ಸಾರ್ಥಕತೆ ಇಲ್ಲದ ರೈತ ಸಂತೆಗಳು: ಸಾರ್ವಜನಿಕರ ತೆರಿಗೆ ಹಣ ಹೀಗೂ ಪೋಲಾಗುತ್ತಿದೆ…
ಮೈಸೂರು

ಸಾರ್ಥಕತೆ ಇಲ್ಲದ ರೈತ ಸಂತೆಗಳು: ಸಾರ್ವಜನಿಕರ ತೆರಿಗೆ ಹಣ ಹೀಗೂ ಪೋಲಾಗುತ್ತಿದೆ…

May 25, 2018

ಮೈಸೂರು: ಕಟ್ಟಿ ನಿಲ್ಲಿಸಿ ಉದ್ಘಾಟಿಸುವುದಕ್ಕೆ ಎಲ್ಲಿಲ್ಲದ ಉತ್ಸಾಹ. ಬಳಸಿಕೊಳ್ಳಲೇಕೊ ನಿರುತ್ಸಾಹ! ಇದರ ಪರಿಣಾಮ ಲಕ್ಷಾಂತರ ಹಣ ವ್ಯಯಿಸಿ ನಿರ್ಮಿಸಿದ ಕಟ್ಟಡಗಳು ಹಾಳು ಕೊಂಪೆಗಳಾಗುತ್ತಿವೆಯೇ ಹೊರತು ಬಳಕೆಗೆ ಮಾತ್ರ ಬಾರದಾಗಿವೆ.

ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ರೈತ ಸಂತೆ ಕಟ್ಟಡ ಸೇರಿದಂತೆ ಮೈಸೂರು ನಗರದ ವಿವಿಧ ಭಾಗಗಳಲ್ಲಿ ನಿರ್ಮಿಸಿರುವ ಕಿರು ಮಾರುಕಟ್ಟೆಗಳು ಹಲವು ವರ್ಷಗಳಿಂದ ಪ್ರಯೋಜನಕ್ಕೆ ಬಾರದಾಗಿವೆ. ಇದಕ್ಕೆ ಕಾರಣ, ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ನಿರ್ಲಕ್ಷ್ಯ ಎಂಬುದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪ.

ರೈತ ಸಂತೆ ಕಟ್ಟಡ ಸೇರಿದಂತೆ 9 ಕಿರು ಮಾರುಕಟ್ಟೆಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಕೋಟಿ ಕೋಟಿ ಹಣ ಸುರಿದು ನಿರ್ಮಿಸಲಾಗಿದ್ದು, ರೈತ ಸಂತೆ ಕಟ್ಟಡ ಹೊರತಾಗಿ ಉಳಿದೆಲ್ಲಾ ಕಿರು ಮಾರುಕಟ್ಟೆಗಳು ಬಳಕೆಗೆ ಬರುವ ಮುನ್ನವೇ ಅವಸಾನದತ್ತ ಸಾಗಿವೆ. ಹೆಬ್ಬಾಳು 1ನೇ ಹಂತದ ಎಸ್‍ಬಿಐ ಮುಖ್ಯ ರಸ್ತೆಯಲ್ಲಿರುವ ಕಿರು ಮಾರುಕಟ್ಟೆಯಲ್ಲಿ ಮುಡಾದಿಂದ ಬಾಡಿಗೆ ಪಡೆದು ಒಂದೆರಡು ಮಳಿಗೆಗಳು ಮಾತ್ರ ವಹಿವಾಟು ನಡೆಸುತ್ತಿವೆ. ಇದನ್ನು ಬಿಟ್ಟರೆ, ಉಳಿದ ಬಹುತೇಕ ಕಿರು ಮಾರುಕಟ್ಟೆಗಳು ವ್ಯರ್ಥವಾಗಿ ನಿಂತಿವೆ.

