ವಿಶ್ವಾಸ ಉಳಿಸಿಕೊಂಡ ಪ್ರಧಾನಿ ಮೋದಿ
ದೇಶ-ವಿದೇಶ

ವಿಶ್ವಾಸ ಉಳಿಸಿಕೊಂಡ ಪ್ರಧಾನಿ ಮೋದಿ

July 21, 2018

ಅವಿಶ್ವಾಸ ಮಂಡಿಸಿದ್ದ ವಿಪಕ್ಷಗಳಿಗೆ ತೀವ್ರ ಮುಖಭಂಗ: 325-126 ಅಂತರದಲ್ಲಿ ಸೋಲು

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾ ರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಭಾರೀ ಸೋಲುಂಟಾಗಿದೆ. ಲೋಕಸಭೆಯಲ್ಲಿ ಹಾಜರಿದ್ದ 451 ಸಂಸದರ ಪೈಕಿ ಅವಿಶ್ವಾಸದ ಪರ ಕೇವಲ 126 ಸಂಸದರು ಮತ ಚಲಾಯಿಸಿದರೆ, ಸರ್ಕಾರದ ಪರ 325 ಸಂಸದರು ಮತ ಚಲಾವಣೆ ಮಾಡಿದರು. ಪ್ರಧಾನಿ ಮೋದಿ 199 ಮತಗಳ ಅಂತರದಲ್ಲಿ ವಿಶ್ವಾಸ ಗಳಿಸಿದ್ದಾರೆ.

ಸರ್ಕಾರವನ್ನು ಶಿವಸೇನೆ, ಅಕಾಲಿದಳ್, ಬಿಜೆಡಿ, ಜೆಡಿಯು, ಎಐಎಡಿಎಂಕೆ ಸೇರಿದಂತೆ ಇತರ ಪಕ್ಷಗಳು ಬೆಂಬಲಿಸಿದವು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸುದೀರ್ಘ 12 ಗಂಟೆಗಳ ಕಾಲ ನಡೆಯಿತು. ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳ ಗದ್ದಲದ ನಡುವೆಯೇ ಒಂದೂವರೆ ಗಂಟೆಗಳ ಕಾಲ ಪ್ರತಿಪಕ್ಷಗಳ ಆರೋಪಗಳಿಗೆ ದಿಟ್ಟ ಉತ್ತರ ನೀಡಿದರು.

ಪ್ರಧಾನಿ ಮೋದಿ ವಿಪಕ್ಷಗಳ ಅವಿಶ್ವಾಸ ಗೊತ್ತು ವಳಿಗೆ ತಿರುಗೇಟು ನೀಡುತ್ತಾ, ಅವರು ಕೇಂದ್ರ ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದು ಹೇಳುತ್ತಿ ದ್ದಾರೆ. ಆದರೆ ಅವರ ಮೇಲೆಯೇ ಅವರಿಗೆ ವಿಶ್ವಾಸವಿಲ್ಲ. ಇದು ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸ ಪರೀಕ್ಷೆಯಲ್ಲ. ಬದಲಿಗೆ ಕಾಂಗ್ರೆಸ್ ಮಿತ್ರ ಪಕ್ಷಗಳ ವಿಶ್ವಾಸ ಪರೀಕ್ಷೆ ಎಂದು ಲೇವಡಿ ಮಾಡಿದರು.

30 ವರ್ಷಗಳ ಬಳಿಕ ಕೇಂದ್ರದಲ್ಲಿ ಬಹುಮತದ ಸರ್ಕಾರ ಬಂದಿದೆ. ಹೀಗಿದ್ದರೂ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತು ವಳಿ ಮಂಡಿಸಲು ಮುಂದಾಗಿವೆ. ಇನ್ನು ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ನಡೆಯದೇ ಹೋದರೆ ಆಕಾಶ ಬಿದ್ದು ಹೋಗುತ್ತದೆಯೇ? ಅಥವಾ ಭೂಕಂಪವಾಗಿಬಿಡುತ್ತದೆಯೇ? ಎಂದು ಟೀಕಾ ಪ್ರಹಾರ ಮಾಡಿದರು.

