ಮೈಸೂರಿಗರ ಬಾಯಾರಿಕೆ ನೀಗಲು ಸ್ಥಾಪನೆಯಾಗುತ್ತಿವೆ 15 ಶುದ್ಧ ಕುಡಿಯವ ನೀರು ಘಟಕ
ಮೈಸೂರು

ಮೈಸೂರಿಗರ ಬಾಯಾರಿಕೆ ನೀಗಲು ಸ್ಥಾಪನೆಯಾಗುತ್ತಿವೆ 15 ಶುದ್ಧ ಕುಡಿಯವ ನೀರು ಘಟಕ

May 25, 2018

ಮೈಸೂರು: ಮೈಸೂರು ನಗರದ ನಾಗರಿಕರ ಬಾಯಾರಿಕೆ ನೀಗಿಸಲು ಈಗಾಗಲೇ 13 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದೀಗ ಇನ್ನು 15 ಘಟಕಗಳನ್ನು ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಮೈಸೂರು ನಗರದಲ್ಲಿ ಮಹಾನಗರ ಪಾಲಿಕೆ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳ ಬಳಕೆಯಲ್ಲಿ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 5 ರೂ.ಗಳ ಚಿನ್ನದ ಬಣ್ಣ ಲೇಪನದ ನಾಣ್ಯವನ್ನು ಹಾಕಿದರೆ, 20 ಲೀಟರ್ ಶುದ್ಧ ಕುಡಿಯುವ ನೀರು ದೊರೆಯಲಿದೆ.

ಮೈಸೂರು ನಗರದ ಯಾವ ಭಾಗಗಳಲ್ಲಿ ಬೇಸಿಗೆ ವೇಳೆ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಾರೆ ಎಂಬುದರ ಆಧಾರದಲ್ಲಿ ಘಟಕಗಳನ್ನು ಆರಂಭಿಸಲಾಯಿತು. ವಿಶೇಷವಾಗಿ ಕಾರ್ಮಿಕ ವರ್ಗದ ವಸತಿ ಪ್ರದೇಶ ಹಾಗೂ ವಿದ್ಯಾರ್ಥಿನಿಲಯಗಳ ಸಮೀಪದಲ್ಲಿ ಈ ಘಟಕಗಳನ್ನು ಸ್ಥಾಪಿಸಿ ಕುಡಿಯುವ ನೀರಿನ ಬವಣೆಗೆ ಸ್ಪಂದಿಸಲಾಯಿತು. ಕಳೆದ ವರ್ಷದ ಈ ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಹಿಂದೆ 20 ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಕ್ಯಾನ್‍ಗಳನ್ನು ಖರೀದಿ ಮಾಡಿದ್ದವರು ಇದೀಗ ಈ ಘಟಕಗಳನ್ನೇ ಅವಲಂಭಿಸಿದ್ದಾರೆ.

ಇಂತಹ ವ್ಯವಸ್ಥೆಯನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳುತ್ತಿದ್ದು, ಇದೀಗ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ 10 ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ 5 ಘಟಕಗಳ ಸ್ಥಾಪನೆ ಮಾಡುವ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಈ ಘಟಕಗಳ ಕಾಮಗಾರಿ ಪ್ರಗತಿಯಲ್ಲಿವೆ. ಸುಮಾರು 15 ದಿನಗಳಲ್ಲಿ ನಾಲ್ಕು ಘಟಕಗಳು ಸಿದ್ಧಗೊಳ್ಳುವ ಸಾಧ್ಯತೆ ಇದೆ. ಇವುಗಳನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸ್ಥಾಪಿಸಲಾಗುತ್ತಿದೆ.

ಈಗಾಗಲೇ ನಗರದ ವಿವಿಧ ಭಾಗಗಳಲ್ಲಿ 14ನೇ ಹಣಕಾಸು ಆಯೋಗದ ಅನುದಾನದಡಿ ಸ್ಥಾಪನೆಗೊಂಡಿರುವ 13 ಘಟಕಗಳ ನಿರ್ವಹಣೆಯನ್ನು ಟೆಂಡರ್ ಮೂಲಕ ಗುತ್ತಿಗೆಗೆ ನೀಡಲಾಗಿದೆ. ಲಕ್ಷ್ಮೀಪುರಂ, ಕೃಷ್ಣಮೂರ್ತಿಪುರಂ, ಅಶೋಕಪುರಂ, ಸರಸ್ವತಿಪುರಂ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಈ 13 ಘಟಕಗಳು ಕಾರ್ಯಾಚರಣೆಯಲ್ಲಿವೆ. 7 ಘಟಕಗಳನ್ನು `ಆಕ್ವಾ ಟೆಕ್ ಆಫ್ ಮೈಸೂರು’ ಹಾಗೂ ಉಳಿದವುಗಳನ್ನು ಹಾಸನ ಮೂಲದ ಏಜೆನ್ಸಿ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ. ಪ್ರತಿ ಘಟಕದ ಸ್ಥಾಪನೆಗೆ ಸುಮಾರು 7 ಲಕ್ಷ ರೂ. ವೆಚ್ಚವಾಗಲಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಸಾರ್ವಜನಿಕ ವಲಯದಿಂದ ಭಾರೀ ಬೇಡಿಕೆ ವ್ಯಕ್ತವಾಗುತ್ತಿತ್ತು. ಇದೀಗ ನೂತನವಾಗಿ 15 ಘಟಕಗಳ ಸ್ಥಾಪನೆಯಿಂದ ಮೈಸೂರಿಗರ ಶುದ್ಧ ಕುಡಿಯುವ ನೀರಿನ ಬವಣೆ ಮತ್ತಷ್ಟು ನೀಗಲಿದೆ.

