ಮೈಸೂರು ವಿವಿ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ: ಮಹಾಜನ ಕಾಲೇಜಿಗೆ ಟ್ರೋಫಿ
ಮೈಸೂರು

ಮೈಸೂರು ವಿವಿ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿ: ಮಹಾಜನ ಕಾಲೇಜಿಗೆ ಟ್ರೋಫಿ

January 4, 2020

ಮೈಸೂರು,ಜ.3(ವೈಡಿಎಸ್)-ಜಯಲಕ್ಷ್ಮೀಪುರಂನ ಮಹಾಜನ ವಿದ್ಯಾಸಂಸ್ಥೆಯ ಜಗದೀಶ್ ಪ್ರಸಾದ್ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿವಿ ಅಂತರ ಕಾಲೇಜು ಪುರುಷರ ಕಬಡ್ಡಿ ಪಂದ್ಯಾವಳಿಯ ಎಲ್ಲಾ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿದ ಎಸ್‍ಬಿಆರ್‍ಆರ್ ಮಹಾ ಜನ ಪ್ರಥಮ ದರ್ಜೆ ಕಾಲೇಜು ತಂಡ ಟ್ರೋಫಿಯನ್ನು ತಮ್ಮದಾಗಿಸಿ ಕೊಂಡಿತು. ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ನಡೆದ ಪಂದ್ಯಾವಳಿಯಲ್ಲಿ ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡ ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜು ತಂಡವನ್ನು (ಕ್ರಮವಾಗಿ 40-31 ಅಂಕ) ಮಣಿಸಿ, ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಉಳಿದಂತೆ ಫೈನಲ್‍ನಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಸಿ ಸೋಲ ನನುಭವಿಸಿದ ವಿದ್ಯಾವಿಕಾಸ ಪ್ರಥಮ ದರ್ಜೆ ಕಾಲೇಜು ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಚನ್ನಪಟ್ಟಣದ ಶ್ರೀ ಆದಿಚುಂಚನ ಗಿರಿ ಕಾಲೇಜು ತೃತೀಯ ಹಾಗೂ ಮಂಡ್ಯದ ಸರ್ಕಾರಿ ಕಾಲೇಜು ತಂಡ 4ನೇ ಸ್ಥಾನ ಪಡೆದುಕೊಂಡಿತು. 2 ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾವಿಕಾಸ ಕಾಲೇಜಿನ ಸುದರ್ಶನ್ `ಬೆಸ್ಟ್ ರೈಡರ್’ ಆಗಿ ಮಿಂಚಿದರೆ, ಮಂಡ್ಯದ ಸರ್ಕಾರಿ ಕಾಲೇಜಿನ ಸಚಿನ್ `ಬೆಸ್ಟ್ ಕ್ಯಾಚರ್’ ಹಾಗೂ ಮಹಾಜನ ಕಾಲೇಜಿನ ಹೇಮಂತ್ `ಆಲ್ ರೌಂಡರ್’ ಪ್ರಶಸ್ತಿ ಪಡೆದರು.

ಇದೇ ವೇಳೆ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ರಕ್ಷಿತ್ ಪೂಜಾರಿ ಬಹುಮಾನ ವಿತರಿಸಿ, ಎಲ್ಲರಿಗೂ ಶುಭ ಹಾರೈಸಿದರು. ಕಾಲೇಜು ಪ್ರಾಂಶುಪಾಲ ಡಾ.ಎಸ್.ವೆಂಕಟರಾಮು, ಉಪ ಪ್ರಾಂಶುಪಾಲರಾದ ಬಿ.ಆರ್.ಜಯಕುಮಾರಿ, ಕಾಲೇಜಿನ ಸಿಇಓ ಡಾ.ಹೆಚ್.ಆರ್.ರಮೇಶ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ತಿಮ್ಮೇಗೌಡ, ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಸಂಚಾಲಕ ಡಾ.ಹೆಚ್.ಎನ್.ಭಾಸ್ಕರ್, ಸಹ ಸಂಚಾಲಕ ಪಿ.ಎಸ್.ಮಧುಸೂಧನ್ ಉಪಸ್ಥಿತರಿದ್ದರು.

 

Translate »