ನಿರ್ಮಾಣಗೊಂಡು ದಶಕವನ್ನೇ ಪೂರೈಸುತ್ತಿರುವ ವಿಜಯನಗರ 2ನೇ ಹಂತದಲ್ಲಿ ರೈತ ಸಂತೆ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಉಪಯೋಗಕ್ಕೆ ಬಂದಿಲ್ಲ. ಲಕ್ಷಾಂತರ ಹಣ ವೆಚ್ಚ ಮಾಡಿ ನಿರ್ಮಿಸಿರುವ ಈ ಕಟ್ಟಡ ವಿಶಾಲ ಆವರಣದೊಂದಿಗೆ ಸುಸಜ್ಜಿತ ಕಟ್ಟಡ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯ ಒಳಗೊಂಡಿದೆ. ಸದ್ಯ ಕಾವಲುಗಾರರ ನೇಮಕದ ವ್ಯವಸ್ಥೆ ಇರುವ ಹಿನ್ನೆಲೆಯಲ್ಲಿ ಯಾವುದೇ ಅನೈತಿಕ ಚುಟುವಟಿಕೆಯ ಆತಂಕ ಇಲ್ಲವೆಂಬುದಷ್ಟೇ ಸಮಾಧಾನದ ಸಂಗತಿ.

2017ರ ಜು.15ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡ ರೈತ ಸಂತೆ ಕಟ್ಟಡ, ಪ್ರತಿ ಭಾನುವಾರ ರೈತರು/ಉತ್ಪಾದಕರಿಂದ ಗ್ರಾಹಕರಿಗೆ ಸರಕುಗಳ ನೇರ ಮಾರಾಟ ವ್ಯವಸ್ಥೆ ಕೈಗೊಳ್ಳುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶ ಹೊಂದಲಾಗಿತ್ತು. ಈ ಹಿನ್ನೆಲೆಯಲ್ಲಿ ಎಪಿಎಂಸಿಗೆ ಮುಡಾದಿಂದ ಮಾಸಿಕ 70 ಸಾವಿರ ರೂ.ಗೆ ಬಾಡಿಗೆಗೆ ನೀಡಲಾಗಿತ್ತು. ಉದ್ಘಾಟನೆ ಭಾಗ್ಯ ಸಿಕ್ಕಿದ ಬಳಿಕ ಒಂದಿಷ್ಟು ದಿನಗಳ ಕಾಲ ಕೆಲ ಮಂದಿ ಇಲ್ಲಿ ವ್ಯಾಪಾರ ವಹಿವಾಟು ನಡೆಸಿದರಾದರೂ ಅನಂತರ ಕಟ್ಟಡದತ್ತ ಯಾರೂ ಸುಳಿಯಲೇ ಇಲ್ಲ.

ಇದು ರೈತ ಸಂತೆ ಮಾರುಕಟ್ಟೆಯ ಕಥೆಯಾದರೆ, ಕಿರು ಮಾರುಕಟ್ಟೆಗಳ ವ್ಯಥೆ ಹೇಳತೀರದು. ಮುಡಾ ನಿರ್ಮಿಸಿರುವ 9 ಕಿರು ಮಾರುಕಟ್ಟೆಗಳಲ್ಲಿ ಬಹುತೇಕ ಮಾರುಕಟ್ಟೆಗಳು ನಿರುಪಯುಕ್ತವಾಗಿ ನಿಂತಿವೆ. ಒಂದಂತೂ ಬಳಕೆಗೆ ಬಾರದೇ ನೆಲಕ್ಕುರುಳಿದ್ದೂ ಆಗಿದೆ. ಉಳಿದವುಗಳಲ್ಲಿ ಆರ್‍ಸಿಸಿ ಛಾವಣ ಗಳು ಉದುರುತ್ತಿದ್ದರೆ, ಆವರಣದಲ್ಲೆಲ್ಲಾ ಗಿಡಗಂಟಿಗಳು ಬೆಳೆದು ನಿಂತಿವೆ. ಪೊದೆಗಳು ಬೆಳೆದು ಹಾವು ಚೇಳುಗಳ ವಾಸ ಸ್ಥಳವಾಗಿ ಪರಿಣಮಿಸಿವೆ. ಮಾರುಕಟ್ಟೆ ನಿರುಪಯುಕ್ತದ ಮಾತು ಒತ್ತಟ್ಟಿಗಿರಲಿ, ಸ್ಥಳೀಯ ನಿವಾಸಿಗಳಿಗೆ ಇಲ್ಲಿ ನಡೆಯುವ ಅನೈತಿಕ ಚುಟುವಟಿಕೆಗಳು ಮುಜುಗರ ಉಂಟು ಮಾಡುತ್ತಿವೆ. ಹೆಂಡ ಕುಡುಕರ ಮೋಜಿನ ತಾಣವಾಗಿರುವ ಈ ಮಾರುಕಟ್ಟೆಗಳ ಆವರಣದಲ್ಲಿ ಮದ್ಯದ ಬಾಟಲುಗಳು, ಸಿಗರೇಟು ತುಂಡುಗಳು ಚೆಲ್ಲಾಡುತ್ತಿವೆ. ಮಾರುಕಟ್ಟೆಗಾಗಿ ನಿರ್ಮಿಸಿರುವ ಶೌಚಾಲಯ ಕೊಠಡಿಗಳು ಅಧೋಗತಿಗೆ ತಲುಪಿವೆ.