ಎನ್‍ಜಿಓಗಳಿಗೆ ಆಹ್ವಾನ: ‘ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ಕಾರ್ಯಕ್ರಮದಡಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಓಸಿ) ವತಿಯಿಂದ ಮೈಸೂರು ನಗರದಲ್ಲಿ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ ಪಾಲಿಕೆಯು ನಿವೇಶನ ಒದಗಿಸಿದ್ದು, ಉಳಿದಂತೆ ಎಲ್ಲಾ ಬಂಡವಾಳ ಹಾಗೂ ನಿರ್ವಹಣೆ ಸದರಿ ಕಂಪನಿಯ ಉಸ್ತುವಾರಿಯಲ್ಲೇ ಇದೆ. ಇದೇ ಮಾದರಿಯಲ್ಲಿ ಎನ್‍ಜಿಓಗಳಿಗೆ ಘಟಕ ತೆರೆದು ನಿರ್ವಹಣೆ ವಹಿಸುವ ಆಲೋಚನೆ ಇದ್ದು, ಸದ್ಯ ಪಾಲಿಕೆ ಕೌನ್ಸಿಲ್‍ನಲ್ಲಿ ಈ ವಿಷಯ ಪ್ರಸ್ತಾಪಿಸಬೇಕಿದೆ’ ಎಂದು ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ (ನೀರು ಸರಬರಾಜು) ಎಲ್.ಎನ್.ಆನಂದ್ ತಿಳಿಸಿದರು.
`ಈಗಾಗಲೇ ಕಾರ್ಯಾಚರಣೆಯಲ್ಲಿರುವ 13 ಘಟಕಗಳ ನಿರ್ವಹಣೆ ಹೊಣೆ ಹೊತ್ತಿರುವ ಕಂಪನಿಗಳು, ಘಟಕದ ತಾಂತ್ರಿಕ ನಿರ್ವಹಣೆ, ಕಾವಲು ಸಿಬ್ಬಂದಿ ಸೇರಿದಂತೆ ಅಗತ್ಯವಿರುವ ಎಲ್ಲಾ ಮಾನವ ಸಂಪನ್ಮೂಲ ನಿಯೋಜಿಸುವ ಜವಾಬ್ದಾರಿ ನಿರ್ವಹಿಸುತ್ತಿದೆ. ಹೀಗಾಗಿ ಸಂದಾಯವಾಗುವ ನಾಣ್ಯಗಳನ್ನು ಅವರೇ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ’ ಎಂದು ಎಲ್.ಎನ್.ಆನಂದ್ ತಿಳಿಸಿದರು.

ಎಲ್ಲೆಲ್ಲಿ ಆಗುತ್ತಿವೇ ನೂತನ ಘಟಕಗಳು…
ಚಾಮರಾಜ ವಿಧಾನಸಭಾ ಕ್ಷೇತ್ರ
1. ವಾರ್ಡ್ 29, ಕರಕುಶಲನಗರ.
2. ವಾರ್ಡ್ 64, ನಜರ್‍ಬಾದ್.
3. ವಾರ್ಡ್ 33, ಪಡುವಾರಹಳ್ಳಿ ಮಾರಮ್ಮನ ಗುಡಿ
4. ವಾರ್ಡ್ 33, ಪಡುವಾರಹಳ್ಳಿ ಎಕೆ ಕಾಲೋನಿ.
5. ವಾರ್ಡ್ 23, ಗಂಗೋತ್ರಿ ಬಡಾವಣೆ.
6. ವಾರ್ಡ್ 32, ವಿವಿ ಮೊಹಲ್ಲಾ.
7. ವಾರ್ಡ್ 26, ಹೆಬ್ಬಾಳ.
8. ವಾರ್ಡ್ 39, ಸರ್ಕಾರಿ ಪ್ರೌಢಶಾಲೆ
9. ವಾರ್ಡ್ 28, ತ್ರಿನೇತ್ರ ವೃತ್ತ.
10. ವಾರ್ಡ್ 30, ಮಂಜುನಾಥಪುರ.

ನರಸಿಂಹರಾಜ ವಿಧಾನಸಭಾ ಕ್ಷೇತ್ರ
1. ವಾರ್ಡ್ 46, ಕೆಸರೆ ಪಾರ್ಕ್.
2. ವಾರ್ಡ್ 52, ಉದಯಗಿರಿ ಪಾರ್ಕ್.
3. ವಾರ್ಡ್ 53, ರಾಜೀವ್‍ನಗರ.
4. ವಾರ್ಡ್ 62, ಗಾಯತ್ರಿಪುಂ.
5. ವಾರ್ಡ್ 55, 56 ಹಾಗೂ 57, ತ್ರಿವೇಣ ವೃತ್ತ (ಮೂರು ವಾರ್ಡಿಗೂ ಅನುಕೂಲವಾಗುಂತೆ).

ಮೈಸೂರಿನ ಸರಸ್ವತಿಪುರಂನ ಮೈಸೂರು ವಿವಿ ಈಜುಕೋಳದ ಸಮೀಪವಿರುವ ಮೈಸೂರು ಮಹಾನಗರ ಪಾಲಿಕೆಯ ಶುದ್ಧ ಕುಡಿಯುವ ನೀರಿನ ಘಟಕ.

Translate »