ಯೋಗ ರಾಜಧಾನಿಯಾಗಿ ಹೊರ ಹೊಮ್ಮುತ್ತಿದೆ ಮೈಸೂರು
ಮೈಸೂರು

ಯೋಗ ರಾಜಧಾನಿಯಾಗಿ ಹೊರ ಹೊಮ್ಮುತ್ತಿದೆ ಮೈಸೂರು

May 13, 2019

ಮೈಸೂರು: ಮೈಸೂರು ದೇಶದ ಬಹು ದೊಡ್ಡ ಯೋಗ ರಾಜಧಾನಿಯಾಗಿ ಹೊರ ಹೊಮ್ಮುತ್ತಿದೆ. ಇದಕ್ಕಾಗಿ ಜೂ21ರಂದು ಅಂತಾರಾಷ್ಟ್ರೀಯ ಯೊಗ ದಿನದಂದು ಮೈಸೂರಿನ ರೇಸ್‍ಕೋರ್ಸ್ ಮೈದಾನದಲ್ಲಿ 1.5 ಲಕ್ಷಕ್ಕೂ ಹೆಚ್ಚು ಯೋಗ ಪಟುಗಳು ಭಾಗವಹಿಸಿ ಹಿಂದಿನ ದಾಖಲೆಗಳನ್ನು ಮುರಿಯುವ ಸಂಕಲ್ಪ ತೊಟ್ಟಿದ್ದಾರೆ.