ರೈತ ಸಂತೆ ಸೇರಿದಂತೆ ಎಲ್ಲಾ ಕಿರು ಮಾರುಕಟ್ಟೆಗಳನ್ನು ಈ ಹಿಂದೆ ಒಳ್ಳೆಯ ಉದ್ದೇಶದೊಂದಿಗೆ ಮುಡಾದಿಂದ ನಿರ್ಮಿಸಲಾಗಿದೆ. ಯಾವ ಕಾರಣಕ್ಕೆ ಇವುಗಳು ಬಳಕೆಗೆ ಬರಲು ಸಾಧ್ಯವಾಗಿಲ್ಲ ಎಂಬುದನ್ನು ಪರಿಶೀಲಿಸಲಾಗುವುದು. ಆ ಬಳಿಕ ಮಾರುಕಟ್ಟೆಗಳ ಸರ್ವೇ ಮಾಡಿಸಿ ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
-ಕಾಂತರಾಜು, ಮುಡಾ ಆಯುಕ್ತರು.

ಹೆಬ್ಬಾಳು 1ನೇ ಹಂತದ ಎಸ್‍ಬಿಐ ಮುಖ್ಯ ರಸ್ತೆಯ ಕಿರು ಮಾರುಕಟ್ಟೆ: ಈ ಮಾರುಕಟ್ಟೆ ಸದ್ಯ ಒಂದಿಷ್ಟು ಪ್ರಯೋಜನಕ್ಕೆ ಬಂದಿದೆ ಎಂಬುದೊಂದೇ ಸಮಾಧಾನದ ಸಂಗತಿ. ಕಾರಣ ಒಂದೆರಡು ಅಂಕಣಗಳನ್ನು ಕೆಲವರು ಮುಡಾದಿಂದ ಬಾಡಿಗೆ ಪಡೆದು ಹಣ್ಣು-ತರಕಾರಿ ವ್ಯಾಪಾರ ನಡೆಸಿ ಜೀವನ ದೂಡುತ್ತಿದ್ದಾರೆ. ಇದನ್ನು ಬಿಟ್ಟರೆ ಮಾರುಕಟ್ಟೆಯ ಭಾಗಶಃ ಆವರಣ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ವಾಹನಗಳ ನಿಲುಗಡೆ, ನಿರುಪಯುಕ್ತ ವಸ್ತುಗಳ ದಾಸ್ತಾನಿಗೆ ಆವರಣ ಮೀಸಲಾಗಿದೆ.