ವಿಪಕ್ಷಗಳೆಲ್ಲಾ `ಮೋದಿ ಹಠಾವೋ, ದೇಶ್ ಬಚಾವೋ’ ಎಂಬ ಮಾತುಗಳನ್ನಾಡುತ್ತಿವೆ. ಇದನ್ನು ಕೇಳಿ ನನಗೆ ಶಾಕ್ ಆಯಿತು. ಮೋದಿಯನ್ನು ತೊಲಗಿಸಲು ಇಂತಹ ಒಂದು ಪ್ರಯತ್ನ ಮಾಡ ಬೇಕಿತ್ತಾ? ಎಂದು ಪ್ರಶ್ನಿಸಿದರು. 2019ರಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂದು ವಿಪಕ್ಷಗಳು ಹೇಳುತ್ತಿವೆ. ನಮಗೆ 125 ಕೋಟಿ ಜನರ ಬೆಂಬಲವಿದೆ. ಅದಕ್ಕೇ ನಾವಿಲ್ಲಿದ್ದೇವೆ. ಇನ್ನು 2019ರಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾದರೆ ನಾನೇ ಪ್ರಧಾನಿ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನು ಅದರ ಮಿತ್ರ ಪಕ್ಷದಲ್ಲಿ ಪ್ರಧಾನಿ ಆಗುವ ಕನಸನ್ನು ತುಂಬಾ ಜನ ಕಾಣುತ್ತಿದ್ದಾರೆ ಎಂದು ಮೋದಿ ವಿಪಕ್ಷಗಳ ಕಾಲೆಳೆದರು. ಸ್ವಚ್ಛ ಭಾರತ್, ಅಂತಾರಾಷ್ಟ್ರೀಯ ಯೋಗ ದಿನಾಚರಣೆ, ಮೇಕ್ ಇನ್ ಇಂಡಿಯಾ, ಜಿಎಸ್‍ಟಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಆರ್‍ಬಿಐ ಗವರ್ನರ್ ಇವರ್ಯಾರ ಮೇಲೂ ಇವರಿಗೆ ವಿಶ್ವಾಸವಿಲ್ಲ. ಇನ್ನು ಕೇಂದ್ರ ಸರ್ಕಾರದ ಮೇಲೆ ಇವರಿಗೆಲ್ಲಿ ವಿಶ್ವಾಸ ಹುಟ್ಟುತ್ತದೆ. ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಹೋರಾಟದಿಂದ ಕೆಲವರಿಗೆ ಕಷ್ಟ ಉಂಟಾಗಿದೆ. ಡೋಕ್ಲಂ ಬಗ್ಗೆ, ರಫೇಲ್ ಒಪ್ಪಂದದ ಬಗ್ಗೆ ಇವರು ವಿವರ ಕೇಳುತ್ತಾರೆ.

ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕರನ್ನು ಹೊಡೆದು ರುಳಿಸಿದಾಗ ಅದನ್ನು ನಕಲಿ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿದ್ದರು. ಇದು ದೇಶದ ಯೋಧರಿಗೆ ವಿಪಕ್ಷಗಳು ಮಾಡಿದ ಅಪಮಾನ. ಪ್ರತಿಯೊಂದಕ್ಕೂ ಸಾಕ್ಷಿ ಕೇಳುತ್ತಾರೆ. ಸಾಕ್ಷ್ಯ ನೀಡಿದರೂ, ಮತ್ತೊಂದು ಪ್ರಶ್ನೆ ಎತ್ತುತ್ತಾರೆ. ಇವರಿಗೆ ದೇಶದ ಸುರಕ್ಷತೆ ಭದ್ರತೆ ಬಗ್ಗೆ ಯಾವುದೇ ಕಾಳಜಿ ಇದ್ದಂತಿಲ್ಲ ಎಂದು ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದ ಮೋದಿ, ಸೈನ್ಯದ ಬಗ್ಗೆ ಅವರಿಗೆ ವಿಶ್ವಾಸವಿಲ್ಲ. ಸೈನಿಕರ ಬಲದ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಸೈನಿಕರ ಬಗ್ಗೆ ಪ್ರಶ್ನಿಸುವುದನ್ನು ನಿಲ್ಲಿಸಿ, ಅವರಿಗೆ ನೈತಿಕ ಬೆಂಬಲ ನೀಡಿ. ಅವರ ಜೊತೆ ಸರ್ಕಾರವಿದೆ. ನೀವು ಸೈನಿಕರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಬೇಡಿ ಎಂದು ವಿಪಕ್ಷಗಳಿಗೆ ಹೇಳಿದರು.

