ಒಣಗಿರುವ ಮರಗಳ ತೆರವು ಕಾರ್ಯಾಚರಣೆ ಆರಂಭ
ಮೈಸೂರು

ಒಣಗಿರುವ ಮರಗಳ ತೆರವು ಕಾರ್ಯಾಚರಣೆ ಆರಂಭ

May 25, 2018

ಮೈಸೂರು:  ಒಣಗಿರುವ ಅಪಾಯಕಾರಿ ಮರಗಳು ಹಾಗೂ ಕೊಂಬೆಗಳ ತೆರವಿಗೆ ಮೈಸೂರು ನಗರ ಪಾಲಿಕೆ ಕಾರ್ಯಾಚರಣೆ ಆರಂಭಿಸಿದೆ.

ಕಳೆದ ನಾಲ್ಕೈದು ದಿನಗಳಿಂದ ಗಾಳಿ-ಮಳೆಗೆ ಮರಗಳು ಉರುಳಿ ಬೀಳುತ್ತಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆ ಒಣಗಿರುವ ಮರಗಳು ಹಾಗೂ ಕೊಂಬೆಗಳನ್ನು ತೆರವು ಗೊಳಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಹಾಗೆಯೇ ನೀಲಗಿರಿ ರಸ್ತೆ, ಅರಮನೆ ಕಡೆಯ ಫುಟ್‍ಪಾತ್‍ಗೆ ಹೊಂದಿಕೊಂಡಂತಿದ್ದ ಭಾರೀ ಗಾತ್ರದ ಮರವೊಂದನ್ನು ಗುರುವಾರ ತೆರವು ಗೊಳಿಸಲಾಯಿತು. ನಗರ ಪಾಲಿಕೆ ತೋಟ ಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಮುರುಳೀಧರ ಅವರ ನೇತೃತ್ವದಲ್ಲಿ ಇಂದು ಜೆಸಿಬಿ ಯಂತ್ರ, ಹತ್ತಾರು ಕಾರ್ಮಿಕರ ಸಹ ಕಾರದೊಂದಿಗೆ ಮರವನ್ನು ಕತ್ತರಿಸಲಾ ಯಿತು. ಈ ಬಗ್ಗೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಮುರುಳೀಧರ ಅವರು, ಸುಮಾರು 75 ವರ್ಷಕ್ಕೂ ಹಿಂದಿನ ಮರವಾ ಗಿದ್ದು, ಸಂಪೂರ್ಣವಾಗಿ ದುರ್ಬಲವಾಗಿತ್ತು. ಯಾವ ಸಂದರ್ಭದಲ್ಲಾದರೂ ಉರುಳಿ ಬೀಳಬಹುದಾದ ದುಸ್ಥಿತಿಯಲ್ಲಿತ್ತು. ಆದ್ದ ರಿಂದ ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಇಂದು ಬೆಳಿಗ್ಗೆಯಿಂದ ಸಂಜೆವರೆಗೂ ಪೊಲೀಸರ ಸಹಕಾರದಿಂದ ಸಂಚಾರ ನಿರ್ಬಂಧಿಸಿ, ಕಾರ್ಯಾಚರಣೆ ನಡೆಸಿ, ಮರವನ್ನು ತೆರವು ಮಾಡಿದ್ದೇವೆ. ಇದಕ್ಕೆ ಸಮೀಪದ ಮತ್ತೊಂದು ಮರದಲ್ಲಿ ಒಣಗಿದ್ದ ಭಾರೀ ಗಾತ್ರದ ಕೊಂಬೆಯನ್ನೂ ಕತ್ತರಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿಯನ್ನೂ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

