ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ  ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವ
ಮೈಸೂರು

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ  ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವ

May 25, 2018

ಮೈಸೂರು:  ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಸಪ್ತರ್ಷಿ ಸರೋವರ ಕೊಳದಲ್ಲಿ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವವು ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಗುರುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.

ಗುರುವಾರ ಸಂಜೆ 6.30ರ ವೇಳೆಗೆ ದೇವಸ್ಥಾನದಿಂದ ಹೊರಟ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ 6.45ರ ವೇಳೆಗೆ ಸಪ್ತರ್ಷಿ ಸರೋವರ ಕೊಳದ ಅಂಗಳಕ್ಕೆ ತರಲಾಯಿತು. ನಂತರ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಪೂಜೆ ಮತ್ತು ಮಹಾಮಂಗಳಾರತಿ ಮಾಡಲಾಯಿತು. ನಂತರ 7 ಗಂಟೆಗೆ ಹೂವು, ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಹಂಸದ ಮಾದರಿಯಲ್ಲಿದ್ದ ತೆಪ್ಪದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ಸಪ್ತರ್ಷಿ ಸರೋವರ ಕೊಳವನ್ನು 10 ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು. ಈ ವೇಳೆ ಸ್ವಾಮೀಜಿ ಅವರು ಕ್ಷೇತ್ರದ ವಿಶಿಷ್ಟ ಮತ್ತು ಮಹಿಮೆಗಳ ಕುರಿತು ವಿವರಿಸಿದರು.

ಈ ವೇಳೆ ಭಕ್ತರು ದತ್ತ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ಪುಳಕಿತರಾದರೆ, ಮತ್ತೆ ಕೆಲವರು ದೇವರ ಭಜನೆ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಪ್ರದಕ್ಷಿಣೆ ಹಾಕಿದ ನಂತರ ಶ್ರೀ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ತೆಪ್ಪದಿಂದ ತಂದು ವಾದ್ಯ ಮೇಳದೊಂದಿಗೆ ಪಲ್ಲಕ್ಕಿಯಲ್ಲಿ ಕೂರಿಸಲಾಯಿತು. ಅಲ್ಲಿಂದ ಹೊರಟ ಪಲ್ಲಕ್ಕಿ ಉತ್ಸವದ ಮೆರವಣ ಗೆ ದೇವಸ್ಥಾನ ತಲುಪಿತು. ಈ ವೇಳೆ ದೇಶ-ವಿದೇಶಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸೇರಿದಂತೆ ಅವರ ಶಿಷ್ಯರು ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದರು. ನಾಳೆ(ಮೇ 25) ಬೆಳಿಗ್ಗೆ 8 ಗಂಟೆಗೆ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿಗೆ ಬ್ರಹ್ಮೋತ್ಸವ ಅಭಿಷೇಕ, ಸಂಜೆ 6.30ಕ್ಕೆ ವಿದ್ವಾನ್ ಮೈಸೂರು ನಾಗರಾಜ್ ಮತ್ತು ಅಭಿಷೇಕ್ ರಾಘವನ್ ಅವರಿಂದ ಕರ್ನಾಟಕ ಸಂಗೀತ. ಮೇ 26ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಸ್ವಾಮೀಜಿಯವರ 76ನೇ ಜನ್ಮ ದಿನೋತ್ಸವ, 10 ಗಂಟೆಗೆ ಅಖಿಲ ಭಾರತ ಜ್ಞಾನಬೋಧ ಸಭಾ ವಾರ್ಷಿಕ ಸಮ್ಮೇಳನ, ಸಂಜೆ 6.30ಕ್ಕೆ ಶ್ರೀ ಸ್ವಾಮೀಜಿ ಅವರಿಂದ ದಿವ್ಯನಾಮ ಸಂಕೀರ್ತನೆ.

27ರಂದು ಬೆಳಿಗ್ಗೆ 9 ಗಂಟೆಗೆ ಅಂಗವಿಕಲರಿಗೆ ಸಹಾಯ ವಸ್ತುಗಳ ವಿತರಣೆ, ಭಕ್ತರಿಂದ ಸಮರ್ಪಣೆ, ಸಂಜೆ 6.30ಕ್ಕೆ ಸಂಪೂರ್ಣ ಭಗವದ್ಗೀತೆ ಪಾರಾಯಣ ನಡೆಯಲಿದೆ.

ಮೈಸೂರು ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿರುವ ಸಪ್ತರ್ಷಿ ಸರೋವರ ಕೊಳದಲ್ಲಿ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.

Translate »