ನಾನು ದೇಶದ ಬಡ ಜನತೆಯ, ಸೇನೆಯ, ಯುವ ಜನತೆಯ, ರೈತರ ಜೊತೆಗಿದ್ದೇನೆ. ನಮ್ಮ ಸರ್ಕಾರ ಬಡ ಜನತೆಯ ಜೊತೆಗಿದೆ. ಕಾಂಗ್ರೆಸ್‍ನಂತೆ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಬಡ ಜನತೆಯ ದುಃಖದಲ್ಲಿ ನಾನು ಪಾಲುದಾರನಾಗಿದ್ದೇನೆ ಎಂದರು.

ಮೊರಾರ್ಜಿ ದೇಸಾಯಿ, ಚೌಧರಿ ಚರಣ್ ಸಿಂಗ್, ಹೆಚ್.ಡಿ.ದೇವೇಗೌಡರ ಸರ್ಕಾರ ವಿದ್ದಾಗ, ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ ಕಾಂಗ್ರೆಸ್ ಅವರಿಗೆ ಹೇಗೆ ಮೋಸ ಮಾಡಿದೆ ಎನ್ನುವುದು ದೇಶಕ್ಕೇ ತಿಳಿದಿದೆ. ಹಾಗೆಯೇ ಪ್ರಣಬ್ ಮುಖರ್ಜಿ ಅವರಿಗೆ, ಶರದ್ ಪವಾರ್ ಅವರಿಗೆ ಹೇಗೆ ಮೋಸ ಮಾಡಿದ್ದೀರಿ ಎನ್ನುವುದೂ ಜನರಿಗೆ ತಿಳಿದಿದೆ ಎಂದ ಪ್ರಧಾನಿ, ಅಧಿಕಾರದ ಆಸೆಗಾಗಿ ಜನರನ್ನು, ರಾಜ್ಯಗಳನ್ನು ಇಬ್ಭಾಗ ಮಾಡುವ ಕೆಲಸವನ್ನು ನಾವು ಮಾಡಿಲ್ಲ. ಆದರೆ ಕಾಂಗ್ರೆಸ್ ಮಾಡಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಇದಕ್ಕೆ ಸೂಕ್ತ ಉದಾಹರಣೆ. ರಾಜ್ಯ ಇಬ್ಭಾಗ ಮಾಡಿ, ಜನರನ್ನು ವಿಭಜಿಸಿ ನೀವು ಅಧಿಕಾರ ಪಡೆದಿರಿ. ಆದರೆ ಜನರ ಕಲ್ಯಾಣದ ಬಗ್ಗೆ ಯೋಚಿಸಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಟೀಕಾ ಪ್ರಹಾರ ಮಾಡಿದರು. ಸುಮಾರು ಒಂದೂವರೆ ಗಂಟೆ ಕಾಲ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಮತ್ತು ನಾಲ್ಕು ವರ್ಷದಲ್ಲಿ ಅದರಿಂದಾದ ಪ್ರಯೋಜನಗಳನ್ನು ವಿವರಿಸಿದರು.

Translate »