ಒಂದು ಸಣ್ಣ ಕೊಂಬೆ ಕತ್ತರಿಸುವುದಕ್ಕೂ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯ ಬೇಕಿದೆ. ನಾವು ಅರ್ಜಿ ಹಾಕುವುದರಿಂದ ಆರಂಭಿಸಿ ಈ ಸಂಬಂಧ ಪ್ರಕ್ರಿಯೆ ಪೂರ್ಣ ಗೊಂಡು ಅನುಮತಿ ದೊರಕುವುದಕ್ಕೆ ಸಾಕಷ್ಟು ಸಮಯಾವಕಾಶ ಬೇಕಾಗುತ್ತದೆ. ಇನ್ನೂ ಸುಮಾರು 50ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇವೆ. ಈ ಕಾರಣದಿಂದಾಗಿ ಒಣಗಿರುವ ಮರಗಳ ತೆರವು ಕಾರ್ಯವೂ ವಿಳಂಬ ವಾಗುತ್ತಿದೆ. ಈಗಾಗಲೇ ಸಿದ್ದಾರ್ಥ ಬಡಾ ವಣೆಯಲ್ಲಿ ಒಣಗಿದ್ದ ಅನೇಕ ಕೊಂಬೆಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆದೇ ಕತ್ತರಿಸಲಾಗಿದೆ. ಇಂದಿನಿಂದ ನೀಲಗಿರಿ ರಸ್ತೆಯ ಮರಗಳಲ್ಲಿರುವ ಒಣ ಕೊಂಬೆ ಗಳನ್ನು ತೆರವು ಮಾಡುವ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ನಿನ್ನೆಯೂ ಅರಣ್ಯ ಭವನಕ್ಕೆ ಹೋಗಿ ಅಧಿಕಾರಿಗಳ ಭೇಟಿ ಮಾಡಿದ್ದೇನೆ. ಅರ್ಜಿ ಹಾಕಿಕೊಂಡು ಅನುಮತಿಗೆ ಕಾಯ್ದು ಕುಳಿತು ಕೊಂಡರೆ ಸಮಯ ವ್ಯರ್ಥವಾಗುತ್ತದೆ. ನೀವೇ ಸ್ಥಳಕ್ಕೆ ಬಂದು ಅಪಾಯಕಾರಿ ಮರ ಗಳ ತೆರವಿಗೆ ಅನುವು ಮಾಡಿಕೊಡಬೇಕು. ಇಲ್ಲವಾದರೆ ಗಾಳಿ ಮಳೆಗೆ ಕೊಂಬೆಗಳು ಮುರಿದು ಬಿದ್ದು ಅನಾಹುತ ಸಂಭವಿಸ ಬಹುದು ಎಂದು ತಿಳಿಸಿದ್ದೇನೆಂದು ಹೇಳಿದ ಮುರುಳೀಧರ ಅವರು, ಮೊದಲ ಹಂತದಲ್ಲಿ ನೀಲಗಿರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಹಾಗೂ ನಂತರದಲ್ಲಿ ವಸತಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಗಾಳಿ-ಮಳೆಯಿಂದಾಗಿ ಮೈಸೂ ರಿನಲ್ಲಿ 1 ವಾರದಿಂದ ಪ್ರತಿನಿತ್ಯ ಮರಗಳು ಉರುಳಿ ಬೀಳುತ್ತಿವೆ. ಮೇ 21ರಂದು ಕೆಆರ್‍ಎಸ್ ರಸ್ತೆಯಲ್ಲಿ ಇಎಸ್‍ಐ ಆಸ್ಪತ್ರೆ ಸಮೀಪ ಮರವೊಂದು ಆಟೋ ಮೇಲೆ ಉರುಳಿ ಬಿದ್ದು, ಚೆನ್ನೈನ ಯುವತಿ ರೇವತಿ ಅವರು ಮೃತಪಟ್ಟು, ಇನ್ನಿಬ್ಬರು ಗಾಯ ಗೊಂಡಿದ್ದಾರೆ. ಈ ದುರಂತದ ನಂತರವೂ ಮರಗಳು ಬಿದ್ದಿವೆ. ಈ ಸಂಬಂಧ `ಮೈಸೂರು ಮಿತ್ರ’ನ ಇಂದಿನ ಸಂಚಿಕೆಯಲ್ಲಿ ‘ಮೈಸೂರಲ್ಲಿ ವಿವಿಧೆಡೆ ಅನಾಹುತಕ್ಕೆ ಕಾದಿವೆ ದುರ್ಬಲ ಮರಗಳು’ ಶೀರ್ಷಿಕೆ ಯಡಿ ವರದಿ ಪ್ರಕಟಿಸಿ, ತುರ್ತು ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ನಗರ ಪಾಲಿಕೆಯ ಗಮನ ಸೆಳೆಯಲಾಗಿತ್ತು. ಪರಿಣಾಮ ಇಂದಿನಿಂದ ಒಣ ಮರಗಳು ಹಾಗೂ ಕೊಂಬೆಗಳ ಕಾರ್ಯಾಚರಣೆ ಯನ್ನು ಚುರುಕುಗೊಳಿಸಲಾಗಿದೆ. ಅಪಾಯದ ಬಗ್ಗೆ ಅರಿವಿರುವ ಅರಣ್ಯ ಇಲಾಖೆ ಅಧಿಕಾರಿ ಗಳೂ ಪಾಲಿಕೆಯೊಂದಿಗೆ ಸಹಕರಿಸುತ್ತಿದ್ದಾರೆ.

Translate »