ಮುಖ್ಯಮಂತ್ರಿಗಾಗಿ 7 ಗಂಟೆಗಳ ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್
ಮೈಸೂರು

ಮುಖ್ಯಮಂತ್ರಿಗಾಗಿ 7 ಗಂಟೆಗಳ ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್

July 21, 2018

ಮಂಡ್ಯ: ಮಂಡ್ಯ ನಗರ ದಲ್ಲಿ ಇಂದು ಆಯೋಜಿಸಿದ್ದ ಜೆಡಿಎಸ್ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಪಾಲ್ಗೊಂಡ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಬರೋಬ್ಬರಿ 7 ಗಂಟೆಗಳ ಕಾಲ ಬಂದ್ ಮಾಡಿದ ಪರಿಣಾಮ ಲಕ್ಷಾಂತರ ಮಂದಿ ಪರ ದಾಡಬೇಕಾಯಿತು.

ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಾವಿರಾರು ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿದ್ದು, ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಇಂದಿನ ಹೆದ್ದಾರಿ ಬಂದ್‍ನಿಂದಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ಸಂಚಾರ ಅಸ್ತವ್ಯಸ್ಥ ಗೊಂಡು ಒಂದು ರೀತಿಯಲ್ಲಿ ಎರಡೂ ನಗರಗಳ ನಡುವೆ ಸಂಪರ್ಕ ಕಡಿತ ಗೊಂಡಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮಂಡ್ಯದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಗೆ ಜೆಡಿಎಸ್ ಕೃತಜ್ಞತಾ ಸಮಾವೇಶ ಏರ್ಪ ಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಮೈಸೂರಿನಿಂದ ಮದ್ದೂರುವರೆಗೂ ಬಂದ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರ ಡಿಸಿದ್ದರು. ಮಾಮೂಲಿ ಜನ ವಾಹನ ಸಂಚಾರವಲ್ಲದೇ ಇಂದು ಆಷಾಢ ಶುಕ್ರ ವಾಗಿದ್ದು, ಬೆಂಗಳೂರು ಮತ್ತಿತರೆಡೆಯಿಂದ ಮಂಡ್ಯ ಮಾರ್ಗವಾಗಿ ಚಾಮುಂಡಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ್ದ ಸಾವಿರಾರು ಭಕ್ತಾದಿ ಗಳು ಸಂಕಷ್ಟಕ್ಕೆ ಸಿಲುಕಿದರು. ಹೆದ್ದಾರಿ ಯಲ್ಲೇ ಬೆಂಗಳೂರು ಕಡೆಯಿಂದ ಮೈಸೂ ರಿಗೆ ತಮ್ಮ ಖಾಸಗಿ ವಾಹನಗಳಲ್ಲಿ ಪ್ರಯಾಣ ಮಾಡುತ್ತಿದ್ದ ಅನೇಕ ಭಕ್ತರು ಇಂದು ಹೆದ್ದಾರಿ ಬಂದ್ ಆದ ಕಾರಣ ಪರ್ಯಾಯ ರಸ್ತೆಯ ಪರಿಚಯವಿಲ್ಲದೆ ಹೆಣಗಾಡುತ್ತಾ, ಅಲ್ಲಲ್ಲಿ ಸಾರ್ವಜನಿಕರಿಂದ ಮಾರ್ಗದ ಬಗ್ಗೆ ಮಾಹಿತಿ ಪಡೆಯುತ್ತಾ ಸಾಗಿದ ಪರಿ ಣಾಮ ಹಲವು ಗಂಟೆಗಳ ವಿಳಂಬ ವಾಗಿ ಮೈಸೂರು ತಲುಪುವಂತಾ ಯಿತು. ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಕರ ಪರಿಪಾಟಲು ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲ. ಪ್ರವಾಸಿ ಕಾರುಗಳಲ್ಲಿ ಬೆಂಗಳೂರು-ಮೈಸೂರು ಪ್ರಯಾಣಿಸಿದ ದೇಶ-ವಿದೇಶ ಪ್ರವಾಸಿ ಗರನ್ನು ಕರೆತರುತ್ತಿದ್ದ ಚಾಲಕರ ಪಾಡಂತೂ ಹೇಳತೀರದಾಗಿತ್ತು.

ಬಹುತೇಕ ಪ್ರವಾಸಿಗರು ಬೆಂಗಳೂರು ಮತ್ತು ಮೈಸೂರು ನಡುವೆ ಹೆದ್ದಾರಿ ಸಂಪರ್ಕ ವಿರುವುದನ್ನು ಅರಿತವರಾಗಿದ್ದು, ಹೆದ್ದಾರಿ ಬಂದ್ ಆದ ಕಾರಣ ಚಾಲಕರು ಪರ್ಯಾಯ ರಸ್ತೆಯಲ್ಲಿ ಸಾಗಿದಾಗ ಸಹಜವಾಗಿಯೇ ಗಾಬರಿಗೊಂಡ ಪ್ರವಾಸಿಗರು ಸಂಶಯದಿಂದ ಚಾಲಕರನ್ನು ಹಲವಾರು ರೀತಿ ಪ್ರಶ್ನಿಸಿದ ಬಗ್ಗೆ ವರದಿಯಾಗಿದೆ. ಹೆದ್ದಾರಿ ಬಂದ್ ಆಗಿರುವ ಬಗ್ಗೆ ಪ್ರವಾಸಿಗರಿಗೆ ಮನವರಿಕೆ ಮಾಡಿಕೊಡುವಷ್ಟರಲ್ಲಿ ಪ್ರವಾಸಿ ಕಾರುಗಳ ಚಾಲಕರು ಹೈರಾಣಾಗಿ ಹೋಗಿದ್ದರು. ಇನ್ನೂ ಮೈಸೂರು-ಮದ್ದೂರು ಮಾರ್ಗ ಮಧ್ಯೆ ಇರುವ ಗ್ರಾಮಸ್ಥರು ಬೇರೆ ಊರುಗಳಿಗೆ ತೆರಳಲು ಪರದಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರ ಊರಿಗೆ ಹೋಗಿದ್ದ ಗ್ರಾಮಸ್ಥರು ವಾಹನ ಸಂಚಾರ ಬಂದ್ ಅಗಿದ್ದ ಪರಿಣಾಮ ತಮ್ಮ ಗ್ರಾಮಕ್ಕೆ ತೆರಳಲು ಹೆಣಗಾಡಬೇಕಾಯಿತು.

ಬೆಂಗಳೂರು-ಮೈಸೂರು ನಡುವೆ ಸಾರಿಗೆ ಬಸ್‍ಗಳಲ್ಲಿ ಸಂಚರಿಸಿದ ಪ್ರಯಾಣಿಕರು, ನಿಗದಿತ ಸಮಯಕ್ಕೆ ತಲುಪಲಾಗದೆ ಪರಿತಪಿಸಿದರು. ಟೂರಿಸ್ಟ್ ಬಸ್‍ಗಳ ಚಾಲಕರು ಮತ್ತು ಟ್ರಾವೆಲ್ ಏಜೆಂಟರು ನಿಗದಿತ ಸಮಯಕ್ಕೆ ಪ್ರವಾಸಿಗರನ್ನು ಕೆಆರ್‍ಎಸ್, ಶ್ರೀರಂಗಪಟ್ಟಣ, ಚಾಮುಂಡಿಬೆಟ್ಟ ಮುಂತಾದ ಪ್ರವಾಸಿ ಕೇಂದ್ರಗಳಿಗೆ ಕರೆದೊಯ್ಯಲು ಸಾಧ್ಯವಾಗದೇ ಪರದಾಡುತ್ತಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಸಮಾವೇಶ ಮುಗಿದು ಸಂಚಾರಕ್ಕೆ ಹೆದ್ದಾರಿ ಮುಕ್ತಗೊಳಿಸಲಾಯಿತಾದರೂ, ಸಮಾವೇಶಕ್ಕೆ ಲಕ್ಷಾಂತರ ಕಾರ್ಯಕರ್ತರನ್ನು ಕರೆತಂದಿದ್ದ ವಿವಿಧ ವಾಹನಗಳು ರಸ್ತೆಗಿಳಿದ ಪರಿಣಾಮ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಒಟ್ಟಾರೆ ಮುಖ್ಯಮಂತ್ರಿಗಳು ಭಾಗವಹಿಸಿದ್ದ ಜೆಡಿಎಸ್ ಕೃತಜ್ಞತಾ ಸಮಾವೇಶಕ್ಕಾಗಿ 7 ಗಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿದ ಪರಿಣಾಮ ಸಾವಿರಾರು ಪ್ರವಾಸಿಗರು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದು, ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದದ್ದು ಕಂಡು ಬಂತು. ಸಮಾವೇಶಕ್ಕಾಗಿ ಹೆದ್ದಾರಿ ಬಂದ್ ಮಾಡಿದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಇಂದು ಬೆಳಿಗ್ಗೆ ಕೊಡಗಿನ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಲು ಮುಖ್ಯಮಂತ್ರಿಗಳು ತೆರಳಲು ಮಡಿಕೇರಿಯಿಂದ ತಲಕಾವೇರಿವರೆಗಿನ ಹಲವಾರು ಮರಗಳನ್ನು ತೆರವುಗೊಳಿಸಿದ್ದು, ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ದುಂದು ವೆಚ್ಚ ಮಾಡುತ್ತಿದ್ದಾರೆಂದು ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಕಾರಣದಿಂದಾಗಿ ಅನಾವಶ್ಯಕ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದಾಗಿ ಹೇಳುತ್ತಿದ್ದರು. ಆದರೆ, ಗುರುವಾರ ಅವರು ಪಿರಿಯಾಪಟ್ಟಣಕ್ಕೆ ಆಗಮಿಸಲು ಎರಡು ಹೆಲಿಕಾಪ್ಟರ್‍ಗಳನ್ನು ಬಳಸಿರುವುದೂ ಚರ್ಚೆಗೆ ಗ್ರಾಸವಾಗಿದೆ.

Translate »