ವಿಜಯನಗರ 2ನೇ ಹಂತದ ಗಣಪತಿ ದೇವಸ್ಥಾನದ ಸಮೀಪದ ಕಿರು ಮಾರುಕಟ್ಟೆ: ಈ ಮಾರುಕಟ್ಟೆಯ ಸ್ಥಿತಿ ಬಹುತೇಕ ಹದಗೆಟ್ಟಿದ್ದು, ಗಿಡ-ಗಂಟಿಗಳು ಹೇರಳವಾಗಿ ಬೆಳೆದು ನಿಂತಿವೆ. ಮಾರುಕಟ್ಟೆ ಸುತ್ತಲು ನಿರ್ಮಿಸಿರುವ ತಂತಿ (ಮೆಸ್) ಬೇಲಿ ತುಕ್ಕು ಹಿಡಿದು ಮಣ್ಣಲ್ಲಿ ಮಣ್ಣಾಗುವ ಹಂತಕ್ಕೆ ಬಂದಿದೆ. ಶಿಥಲಾವಸ್ಥೆಯತ್ತ ಸಾಗುತ್ತಿರುವ ಮಾರುಕಟ್ಟೆಯ ಮೇಲ್ಛಾವಣ ಉದುರುತ್ತಿದ್ದು, ವಿದ್ಯುತ್ ಸಂಪರ್ಕಕ್ಕಾಗಿ ಅಳವಡಿಸಿರುವ ಉಪಕರಣಗಳು ಧೂಳು ಹಿಡಿದು ಹಾಳಾಗಿವೆ (ಕಳ್ಳಕಾಕರ ಪಾಲೂ ಆಗಿರಬಹುದು). ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದಿದ್ದರೂ ಸ್ಥಳೀಯರಲ್ಲಿ ಕೆಲವರು ದನಗಳನ್ನು ಕಟ್ಟಿ ಹಾಕಲು ಬಳಕೆ ಮಾಡುತ್ತಿರುವ ಪ್ರಯೋಜನಕ್ಕೆ ಮಾರುಕಟ್ಟೆ ಭಾಜನವಾಗಿ ಒಂದು ರೀತಿಯಲ್ಲಿ ದನದಕೊಟ್ಟಿಗೆಯಾಗಿ ಪರಿಣಮಿಸಿದೆ!

ವಿಜಯನಗರ 2ನೇ ಹಂತದ ಕೃಷ್ಣದೇವರಾಯ ವೃತ್ತದ ಬಳಿಯ ಕಿರು ಮಾರುಕಟ್ಟೆ: ಈ ಮಾರುಕಟ್ಟೆಯಲ್ಲಿ ಮದ್ಯದ ಬಾಟಲಿಗಳು ಬೇಕಾಬಿಟ್ಟಿಯಾಗಿ ಬಿದ್ದಿವೆ. ಮಾರುಕಟ್ಟೆ ಆವರಣದ ಸುತ್ತಲು ಇರುವ ತಡೆಗೋಡೆ ಹಾಗೂ ಜನಜಂಗುಳಿ ಇರುವ ಹಿನ್ನೆಲೆಯಲ್ಲಿ ಹಗಲಿನಲ್ಲಿ ಮಾರುಕಟ್ಟೆ ಕುಡುಕರ ಅಡ್ಡವಾಗುತ್ತಿಲ್ಲ ಎಂಬುದು ಸಮಾಧಾನದ ಸಂಗತಿ. ರಾತ್ರಿ ಆಗುತ್ತಿದ್ದಂತೆ ಇದು ಕುಡುಕರ ಅಡ್ಡ ಮಾತ್ರವಲ್ಲ, ಅನೈತಿಕ ಚುಟುವಟಿಕೆ ತಾಣವಾಗುತ್ತಿದೆ ಎಂಬುದು ಸ್ಥಳೀಯರ ಆರೋಪ. ದಿನ ಕಳೆದಂತೆ ಕಟ್ಟಡದ ಮೇಲ್ಛಾವಣ ಸೊರಗುತ್ತಿದ್ದು, ಕೆಲಸಕ್ಕೆ ಬಾರದಂತೆ ಮಾಡಿರುವ ಆಡಳಿತ ವರ್ಗಕ್ಕೆ ಹಿಡಿಶಾಪ ಹಾಕುತ್ತಾರೆ ಸ್ಥಳೀಯರು. ಈ ಮಾರುಕಟ್ಟೆ ಇದ್ದರೂ ಇದರ ಹೊರಗೆ ರಸ್ತೆ ಬದಿಯಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುವ ಸ್ಥಿತಿ ಇದ್ದು, ಒಟ್ಟಾರೆ ಇದು ಇದ್ದೂ ಇಲ್ಲದಂತೆ ಆಗಿರುವುದು ವಿಪರ್ಯಾಸ.

ಈ ಮಾರುಕಟ್ಟೆಗೆ ಸಂಬಂಧಿಸಿದಂತೆ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ನಿವಾಸಿ ರಾಜೇಗೌಡ, ಸುಮಾರು 10 ವರ್ಷಗಳಿಂದ ಈ ಮಾರುಕಟ್ಟೆ ಪ್ರಯೋಜನಕ್ಕೆ ಬಂದಿಲ್ಲ. ಪೋಕರಿಗಳಿಗೆ ಇದು ಅಡ್ಡೆಯಾಗುತ್ತಿದ್ದು, ಸುಮ್ಮನೆ ಹೀಗೆ ಕಟ್ಟಡ ಕಟ್ಟಿ ಹಾಳು ಮಾಡುವ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುವುದು ಎಷ್ಟು ಸರಿ? ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಹೆಬ್ಬಾಳು 1ನೇ ಹಂತದ ಲಕ್ಷ್ಮೀಕಾಂತನಗರದ ಕಿರು ಮಾರುಕಟ್ಟೆ: ಈ ಮಾರುಕಟ್ಟೆಯೂ ವ್ಯರ್ಥವಾಗಿ ನಿಂತಿದ್ದು, ಇಲ್ಲಿನ ಆವರಣ ಒಂದಿಷ್ಟು ಸ್ವಚ್ಛತೆಯಿಂದ ಇದೆ ಎಂಬುದೊಂದೇ ಸಮಾಧಾನಕರ. ಆದರೆ ಮಾರುಕಟ್ಟೆಯ ಅಂಕಣದೊಳಗೆ ಪ್ರವೇಶ ಮಾಡಿದರೆ ಸಾಕು ಇದರ ನಿಜ ಸ್ವರೂಪ ಕಣ ್ಣಗೆ ರಾಜುತ್ತದೆ. ಧೂಳು, ಕಸದಿಂದ ಆವೃತ್ತವಾಗಿರುವ ಈ ಮಾರುಕಟ್ಟೆ ಒಳಾವರಣದಲ್ಲಿ ರಾತ್ರಿಯಾದರೆ, ಕುಡುಕರ ಅಡ್ಡೆಯಾಗಿ ಪರಸ್ಪರ ಮಾತಿನ ಚಕಮಕಿಗೆ ವೇದಿಕೆಯಾಗುತ್ತದೆ ಎಂಬುದು ಸ್ಥಳೀಯರ ಆಪಾದನೆ.

ಈ ಮಾರುಕಟ್ಟೆ ಬದಲು ಕ್ರೀಡಾಂಗಣ ಇಲ್ಲವೇ ಉದ್ಯಾನವನವಾಗಿ ಪರಿವರ್ತಿಸಿ ಕೊಡಿ ಎಂಬುದು ಸ್ಥಳೀಯರ ಬೇಡಿಕೆ. ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ಯುವತಿ ಲಿಂಷಾ ಬಿದ್ದಪ್ಪ, ಪೋಲಿಗಳ, ಕುಡುಕರ ತಾಣವಾಗಿರುವ ಈ ಮಾರುಕಟ್ಟೆಯನ್ನು ಉದ್ಯಾವನ ಇಲ್ಲವೇ ಕ್ರೀಡಾಂಗಣವಾಗಿ ಪರಿವರ್ತಿಸಿದರೆ, ಅನುಕೂಲವಾಗಲಿದೆ. ಸ್ಥಳೀಯರು ವಿಹರಿಸಲು ಉತ್ತಮ ವಾತಾವರಣ ಸಿಗಲಿದೆ ಎಂದರು.

