ಮೈಸೂರು: ನಾಲ್ಕು ವರ್ಷಗಳ ನಂತರ ತುಂಬಿ ತುಳುಕುತ್ತಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಂಜೆ ತಮ್ಮ ಸಚಿವ ಸಹೊದ್ಯೋಗಿಗಳು ಹಾಗೂ ಶಾಸಕರೊಂದಿಗೆ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಣೆ ಮಾಡಿದರು.
ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಸಂಜೆ 4 ಗಂಟೆಗೆ ಹೆಲಿಕಾಪ್ಟರ್‍ನಲ್ಲಿ ಕೆಆರ್‌ಎಸ್ ಹೆಲಿಪ್ಯಾಡ್‍ಗೆ ಬಂದಿಳಿದ ಕುಮಾರಸ್ವಾಮಿ ಅವರು, ಸಂಜೆ 4.30 ಗಂಟೆಗೆ ಗೋಧೂಳಿ ಶುಭಲಗ್ನದಲ್ಲಿ ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಕೆಆರ್‌ಎಸ್‌ನ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದರು. ಶ್ರೀರಂಗಪಟ್ಟಣದ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅರ್ಚಕರು ವಿಶೇಷ ಪೂಜಾ ವಿಧಿವಿಧಾನ ಗಳನ್ನು ನಡೆಸಿದ ನಂತರ ಕಾವೇರಿಗೆ ಬಾಗಿನ ಸಮರ್ಪಣೆ ಮಾಡಲಾಯಿತು. ನಂತರ ಕಾವೇರಿ ಮಾತೆಗೂ ಮುಖ್ಯಮಂತ್ರಿ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ, ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಶ್ರೀರಂಗಪಟ್ಟಣ ಶಾಸಕ ಎ.ಎಸ್. ರವೀಂದ್ರ ಶ್ರೀಕಂಠಯ್ಯ, ಮೈಸೂರು ಮೇಯರ್ ಬಿ. ಭಾಗ್ಯವತಿ, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್ ನಜೀರ್ ಅಹ್ಮದ್, ಶಾಸಕರಾದ ಕೆ.ಸಿ. ನಾರಾಯಣಗೌಡ, ಎಂ. ಶ್ರೀನಿವಾಸ್, ಡಾ. ಕೆ. ಅನ್ನದಾನಿ, ಅಶ್ವಿನ್‍ಕುಮಾರ್, ಕೆ. ಮಹದೇವ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇ ಗೌಡ, ಅಪ್ಪಾಜಿಗೌಡ ಉಪಸ್ಥಿತರಿದ್ದರು. ಶ್ರೀರಂಗಪಟ್ಟಣ ತಾಲೂಕು ಪಂಚಾಯತ್ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ನಂದಾಮಣಿ ಚಂದ್ರಶೇಖರ್, ಜಿಲ್ಲಾ ಪಂಚಾಯತ್ ಸದಸ್ಯೆ ಬಿ.ಜೆ. ಸವಿತಾ ಲೋಕೇಶ್, ಕೆಆರ್‌ಎಸ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಮಹದೇವ, ಉಪಾಧ್ಯಕ್ಷ ಪಿ. ರಾಜು ಅವರು ಈ ಸಂದರ್ಭ ಹಾಜರಿದ್ದರು.
ಕಾವೇರಿ ಮಾತೆ ಪ್ರತಿಮೆ ಬಳಿ ಏರ್ಪಡಿಸಿದ್ದ ವೇದಿಕೆ ಸಮಾರಂಭದಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು ಹಾಗೂ ಗಣ್ಯರನ್ನು ಮಂಡ್ಯ ಜಿಲ್ಲಾಡಳಿತ ಹಾಗೂ ಕಾವೇರಿ ನೀರಾವರಿ ನಿಗಮ ನಿಯಮಿತ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಜೈಪ್ರಕಾಶ್ ಮುಖ್ಯಮಂತ್ರಿ ಸೇರಿದಂತೆ ಗಣ್ಯರನ್ನು ಸ್ವಾಗತಿಸಿದರೆ, ಕಾವೇರಿ ನೀರಾವರಿ ನಿಗಮ ನಿಯಮಿತ ಮುಖ್ಯ ಆಡಳಿತಾಧಿಕಾರಿ ಡಿ. ರವಿಕುಮಾರ್ ವಂದಿಸಿದರು.
ಬಾಗಿನ ಸಮರ್ಪಿಸಲು ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ ಹಾಗೂ ಅವರ ಸಚಿವ ಸಹೊದ್ಯೋಗಿಗಳನ್ನು ಕೆಆರ್‌ಎಸ್ ದಕ್ಷಿಣ ದ್ವಾರದ ಬಳಿಯಿಂದ ಮಂಗಳವಾದ್ಯ, ಜಾನಪದ ಕಲಾ ಪ್ರದರ್ಶನ ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನ ಬೃಂದಾವನಕ್ಕೆ ಮೆಟಲ್ ಡೋರ್ಡಿಟೆಕ್ಟರ್ ಅಳವಡಿಸಿ ಪೊಲೀಸರು ಭಾರೀ ಕಟ್ಟೆಚ್ಚರ ವಹಿಸಿದ್ದರು. ಸಮಾರಂಭದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಗಣ್ಯರು ಹಾಗೂ ಆಹ್ವಾನಿತರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತಾದರೂ, ಮುಖ್ಯಮಂತ್ರಿಗಳು ಸಂಜೆ 4 ಗಂಟೆಗೆ ಆಗಮಿಸಿದರೂ ನೆರೆದಿದ್ದ ಜನಸಮೂಹ ತುಂತುರು ಮಳೆಯಲ್ಲೂ ಕಾದು ಕುಳಿತಿತ್ತು. ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಲ್. ಪ್ರಸನ್ನ, ನಿರ್ದೇಶಕ ಎಂ. ಬಂಗಾರಸ್ವಾಮಿ, ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ, ಜಿಲ್ಲಾ ಪಂಚಾ ಯತ್ ಮುಖ್ಯ ನಿರ್ವಾಹಕ ಅಧಿಕಾರಿ ಬಿ. ಶರತ್, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಟಿ.ಪಿ. ತ್ರಿಯಂಬಕ, ಸೂಪರಿಂಟೆಂಡೆಂಟ್ ಇಂಜಿನಿಯರ್ ಕೆ.ಆರ್. ಅಮರ್‍ನಾಥ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಕೆ. ಬಸವರಾಜೇಗೌಡ ಹಾಗೂ ಇತರ ಅಧಿಕಾರಿಗಳು ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ಆಯೋಜಿಸಿದ್ದರು.
ಬಾಗಿನ ಸಮರ್ಪಿಸಿದ 15ನೇ ಮುಖ್ಯಮಂತ್ರಿ
ಮೈಸೂರು: ತುಂಬಿ ತುಳುಕುತ್ತಿರುವ ಕೃಷ್ಣರಾಜ ಸಾಗರ ಜಲಾಶಯಕ್ಕೆ ಇಂದು ಬಾಗಿನ ಸಮರ್ಪಿ ಸಿದ ಹೆಚ್.ಡಿ. ಕುಮಾರಸ್ವಾಮಿ, ಈ ಮೂಲಕ ರಾಜ್ಯದ 15ನೇ ಮುಖ್ಯಮಂತ್ರಿ ಎನಿಸಿದ್ದಾರೆ.
1983ರಲ್ಲಿ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್, ಕಾವೇರಿಗೆ ಮಾತೆಗೆ ಬಾಗಿನ ಸಮರ್ಪಣೆ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು. ತದನಂತರ ಜಲಾಶಯ ಭರ್ತಿಯಾದ ಸಂದರ್ಭ ಮುಖ್ಯಮಂತ್ರಿಯಾಗಿದ್ದವರು ಬಾಗಿನ ಸಮರ್ಪಣೆ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದರು.
2006-07ನೇ ಸಾಲಿನಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ವಿದ್ದ ವೇಳೆ ಮುಖ್ಯಮಂತ್ರಿಯಾಗಿದ್ದ ಇದೇ ಕುಮಾರಸ್ವಾಮಿಯವರು ಬಾಗಿನ ಸಮರ್ಪಣೆ ಮಾಡಿ ದ್ದರು. ಆ ಮೂಲಕ ಕುಮಾರಸ್ವಾಮಿಯವರು ಕೆಆರ್‌ಎಸ್‌ಗೆ ಎರಡನೇ ಬಾರಿ ಬಾಗಿನ ಸಮರ್ಪಣೆ ಮಾಡಿದಂತಾಗಿದೆ. ಜುಲೈ ತಿಂಗಳಲ್ಲಿ ಜಲಾಶಯ ಭರ್ತಿ ಯಾಗಿರುವುದು ಇದು 7ನೇ ಬಾರಿ. 2014ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಜುಲೈನಲ್ಲೇ ಬಾಗಿನ ಸಮರ್ಪಣೆ ಮಾಡಿದ್ದರು. ಆದರೆ, ಇಲ್ಲಿವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿಗಳಾದವರ ಪೈಕಿ ರಾಮಕೃಷ್ಣ ಹೆಗಡೆ ಅವರು ಮಾತ್ರ ಕೆಆರ್‌ಎಸ್‌ಗೆ ಬಾಗಿನ ಸಮರ್ಪಣೆ ಮಾಡಿರಲಿಲ್ಲ. ಉಳಿದ ಎಲ್ಲಾ ಮುಖ್ಯಮಂತ್ರಿಗಳು ಈ ಸಂಪ್ರದಾಯ ಪಾಲಿಸಿದ್ದರು ಎಂಬುದೀಗ ಇತಿಹಾಸ.