ಸ್ವಚ್ಛತೆಯಲ್ಲಿ ಮೈಸೂರಿಗೆ ಪ್ರಥಮ ಸ್ಥಾನ ಕೈ ತಪ್ಪಲು ಸೂಯೇಜ್ ಫಾರಂ ಕಸದ ರಾಶಿಯೇ ಕಾರಣ
ಮೈಸೂರು

ಸ್ವಚ್ಛತೆಯಲ್ಲಿ ಮೈಸೂರಿಗೆ ಪ್ರಥಮ ಸ್ಥಾನ ಕೈ ತಪ್ಪಲು ಸೂಯೇಜ್ ಫಾರಂ ಕಸದ ರಾಶಿಯೇ ಕಾರಣ

March 8, 2019

ಮೈಸೂರು: ಮೈಸೂರು ನಗರ ಈ ಬಾರಿಯೂ ಸ್ವಚ್ಛತೆಯಲ್ಲಿ 3ನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಪ್ರಥಮ ಸ್ಥಾನಕ್ಕೇರಲು ಶ್ರಮಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.

ನಗರಪಾಲಿಕೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2014-15ನೇ ಸಾಲಿನಿಂದ ಸ್ವಚ್ಛ ನಗರ ಪ್ರಶಸ್ತಿ ನೀಡಲಾಗುತ್ತಿದ್ದು, ಸತತ 2 ಬಾರಿ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ, 2016-17ನೇ ಸಾಲಿನಲ್ಲಿ 5 ಹಾಗೂ 2017- 18ನೇ ಸಾಲಿನಲ್ಲಿ 8ನೇ ಸ್ಥಾನಕ್ಕೆ ಕುಸಿತ ಕಂಡಿತ್ತು. ಇಂದು ಎಲ್ಲರ ಪರಿಶ್ರಮದಿಂದ 3ನೇ ಸ್ಥಾನಕ್ಕೆ ಬಂದಿದ್ದೇವೆ. ಮುಂದಿನ ವರ್ಷದಲ್ಲಿ ಮೊದಲ ಸ್ಥಾನಕ್ಕೇರಲು ಶ್ರಮಿಸಲಾಗು ವುದು ಎಂದರು. ಪ್ರಸ್ತುತ 2019-20ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಒಟ್ಟು 4,237 ನಗರಗಳು ಭಾಗವಹಿಸಿದ್ದವು. ಮೈಸೂರಿನಲ್ಲಿ ಜ.12ರಿಂದ ಕೇಂದ್ರದಿಂದ ನಿಯೋಜಿತಗೊಂಡ ಕಾರ್ವಿ, ಕಾಂಟೂರ್ ಹಾಗೂ ಕ್ವಾಲಿಟಿ ಕಂಟ್ರೋಲ್ ಆಲ್ ಇಂಡಿಯಾ ಸಂಸ್ಥೆಯಿಂದ ವಿವಿಧ ಹಂತದಲ್ಲಿ ಸರ್ವೆ ಕಾರ್ಯ ನಡೆಸಿದವು. ಈ ತಂಡಗಳ ವರದಿಯ ಆಧಾರದ ಮೇಲೆ ಸ್ವಚ್ಛ ಸರ್ವೇಕ್ಷಣೆ- 2019ರಲ್ಲಿ ಮೈಸೂರು ನಗರ ದೇಶದ 3ನೇ ಸ್ವಚ್ಛನಗರ ಗರಿಮೆ ಪಡೆದಿದೆ ಎಂದರು.

ಮೈಸೂರು ನಗರವು ಬಯಲು ಶೌಚಮುಕ್ತ ನಗರದ ಸಮೀಕ್ಷೆಯಲ್ಲಿ ಓಡಿಎಫ್ ಪ್ಲಸ್ ಹಾಗೂ ತ್ಯಾಜ್ಯಮುಕ್ತ ನಗರ ಸಮೀಕ್ಷೆಯಲ್ಲಿ ಫೈವ್ ಸ್ಟಾರ್ ಗರಿಮೆ ಪಡೆದುಕೊಂಡಿದೆ. ಮೊದಲ ಸ್ಥಾನ ಗಳಿಸಿರುವ ಮಧ್ಯಪ್ರದೇಶದ ಇಂದೋರ್ 4659 ಅಂಕಪಡೆದರೆ, ದ್ವಿತೀಯ ಸ್ಥಾನ ಗಳಿಸಿದ ಛತ್ತೀಸಘಡದ ಅಂಬಿಕಾಪುರ 4,394, ತೃತೀಯ ಸ್ಥಾನ ಪಡೆದಿರುವ ಮೈಸೂರು 4,379 ಅಂಕ ಪಡೆದಿದೆ ಎಂದರು.

ನಮಗೆ ಸಮುದಾಯ ಪಾಲುದಾರಿಕೆ ಮತ್ತು ದಾಖಲಾತಿಯಲ್ಲಿ ಅಂಕ ಕಡಿಮೆ ಬಂದಿದೆ. ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿರುವ ನಗರಗಳು ಓಡಿಎಫ್ ಡಬ್ಬಲ್ ಪ್ಲಸ್ ಪಡೆದಿದ್ದರೆ. ಮೈಸೂರಿಗೆ ಸಿಂಗಲ್ ಪ್ಲಸ್ ದೊರೆತಿದೆ. ಇದಕ್ಕೆ ಸೂಯೇಜ್ ಫಾರಂ ನಲ್ಲಿರುವ ಕಸದ ರಾಶಿಯೇ ಮುಖ್ಯ ಕಾರಣ. ಹಾಗಾಗಿ ಇದನ್ನು ಕೂಡಲೇ ಟೆಂಡರ್ ಕರೆದು ಖಾಲಿ ಮಾಡಿಸುವ ಮೂಲಕ ಮುಂದಿನ ಸರ್ವೇಕ್ಷಣೆ ವೇಳೆಗೆ ಇದರಲ್ಲಿಯೂ ಹೆಚ್ಚು ಅಂಕ ಬರುವಂತೆ ನೋಡಿಕೊಳ್ಳಲಾಗುವುದು ಎಂದರು.

3ನೇ ಸ್ವಚ್ಛನಗರ ಗರಿಮೆಯನ್ನು ಪಡೆಯಲು ಶ್ರಮಿಸಿದ ಪೌರ ಕಾರ್ಮಿಕರು, ನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ, ಸ್ವಚ್ಛತಾ ರಾಯಭಾರಿಗಳಾದ ಪ್ರಮೋದಾ ದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಾವಗಲ್ ಶ್ರೀನಾಥ್, ಆತ್ಮನನಂದ ಸ್ವಾಮೀಜಿ, ಖುಷಿ, ಮಾಸ್ಟರ್ ಇಶಾನ್ ಚೇತನ್, ರೀಫಾ ತಸ್ಕೀನ್ ಎಲ್ಲಾ ಧರ್ಮಗುರುಗಳು, ಸರ್ಕಾರಿ, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿಗಳು, ನಗರದ ನಾಗರಿಕರು ಮತ್ತು ಸಾರ್ವಜನಿಕರ ಪಾಲು ಇದೆ ಎಂದು ಹೇಳಿ ಅವರೆಲ್ಲರಿಗೂ ಧನ್ಯವಾದ ಅರ್ಪಿಸಿದರು. ಮುಂದಿನ ವರ್ಷ ಮೈಸೂರನ್ನು ಸ್ವಚ್ಛತೆಯಲ್ಲಿ ನಂ.1 ಸ್ಥಾನಕ್ಕೇರಿಸಲು ಅನುಕೂಲವಾಗುವಂತೆ ಈ ಬಾರಿ ಸ್ವಚ್ಛತೆಯಲ್ಲಿ ನಂ1 ಸ್ಥಾನ ಪಡೆದ ಇಂದೋರ್‍ಗೆ ನಿಯೋಗ ತೆರಳಲಾಗುವುದು ಎಂದರು. ಉಪ ಮೇಯರ್ ಷಫಿ ಅಹಮದ್, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ, ಆಡಳಿತ ಪಕ್ಷದ ನಾಯಕಿ ಪ್ರೇಮಾ ಶಂಕರೇಗೌಡ, ಪ್ರತಿಪಕ್ಷ ನಾಯಕ ಬಿ.ವಿ.ಮಂಜುನಾಥ್, ಆಯುಕ್ತೆ ಶಿಲ್ಪಾನಾಗ್, ಆರೋಗ್ಯಾಧಿಕಾರಿ ಡಾ.ನಾಗರಾಜು ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »