ಚಾಮುಂಡೇಶ್ವರಿ ದರ್ಶನ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಸಚಿವ ಸಹೋದ್ಯೋಗಿಗಳು
ಮೈಸೂರು

ಚಾಮುಂಡೇಶ್ವರಿ ದರ್ಶನ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಸಚಿವ ಸಹೋದ್ಯೋಗಿಗಳು

July 21, 2018

ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ. ಹಾಗಾಗಿ ಅಪಾರ ಸಂಖ್ಯೆಯ ಭಕ್ತರು ನಾಡ ದೇವಿಯ ದರ್ಶನ ಪಡೆದು, ಪುನೀತರಾದರು.

ಮುಂಜಾನೆ 3 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ಗಳು ಆರಂಭವಾದವು. ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್ ಹಾಗೂ ದೇವಿ ಪ್ರಸಾದ್ ನೇತೃತ್ವದಲ್ಲಿ ನಾಡದೇವಿಗೆ ಮಹನ್ಯಾಸಪೂರ್ವ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ತ್ರಿಪದಿ, ಸಹಸ್ರ ನಾಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಮಹಾಮಂಗಳಾ ರತಿ ನಂತರ 5.30ಕ್ಕೆ ಭಕ್ತರಿಗೆ ದೇವಿ ದರ್ಶನಕ್ಕೆ ಅವಕಾಶ ನೀಡ ಲಾಯಿತು. ಸಂಜೆ 6ರಿಂದ 7.30ರವರೆಗೆ ಅಭಿಷೇಕ. ರಾತ್ರಿ 10 ಗಂಟೆವರೆಗೂ ಭಕ್ತರು ದೇವಿ ದರ್ಶನ ಮಾಡಿದರು.

ಮುಂಜಾನೆಯಿಂದಲೇ ಭಕ್ತರ ದಂಡು: ಆಷಾಢ ಮಾಸದ ಮೊದಲ ಶುಕ್ರವಾರವೇ ದೇವಿ ದರ್ಶನಕ್ಕೆ ವಿವಿಧ ಜಿಲ್ಲೆ ಮಾತ್ರವಲ್ಲ ದೇಶ-ವಿದೇಶದಿಂದ ಭಾರೀ ಭಕ್ತರ ದಂಡು ಮುಂಜಾನೆಯಿಂದಲೇ ಚಾಮುಂಡಿಬೆಟ್ಟದಲ್ಲಿ ನೆರೆದಿತ್ತು. ಮುಂಜಾನೆ 3 ಗಂಟೆಯಿಂದಲೇ ಬೆಟ್ಟಕ್ಕೆ ಕಾಲ್ನಡಿಗೆ ಹಾಗೂ ಹೆಲಿಪ್ಯಾಡ್‍ನಿಂದ ದೇವಾಲಯದ ಆಡಳಿತ ಮಂಡಳಿ ವತಿಯಿಂದ ವ್ಯವಸ್ಥೆ ಮಾಡಿದ್ದ ಉಚಿತ ಬಸ್ ಮೂಲಕ ಬೆಟ್ಟಕ್ಕೆ ಬಂದು ದೇವಾಲಯ ಪ್ರವೇಶಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಹೆಲಿಪ್ಯಾಡ್‍ನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ಸಾರಿಗೆ ಬಸ್‍ನಲ್ಲಿ ಬೆಟ್ಟಕ್ಕೆ ಆಗಮಿಸಿದರು. ಮುಂಜಾನೆಯಿಂದಲೇ ಚಳಿ, ತುಂತುರು ಮಳೆ ಇದ್ದರೂ ಭಕ್ತರು  ಮಾತ್ರ ಇದನ್ನು ಲೆಕ್ಕಿಸದೆ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಮೆಟ್ಟಿಲುಗಳ ಮೂಲಕ: ಅವಿವಾಹಿತರು, ಮಕ್ಕಳಾಗದ ಮಹಿಳೆಯರು ಹಾಗೂ ಅನಾರೋಗ್ಯ ಸೇರಿದಂತೆ ವಿವಿಧ ಸಂಕಷ್ಟದಲ್ಲಿರುವವರು, ಮಹಿಳೆಯರು ಇಂದು ಮೆಟ್ಟಿಲು ಹತ್ತುವ ಮೂಲಕ ಹರಕೆ ತೀರಿಸಿದರು. ಬೆಟ್ಟದ ಪಾದದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೊದಲ ಮೆಟ್ಟಿಲಿನಿಂದ ಕೊನೆಯ ಮೆಟ್ಟಿಲವರೆಗೆ ಪ್ರತಿಯೊಂದು ಮೆಟ್ಟಿಲಿಗೂ ಹರಿಶಿನ-ಕುಂಕುಮ ಹಚ್ಚಿ ಪೂಜಿಸಿ, ಇಷ್ಠಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಮುಂಜಾನೆಯಿಂದ ಸಂಜೆಯವರೆಗೂ ಹರಕೆ ಹೊತ್ತ ಮಹಿಳೆಯರು, ಯುವತಿಯರು ಮೆಟ್ಟಿಲು ಪೂಜೆ ಮಾಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಮೆಟ್ಟಿಲು ಮೂಲಕ ಬೆಟ್ಟ ಹತ್ತಿದರು.

ಹೆಚ್ಚುವರಿ ಬಸ್ ವ್ಯವಸ್ಥೆ: ಹೆಲಿಪ್ಯಾಡ್‍ನಿಂದ ಚಾಮುಂಡಿಬೆಟ್ಟಕ್ಕೆ 25ಕ್ಕೂ ಹೆಚ್ಚು ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ನಗರ ಬಸ್ ನಿಲ್ದಾಣದಿಂದಲೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಐದು ನಿಮಿಷಕ್ಕೊಂದು ಬಸ್ ಚಾಮುಂಡಿಬೆಟ್ಟಕ್ಕೆ ಹೊರಡುವ ವ್ಯವಸ್ಥೆ ಇತ್ತು.

ಪ್ಲಾಸ್ಟಿಕ್ ನಿಷೇಧ: ಬೆಟ್ಟದಲ್ಲಿ ಮೈಸೂರು ನಗರ ಪಾಲಿಕೆ ಪ್ಲಾಸ್ಟಿಕ್ ನಿಷೇಧಿಸಿತ್ತು. ಪೂಜಾ ಸಾಮಾಗ್ರಿಗಳನ್ನು ಪ್ಲಾಸ್ಟಿಕ್ ಕವರ್‍ನಲ್ಲಿ ತರುವ ಭಕ್ತರಿಂದ ಪ್ಲಾಸ್ಟಿಕ್ ಬ್ಯಾಗ್ ಪಡೆದು, ಬಟ್ಟೆ ಬ್ಯಾಗ್ ನೀಡುವ ವ್ಯವಸ್ಥೆ ಮಾಡಲಾಗಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್: ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾ ಗಿತ್ತು. ಭದ್ರತೆಗೆ ಅಶ್ವಾರೋಹಿ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಸರಗಳ್ಳರು, ಜೇಬುಗಳ್ಳರ ಕೃತ್ಯಕ್ಕೆ ಬ್ರೇಕ್ ಹಾಕಲು ಮಫ್ತಿಯಲ್ಲಿ ಪೊಲೀಸರ ಗಸ್ತು ಆಯೋಜಿಸಲಾಗಿತ್ತು.

ಅಸಮಾದಾನ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 1.05ಕ್ಕೆ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಹಾಗಾಗಿ ಭಕ್ತರು ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಾಹ್ನ 1.30ಕ್ಕೆ ಕುಮಾರಸ್ವಾಮಿ ಹಾಗೂ ಅವರ ಸಚಿವ ಸಹೋದ್ಯೋಗಿಗಳು ದೇವಾಲಯಕ್ಕೆ ಆಗಮಿಸಿದರು. ದರ್ಶನ ಮುಗಿಸಿ ಮಧ್ಯಾಹ್ನ 2 ಗಂಟೆಗೆ ದೇವಾಲಯದಿಂದ ವಾಪಸ್ಸಾದರು.

ವಿಶೇಷ ಅಲಂಕಾರದಿಂದ ಕಂಗೊಳಿಸಿದ ದೇವಾಲಯ…

ಆಷಾಢ ಮಾಸದ ಮೊದಲ ಶುಕ್ರವಾರದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ದೇವಾಲಯ ಅಲಂಕಾರ ಸೇವೆಯನ್ನು ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಮೊದಲ ಶುಕ್ರವಾರದ ಅಲಂಕಾರ ಜಿ.ಟಿ.ದೇವೇಗೌಡರ ವತಿಯಿಂದಲೇ ನಡೆಯುತ್ತಿದೆ. ನಾಲ್ಕು ಬಣ್ಣದ ಸೇವಂತಿ ಹೂವು, ಎರಡು ಬಣ್ಣದ ಚೆಂಡೂವಿನಿಂದ ದೇವಾಲಯದ ಪ್ರಾಂಗಣ, ಗರ್ಭಗುಡಿಯ ಮುಂಭಾಗದ ಆವರಣ ಸೇರಿದಂತೆ ದೇವಾಲಯವನ್ನು ಅಲಂಕರಿಸಲಾಗಿತ್ತು. ಇದು ಕಣ್ಮನ ಸೆಳೆಯುತ್ತಿತ್ತು.

ಗಣ್ಯರ ದಂಡು…

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಶ್ರೀಮತಿ ಅನಿತಾ, ಸಚಿವರು ಗಳಾದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಶಾಸಕರುಗಳಾದ ಎಸ್.ಎ.ರಾಮದಾಸ್, ಎಸ್.ಸುರೇಶ್‍ಕುಮಾರ್, ಎಲ್.ನಾಗೇಂದ್ರ, ಕೃಷ್ಣಪ್ಪ ಸೇರಿದಂತೆ ಇನ್ನಿತರರು ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

Translate »