾಮಿ ಕುಲಪತಿಗಳು ಅಧಿಕಾರ ವಹಿಸಿಕೊಳ್ಳುವ ಸಂಭವವಿದೆ.

15 ತಿಂಗಳ ಹಿಂದೆಯಷ್ಟೇ ಶತಮಾನೋತ್ಸವ ಆಚರಿಸಿಕೊಂಡ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯವು ಈವರೆಗೂ ಪೂರ್ಣಾವಧಿ ಕುಲಪತಿಯನ್ನು ಕಂಡಿಲ್ಲ. 2017ರ ಜನವರಿ 10 ರಂದು ಪ್ರೊ.ಕೆ.ಎಸ್.ರಂಗಪ್ಪ ಅವರು ಕುಲಪತಿ ಸ್ಥಾನದಿಂದ ನಿರ್ಗಮಿಸಿದ ನಂತರ ಈವರೆಗೂ ಪೂರ್ಣಾವಧಿ ಕುಲಪತಿಗಳು ನೇಮಕವಾಗದಿರುವುದು ಬೇಸರದ ಸಂಗತಿಯಾಗಿದೆ
ಪ್ರೊ. ನಿಂಗಮ್ಮ ಸಿ. ಬೆಟ್ಸೂರ್ ಅವರ ಅವಧಿಯು ಮೇ 26ರಂದು ಕೊನೆಗೊಳ್ಳುವುದರಿಂದ ನಾವು ಈಗಾಗಲೇ ಸೇವಾ ಹಿರಿತನದಂತೆ ವಿಶ್ವವಿದ್ಯಾನಿಲಯದ ಐವರು ಡೀನ್‍ಗಳ ಹೆಸರನ್ನು ಪಟ್ಟಿ ಮಾಡಿ ರಾಜ್ಯಪಾಲರ ಕಚೇರಿಗೆ ಕಳುಹಿಸಿದ್ದೇವೆ. ಅಂದು ನೂತನ ಹಂಗಾಮಿ ಕುಲಪತಿಗಳನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ರಿಜಿಸ್ಟ್ರಾರ್ ಡಿ.ಭಾರತಿ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಪ್ರೊ.ಟಿ.ಕೆ.ಉಮೇಶ್ ಅವರು ಸೀನಿಯರ್ ಆಗಿರುವುದರಿಂದ ಐವರ ಪೈಕಿ ಅವರ ಹೆಸರು ಮೊದಲ ಸಾಲಿನಲ್ಲಿದೆ. ಹಾಗೂ ಮಾಜಿ ಹಂಗಾಮಿ ಕುಲಪತಿ ಪ್ರೊ. ಸಿ. ಬಸವರಾಜು ಅವರ ಹೆಸರೂ ತಾವು ಕಳುಹಿಸಿರುವ ಡೀನ್‍ಗಳ ಪಟ್ಟಿಯಲ್ಲಿದೆ ಎಂದು ಭಾರತಿ ಅವರು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದರು.
ಪ್ರೊ.ಉಮೇಶ್ ಅವರ ಡೀನ್ ಅವಧಿ 2018ರ ಸೆಪ್ಟೆಂಬರ್ ಮಾಹೆಯಲ್ಲಿ ಅಂತ್ಯಗೊಳ್ಳಲಿದೆ. ಪೂರ್ಣವಧಿ ಕುಲಪತಿಗಳ ನೇಮಕವಾಗಬೇಕಾದರೆ ಶೋಧನಾ ಸಮಿತಿ ಸದಸ್ಯರು ಮತ್ತೊಮ್ಮೆ ಸಭೆ ನಡೆಸಿ ಸರ್ಕಾರದ ಮೂಲಕ ರಾಜ್ಯಪಾಲರಿಗೆ ವರದಿ ಸಲ್ಲಿಸಬೇಕಾಗಿದೆ.

ಒತ್ತಾಯ: ವಿಶ್ವವಿದ್ಯಾನಿಲಯಕ್ಕೆ ಪೂರ್ಣಾವಧಿ ಕುಲಪತಿಗಳನ್ನು ನೇಮಿಸುವಂತೆ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘದ ಅಧ್ಯಕ್ಷ ಡಿ.ಮಹದೇವಸ್ವಾಮಿ ಅವರು. ಕಳೆದ 5 ವರ್ಷ ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ನಡೆಸಿದರೂ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪೂರ್ಣಾವಧಿ ಕುಲಪತಿ ನೇಮಕ ಆಗದಿರುವುದರಿಂದ ಆಡಳಿತ ಕುಂಠಿತವಾಗಿದೆ ಎಂದಿದ್ದಾರೆ.

ಈಗಲಾದರೂ ಹೊಸ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸಿ, ಪೂರ್ಣಾವಧಿಗೆ ಕುಲಪತಿಗಳನ್ನು ನೇಮಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

Translate »