ಹೆಬ್ಬಾಳಿನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಬಳಿಯ ಕಿರು ಮಾರುಕಟ್ಟೆ: ಈ ಮಾರುಕಟ್ಟೆಯ ಆವರಣ ಒಂದಿಷ್ಟು ಶುಚಿಯಾಗಿದೆ. ಕೆಲವರು ಹಲವು ಸಾಮಾಗ್ರಿಗಳನ್ನು ಇಲ್ಲಿ ಇಟ್ಟುಕೊಳ್ಳುವ ಮೂಲಕ ಒಂದು ರೀತಿಯಲ್ಲಿ ಮಾರುಕಟ್ಟೆಯನ್ನು ತಮ್ಮ ಗೋದಾಮು ಆಗಿ ಮಾಡಿಕೊಂಡಿದ್ದಾರೆ. ಅಂಗವಿಕಲರಿಗಾಗಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿದ್ದು, ಅವುಗಳಿಗೆ ಬೀಗ ಜಡಿಯಲಾಗಿದೆ. ಮಾರುಕಟ್ಟೆ ಸುತ್ತಲು ಉದ್ಯಾನವನಗಳಿದ್ದು, ಮಾರುಕಟ್ಟೆಯಾಗಿದ್ದಲ್ಲಿ ವಾಯು ವಿಹಾರಿಗಳು ಹಣ್ಣು ತರಕಾರಿ ಕೊಳ್ಳಲು ಅನುಕೂಲ ಆಗುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ. ಉಳಿದೆಲ್ಲಾ ಮಾರುಕಟ್ಟೆಯಂತೆ ಇದೂ ಕೂಡ ದಿನ ಕಳೆದಂತೆ ಸೂಕ್ತ ನಿರ್ವಹಣೆ ಇಲ್ಲದೆ, ಸೊರಗುತ್ತಿದೆ.

ಶಾರದಾದೇವಿನಗರ 2ನೇ ಹಂತದ ಕಿರು ಮಾರುಕಟ್ಟೆ: ಈ ಮಾರುಕಟ್ಟೆಯೂ ಗಿಡಗಂಟಿ ಬೆಳೆದು ಹಾಳಾಗುತ್ತಿದೆ. ಮೇಲ್ಛಾವಣ ಉದುರುತ್ತಿದ್ದು, ಸುತ್ತಲು ನಿರ್ಮಿಸಿರುವ ತಂತಿ ಬೇಲಿಯೂ ದುಸ್ಥಿತಿಯತ್ತ ತಲುಪಿದೆ. ಇನ್ನು ಕ್ಯಾತಮಾರನಹಳ್ಳಿ ತ್ರಿವೇಣ ವೃತ್ತದ ಬಳಿಯ ಕಿರು ಮಾರುಕಟ್ಟೆಯ ಸ್ಥಿತಿಯೂ ಇದಕ್ಕಿಂತಲೂ ಭಿನ್ನವಾಗಿಲ್ಲ.

ನೆಲಸಮ: ಜೆಪಿ ನಗರದ 2ನೇ ಹಂತದ ಕಿರು ಮಾರುಕಟ್ಟೆ ಶಿಥಲಾವಸ್ಥೆಯಿಂದ ನೆಲಕ್ಕುರುಳಿದೆ. `ಮುಡಾದಿಂದ ಪಾಲಿಕೆಗೆ ಹಸ್ತಾಂತರ ಮಾಡಲಾಗಿತ್ತು. ಆದರೆ ಮಾರುಕಟ್ಟೆ ಶಿಥಲಾವಸ್ಥೆಯಿಂದ ನೆಲಕ್ಕುರಳಿದೆ. ಈ ಮಾರುಕಟ್ಟೆ ಬಳಕೆ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗಿದೆ’ ಎಂದು ಪಾಲಿಕೆ ಸದಸ್ಯ ಬಿ.ಎಲ್.ಭೈರಪ್ಪ ತಿಳಿಸಿದರು.

ಚಿಕ್ಕಹರದನಹಳ್ಳಿ 1ನೇ ಹಂತದ (ಹೈಟೆನ್ಷನ್ ಲೈನ್ ಪಕ್ಕ) ಕಿರು ಮಾರುಕಟ್ಟೆ: ಬೆಂಗಳೂರಿನ ಜೈವಿಕ ಕೃಷಿಕ ಸೊಸೈಟಿಗೆ ಕೃಷಿ ಸಾವಯುವ ವಸ್ತುಗಳ ಮಾರಾಟ ಮಳಿಗೆ ಉದ್ದೇಶಕ್ಕೆ ಮಾಸಿಕ 14,400 ರೂ. ಬಾಡಿಗೆ ತಾತ್ಕಾಲಿಕವಾಗಿ ಮಂಜೂರಾತಿ ಪತ್ರ ನೀಡಿರುವುದಾಗಿ ಮುಡಾ ಮೂಲಗಳು ತಿಳಿಸಿವೆ.