ಮೈಸೂರು ಯೋಗ ಒಕ್ಕೂಟದ ಆಶ್ರಯದಲ್ಲಿ ಕಳೆದ 2017ರಲ್ಲಿ 55,506 ಯೋಗ ಪಟುಗಳು ಮೈಸೂರು ಅರಮನೆ ಆವರಣದಲ್ಲಿ ಸಾಮೂಹಿಕ ಯೋಗ ಪ್ರದರ್ಶಿಸಿ ವಿಶ್ವ ದಾಖಲೆ ಮಾಡಿದ್ದರು. ಆದರೆ ಕಳೆದ ವರ್ಷ ಮತ್ತೊಮ್ಮೆ ದಾಖಲೆ ಮಾಡುವ ಪ್ರಯತ್ನ ಫಲಿಸಲಿಲ್ಲ. ಹೀಗಾಗಿ 2017 ರಲ್ಲಿ ತಾನೇ ಮಾಡಿರುವ ದಾಖಲೆ ಮತ್ತು ಕಳೆದ ವರ್ಷ ರಾಜಾಸ್ತಾನದಲ್ಲಿ ಬಾಬಾ ರಾಮ್‍ದೇವ್ ಪತಂಜಲಿ ಯೋಗ ಸಂಸ್ಥೆ ಮಾಡಿದ್ದ 1,00,974 ಯೋಗ ಪಟುಗಳ ಮಾಡಿದ ದಾಖಲೆಯನ್ನು ಮುರಿಯುವ ಉತ್ಸಾಹದಲ್ಲಿದ್ದಾರೆ. ಅದಕ್ಕಾಗಿ 1.5 ಲಕ್ಷ ಯೋಗಪಟುಗಳನ್ನು ಸೇರಿಸಲು ಸಿದ್ದತೆ ನಡೆದಿದೆ. ಇದರ ಅಂಗವಾಗಿ ಮೈಸೂರಿನ ಕುವೆಂಪುನಗರದ ಸೌಗಂಧಿಕ ಉದ್ಯಾನ ವನದಲ್ಲಿ ಮೈಸೂರು ಯೋಗ ಒಕ್ಕೂಟದ ಆಶ್ರಯದಲ್ಲಿ ನೂರಾರು ಯೋಗ ಪಟುಗಳ ಪೂರ್ವಾಭ್ಯಾಸ ನಡೆಸಲಾಯಿತು. ಜೊತೆಗೆ ಮೈಸೂರಿನ ವಿವಿಧ ಕಡೆಗಳಲ್ಲಿಯೂ ಯೋಗ ಪಟುಗಳ ಪೂರ್ವಾಭ್ಯಾಸಗಳು ನಡೆಯುತ್ತಿದ್ದು, ಮುಂದಿನ ಐದು ಭಾನುವಾರ ಗಳೂ ಈ ಪೂರ್ವಾಭ್ಯಾಸಗಳು ನಡೆದು, ಅಂತಾರಾಷ್ಟ್ರೀಯ ಯೋಗ ದಿನಕ್ಕೂ ಮುನ್ನ ಮೈಸೂರು ಅರಮನೆ ಮತ್ತು ರೇಸ್‍ಕೋರ್ಸ್ ಮೈದಾನದಲ್ಲಿ ಅಂತಿಮ ಪೂರ್ವಾಭ್ಯಾಸ ನಡೆಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಈಗಾಗಲೇ 1100 ಯೋಗ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಅವರು ಶಾಲಾ-ಕಾಲೇಜು, ಸಂಘ ಸಂಸ್ಥೆಗಳು, ದೊಡ್ಡ ದೊಡ್ಡ ಕಂಪೆನಿಗಳಿಗೆ ಹೋಗಿ ಯೋಗ ದಿನದಂದು ಯೋಗ ಪ್ರದರ್ಶನದಲ್ಲಿ ಭಾಗವಹಿಸುವಂತೆ ಮಾಡಲಾಗುವುದು. ಈ ಬಾರಿ 1.50 ಲಕ್ಷದಷ್ಟು ಯೋಗಪಟುಗಳು ಭಾಗವಹಿಸಿ, ವಿಶ್ವ ದಾಖಲೆ ಮಾಡುವ ಹುಮ್ಮಸ್ಸಿನಲ್ಲಿದ್ದೇವೆ ಎಂದು ಇದರ ಜವಾಬ್ದಾರಿ ಹೊತ್ತಿರುವ ಜಿಎಸ್‍ಎಸ್ ಸಂಸ್ಥೆಯ ಶ್ರೀಹರಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಈ ಬಾರಿ ವ್ಯಾಪಕ ಪ್ರಚಾರ ನೀಡಿ ಯೋಗಪಟುಗಳನ್ನು ಒಂದೆಡೆ ಕಲೆ ಹಾಕಿ ದಾಖಲೆ ನಿರ್ಮಿಸಲು ಪ್ರತಿ ಮನೆ, ಖಾಸಗಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಲು 1,100 ಯೋಗ ತರಬೇತುದಾರರನ್ನು ನಿಯೋಜಿಸಲಾಗಿದೆ. 2015 ಮತ್ತು 2016ರಲ್ಲಿ 10,000 ಯೋಗ ಪಟುಗಳು ಭಾಗವಹಿಸಿದ್ದರು. 2017ರಲ್ಲಿ 55,506 ಯೋಗಪಟುಗಳು ಭಾಗವಹಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಯಾಗಿದ್ದ ಡಿ.ರಂದೀಪ್ ನೇತೃತ್ವದ ಜಿಲ್ಲಾಡಳಿತದ ಸಹಯೋಗದಿಂದ ಈ ಕಾರ್ಯ ಯಶಸ್ವಿಯಾಗಿ ನಡೆಸ ಲಾಗಿತ್ತು ಎಂದು ಸ್ಮರಿಸಿದರು. ಜೂ.5ರಂದು ವಿಶ್ವ ಪರಿಸರ ದಿನಾಚರಣೆ, ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಇದ್ದು, ಈ ಎರಡು ಒಂದಕ್ಕೊಂದು ನಂಟಿದೆ. ಆರೋಗ್ಯಕ್ಕೆ ಪರಿಸರ ಅಗತ್ಯ. ಹೀಗಾಗಿ 50,000 ಸಸಿಗಳನ್ನು ನೆಡುವ ಕಾರ್ಯಕ್ರಮವೂ ಆಗಬೇಕಿದೆ. ಆ ನಿಟ್ಟಿನಲ್ಲಿಯೂ ನಮ್ಮ ಪ್ರಯತ್ನಿವಿದೆ ಎಂದರು.

ಈ ಸಂದರ್ಭದಲ್ಲಿ ಬಾಬಾ ರಾಮ್‍ದೇವ್ ಭಾರತ್ ಸ್ವಾಭಿಮಾನಿ ಟ್ರಸ್ಟ್‍ನ ಮುಖ್ಯಸ್ಥ ಶಶಿಕುಮಾರ್, ಎಪಿವೈಎಸ್‍ಎಸ್ ಮುಖ್ಯಸ್ಥ ನಾಗಭೂಷಣ್, ಎನ್‍ಎಸ್‍ಎಸ್ ಮುಖ್ಯಸ್ಥ ಚಂದ್ರಶೇಖರ್, ಪಾಲಿಕೆ ಸದಸ್ಯ ರಮೇಶ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »