ಮೋದಿ ಆಲಂಗಿಸಿ, ಕಣ್ಣು ಹೊಡೆದ ರಾಹುಲ್ ವರ್ತನೆಗೆ ಸ್ಪೀಕರ್ ಆಕ್ಷೇಪ
ದೇಶ-ವಿದೇಶ

ಮೋದಿ ಆಲಂಗಿಸಿ, ಕಣ್ಣು ಹೊಡೆದ ರಾಹುಲ್ ವರ್ತನೆಗೆ ಸ್ಪೀಕರ್ ಆಕ್ಷೇಪ

July 21, 2018

ನವದೆಹಲಿ: ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಮಾತನ್ನು ಮುಗಿಸಿದ ನಂತರ ಪ್ರಧಾನಿ ಮೋದಿ ಅವರ ಬಳಿ ತೆರಳಿ, ಹಠಾತ್ ಅವರನ್ನು ಆಲಂಗಿಸಿಕೊಂಡು, ಮತ್ತೆ ತಮ್ಮ ಆಸನದಲ್ಲಿ ಬಂದು ಕೂತು ಪ್ರಧಾನಿಯತ್ತ ದೃಷ್ಟಿ ಹರಿಸಿ, ಕಣ್ಣು ಹೊಡೆದರು.

ರಾಹುಲ್ ಗಾಂಧಿಯವರ ಈ ವರ್ತನೆಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಆಕ್ಷೇಪ ವ್ಯಕ್ತಪಡಿಸಿದರು. `ಪ್ರಧಾನಿಯವರಿಗೆ ಒಂದು ಗೌರವ ವಿರುತ್ತದೆ. ಹಾಗಾಗಿ ಎಲ್ಲಾ ಸಂಸದರು ಸದನದ ನಿಯಮಗಳನ್ನು ಪಾಲಿಸಬೇಕು. ರಾಹುಲ್ ಗಾಂಧಿಯವರ ವರ್ತನೆ ಸದನಕ್ಕೆ ತಕ್ಕುದ್ದಲ್ಲ. ಅವರು ಆಲಂಗಿಸಿದ್ದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಪ್ರತಿಪಕ್ಷದ ಸಂಸದರೊಬ್ಬರು ಕುಳಿತಿರುವ ಪ್ರಧಾನಿಯನ್ನು ಆಲಂಗಿಸಿದ್ದಲ್ಲದೇ, ನಂತರ ಕಣ್ಣು ಹೊಡೆದ ರೀತಿ ಸರಿಯಿಲ್ಲ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯರು. ಸದನದ ನಿಯಮಗಳ ಬಗ್ಗೆ ಕಿರಿಯರಿಗೆ ಮಾರ್ಗದರ್ಶನ ನೀಡಬೇಕು ಎಂದು ಸ್ಪೀಕರ್ ಹೇಳಿದರು.

ರಾಹುಲ್ ಗಾಂಧಿ ತಮ್ಮನ್ನು ಆಲಂಗಿಸಿಕೊಂಡ ಬಗ್ಗೆ ಪ್ರಧಾನಿ ಮೋದಿ ಲೇವಡಿ ಮಾಡಿದರು. ಲೋಕಸಭೆಯಲ್ಲಿ ಉತ್ತರ ನೀಡಿದ ಮೋದಿಯವರು, ರಾಹುಲ್ ಗಾಂಧಿಯವರು ನನ್ನತ್ತ ಬರುತ್ತಿದ್ದಾಗ ಅವರು ನನ್ನನ್ನು ಆಲಂಗಿಸಿಕೊಳ್ಳುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಪ್ರಧಾನಿ ಕುರ್ಚಿಯಿಂದ ನನ್ನನ್ನು ಏಳಿಸಿ ಅವರೇ ಕುಳಿತುಕೊಳ್ಳುತ್ತಾರೇನೋ ಎಂದುಕೊಂಡಿದ್ದೆ ಎಂದು ಛೇಡಿಸಿದರು. ನಂತರ ಮಾತು ಮುಂದುವರೆಸಿದ ಅವರು, ನಾನು ಬಡ ತಾಯಿಯ ಮಗ. ಕೆಲಸ ಗಾರನ ಮಗ. ಹೀಗಾಗಿ ನನಗೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಬರುವುದಿಲ್ಲ. ಆದರೆ ನಿಮ್ಮ ಕಣ್ಣಿನ ಆಟವನ್ನು ದೇಶವೇ ನೋಡಿದೆ ಎಂದರು.

Translate »