ಬಳಕೆಗೆ ಬಾರದೇ ನಿಷ್ಪ್ರಯೋಜಕವಾಗಿರುವ ಕಿರು ಮಾರುಕಟ್ಟೆಗಳು ಕುಡುಕರ ತಾಣವಾಗಿರುವ ಬೇಸರದ ಸಂದರ್ಭದೊಂದಿಗೆ ಹಲವು ವೇಳೆ ವಾಯು ವಿಹಾರಿಗಳಿಗೆ ವಿಶ್ರಾಂತಿಯ ಸ್ಥಳವಾಗಿಯೂ ಬಳಕೆ ಆಗಿರುವುದು ಉಂಟು ಎಂಬುದೊಂದು ಸಮಾಧಾನ. ಅನೇಕ ವೇಳೆ ನಿರಾಶ್ರಿತ ಆಶ್ರಯ ತಾಣವಾಗಿಯೂ ಬಳಕೆಯಾಗಿದೆ. ಆದರೆ ಉದ್ದೇಶಿತ ಕಾರ್ಯಕ್ಕೆ ಬಳಕೆ ಮಾಡದ ಹಿನ್ನೆಲೆಯಲ್ಲಿ ಕುಡುಕರ, ಪೋಲಿ-ಪುಂಡರ ಅಡ್ಡೆಯಾಗಿದ್ದೇ ಹೆಚ್ಚು. ಇಂತಹ ಪರಿಸ್ಥಿತಿಯಿಂದ ಸಮೀಪದ ನಿವಾಸಿಗಳಿಗೆ ಕಿರಿಕಿರಿ.

ಮೈಸೂರಿನ ವಿಜಯನಗರದ 2ನೇ ಹಂತದಲ್ಲಿರುವ ರೈತ ಸಂತೆ ಕಟ್ಟಡವನ್ನು ಉಚಿತವಾಗಿ ವ್ಯಾಪಾರ ವಹಿವಾಟು ನಡೆಸಲು ವ್ಯವಸ್ಥೆ ಮಾಡಿದ್ದರೂ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. 2017ರ ಜು.15ರಂದು ಕಟ್ಟಡದ ಉದ್ಘಾಟನೆ ನೆರವೇರಿಸಿದ ಬಳಿಕ ಹತ್ತಾರು ದಿನಗಳ ಕಾಲ ಕೆಲವರು ವ್ಯಾಪಾರ ಮಾಡಿದರು. ಆ ಬಳಿಕ ಯಾರು ಇದರ ಬಳಕೆಗೆ ಮುಂದೆ ಬರುತ್ತಿಲ್ಲ. ಸ್ವಚ್ಛತಾ ಹಾಗೂ ಭದ್ರತಾ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಿದ್ದರೂ ಯಾರೂ ಬಳಸಿಕೊಳ್ಳುತ್ತಿಲ್ಲ. ಮಾಸಿಕ 70 ಸಾವಿರ ರೂ. ಬಾಡಿಗೆ ಆಧಾರದಲ್ಲಿ ಮುಡಾದಿಂದ ಎಪಿಎಂಸಿಗೆ ವಹಿಸಿಕೊಳ್ಳಲಾಗಿದೆ. ಸದ್ಯ ಉಪಯೋಗಕ್ಕೆ ಬಾರದ ಹಿನ್ನೆಲೆಯಲ್ಲಿ ಬಾಡಿಗೆ ಕಟ್ಟಿಲ್ಲ. ಇದು ಪ್ರಯೋಜನಕ್ಕೆ ಬರುವಂತೆ ಕಾಣುತ್ತಿಲ್ಲದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಮುಡಾಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳಲಾಗುವುದು.
-ಎಸ್.ಸಿದ್ದೇಗೌಡ, ಎಪಿಎಂಸಿ ಅಧ್ಯಕ್ಷರು.

Translate »