ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಎಂದಿನಂತೆ ಜನರನ್ನು ನಿಯಂ ತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬ್ಯಾರಿಕೇಡ್‍ಗಳನ್ನು ತಳ್ಳಿ ಮುಂದೆ ಮುಂದೆ ಬರಲು ಯತ್ನಿಸುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೇಡ್‍ಗೆ ತಮ್ಮ ಬಲವನ್ನೆಲ್ಲಾ ಬಿಟ್ಟು ತಳ್ಳಿ ಹಿಡಿದು ಜನರನ್ನು ನಿಯಂತ್ರಿಸುತ್ತಿದ್ದರು. ಜಂಬೂಸವಾರಿ ಮಾರ್ಗದ ಇಕ್ಕೆಲಗಳಲ್ಲಿ ಬೆಳಿಗ್ಗೆಯಿಂದಲೇ ಜಾಗಗಳನ್ನು ಹಿಡಿದು ಕುಳಿತು ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಜನರಿಗೆ ಈ ಬಾರಿ ಮಳೆರಾಯ ಯಾವುದೇ ತೊಂದರೆ ನೀಡಲಿಲ್ಲ. ಸುಡು ಬಿಸಿಲನ್ನೂ ಲೆಕ್ಕಿಸದೆ ಜನ ಮೆರವಣಿಗೆ ವೀಕ್ಷಿಸಿದರು. ಡಾ.ರಾಜ್‍ಕುಮಾರ್ ಡಾ.ವಿಷ್ಣುವರ್ಧನ್ ಉದ್ಯಾನದ ಬಳಿ ಹಾಕಿದ್ದ ಬ್ಯಾರಿಕೇಡ್ ಅನ್ನು ಜನರು ತಳ್ಳಿಕೊಂಡು ಮುಂದೆ ಬರಲು ಪ್ರಯತ್ನಿಸುತ್ತಿದ್ದರು.
ಆದರೂ ಪೊಲೀಸರು ಬಲವಾಗಿ ಹಿಡಿದು ಜನರನ್ನು ನಿಯಂತ್ರಿಸು ತ್ತಿದ್ದರು. ಕೆ.ಆರ್.ವೃತ್ತದ ಬಳಿ ನಗರ ಬಸ್ ನಿಲ್ದಾಣದ ಸಮೀಪ ನಿತ್ರಾಣಗೊಂಡ ಮಹಿಳೆಯೊಬ್ಬರಿಗೆ ನೀರು ಕುಡಿಸಲಾಯಿತು. ನಂತರ ಅವರು ಚೇತರಿಸಿಕೊಂಡರು. ನಗರ ಬಸ್ ನಿಲ್ದಾಣ ಬಳಿ ಬ್ಯಾರಿಕೇಡ್ ಹಿಂದೆ ಮಕ್ಕಳು ಕುಳಿತು ಮೆರವಣಿಗೆ ವೀಕ್ಷಿಸುತ್ತಿದ್ದ ವೇಳೆ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಮಗುವೊಂದು ಬ್ಯಾರಿಕೇಡ್ ಹಿಂದೆ ಸಿಲುಕಿತ್ತು. ಪೊಲೀಸ್ ಪೇದೆಯೊಬ್ಬರು ಮಗುವನ್ನು ಬ್ಯಾರಿಕೇಡ್ ನಿಂದ ಹೊರತಂದು ಮುಂದೆ ಕುಳಿತುಕೊಳ್ಳಲು ಅವಕಾಶ ನೀಡಿ, ಮಗುವನ್ನು ರಕ್ಷಿಸಿದರು