ಜಂಬೂ ಸವಾರಿ ವೀಕ್ಷಿಸಿದ ಸಾವಿರಾರು ವಿದೇಶಿಯರು
ಮೈಸೂರು, ಮೈಸೂರು ದಸರಾ

ಜಂಬೂ ಸವಾರಿ ವೀಕ್ಷಿಸಿದ ಸಾವಿರಾರು ವಿದೇಶಿಯರು

October 20, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆಯಲ್ಲಿ ಅರ್ಜುನನ ಮೇಲೆ ವಿರಾಜಮಾನಳಾಗಿದ್ದ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಸಾವಿರಕ್ಕೂ ಅಧಿಕ ಮಂದಿ ವಿದೇಶಿ ಪ್ರವಾಸಿಗರು ವೀಕ್ಷಿಸಿ ನಮಿಸಿದರು.

ಆಯುರ್ವೇದ ವೃತ್ತದಲ್ಲಿ ಕಲ್ಪವೃಕ್ಷ ಟ್ರಸ್ಟ್ ಹಾಗೂ ಡಾ. ರಾಜಶೇಖರ್ ಮೆಡಿಕಲ್ ಫೌಂಡೇಷನ್ ಸಹ ಯೋಗ ದೊಂದಿಗೆ ಪ್ರತಿವರ್ಷದಂತೆ ಈ ಬಾರಿಯೂ ಆಯೋಜಿಸಿದ್ದ ವೀಕ್ಷಣಾ ಗ್ಯಾಲರಿಯಲ್ಲಿ ಕುಳಿತಿದ್ದ ಸ್ಪೇನ್, ಫ್ರಾನ್ಸ್, ಬ್ರಿಟನ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಅಮೇರಿಕಾ ಹಾಗೂ ಮೈಸೂ ರಿನ ಕಂಪ್ಯೂಟರ್ ಕೇಂದ್ರವೊಂದರಲ್ಲಿ ತರಬೇತಿ ಪಡೆಯುತ್ತಿ ರುವ 30ಕ್ಕೂ ಹೆಚ್ಚು ಚೀನಿ ವಿದ್ಯಾರ್ಥಿಗಳು ಸೇರಿ ಒಟ್ಟು ಸಾವಿರಕ್ಕೂ ಅಧಿಕ ಮಂದಿ ಜಂಬೂ ಸವಾರಿ ವೀಕ್ಷಿಸಿದರು.

ಈ ಜಾಗದಲ್ಲಿ ಆಸೀನರಾಗಿದ್ದ ವಿದೇಶಿ ಪ್ರವಾಸಿಗರು ತಮಗೆ ನೀಡಿದ್ದ ಕಲಾತಂಡ, ಸ್ತಬ್ಧಚಿತ್ರಗಳ ವಿವರಗಳ್ಳುಳ್ಳ ಬ್ರೋಷರ್ ಪ್ರತಿ ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಿದ್ದ ಕಲಾತಂಡ ಗಳ ನೃತ್ಯವನ್ನು ಕೂತೂಹಲದಿಂದ ವೀಕ್ಷಣೆ ಮಾಡಿದರಲ್ಲದೆ, ಇವುಗಳ ಭಾವಚಿತ್ರ ತೆಗೆದು ಮೆರವಣಿಗೆಯ ನೆನೆಪು ಗಳನ್ನು ತಮ್ಮ ಕ್ಯಾಮರಗಳಲ್ಲಿ ದಾಖಲಿಸಿಕೊಳ್ಳುತ್ತಿದ್ದರು. ಇದೇ ರೀತಿ ಚಾಮರಾಜೇಂದ್ರ ಒಡೆಯರ್ ವೃತ್ತ, ಕೆ.ಆರ್.ವೃತ್ತ, ಚಿಕ್ಕಗಡಿಯಾರ ಮುಂಭಾಗ, ದೇವರಾಜ ಮಾರುಕಟ್ಟೆ, ಕೆ.ಆರ್. ಆಸ್ಪತ್ರೆ ಸಮೀಪದ ಫುಟ್‍ಪಾತ್ ಮೇಲೆ ಸ್ಥಳೀಯರ ಮಧ್ಯೆ ಕುಳಿತು ಮೆರವಣಿಗೆ ವೀಕ್ಷಣೆ ಮಾಡುತ್ತಿದ್ದರು.

ಕಳೆದ ಹಲವು ವರ್ಷಗಳಿಂದ ವಿದೇಶಿಗರಿಗೆ, ಜಿಲ್ಲಾಡಳಿತ ಸಹಯೋಗದೊಂದಿಗೆ ಜಂಬೂ ಸವಾರಿ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿದ್ದೇವೆ. ಇದರಿಂದ ಪ್ರತಿ ವರ್ಷ ಅನೇಕ ವಿದೇಶಿ ಪ್ರವಾಸಿಗರು, ಮೆರವಣಿಗೆಯ ಸಡಗರವನ್ನು ಕಣ್ತುಂಬಿಕೊಂಡು ಅವರವರ ದೇಶಕ್ಕೆ ತೆರಳಿದ ಮೇಲೆ ಮುಂದಿನ ಜಂಬೂ ಸವಾರಿ ವೀಕ್ಷಣೆಗೂ ಬೇಡಿಕೆ ಸಲ್ಲಿಸುತ್ತಾರೆ ಎಂದು ಡಾ.ರಾಜಶೇಖರ್ ಅವರು `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರಲ್ಲದೆ, ನಾಡಹಬ್ಬ ದಸರಾ ಮಹೋತ್ಸವವನ್ನು ವಿದೇಶಿಗರು ಹೆಚ್ಚುಹೆಚ್ಚು ವೀಕ್ಷಿಸುವುದರಿಂದ ಈ ಬಗ್ಗೆ ವಿದೇಶದಲ್ಲಿ ಹೆಚ್ಚಿನ ಪ್ರಚಾರವಾಗುತ್ತದೆ. ಇದರಿಂದ ನಮ್ಮ ಸಂಸ್ಕøತಿಗೆ ವಿಶ್ವ ಮಾನ್ಯತೆ ಲಭಿಸುತ್ತದೆ ಎಂದರು.

ಹರ್ಷ ವ್ಯಕ್ತಪಡಿಸಿದ: ವಿವಿಧ ಬಗೆಯ ಜಾನಪದ ಕಲೆ, ಶಾಸ್ತ್ರೀಯ ಕಲೆ, ಸ್ತಬ್ಧಚಿತ್ರ ಹಾಗೂ ಆನೆ ಮೇಲೆ ಚಿನ್ನದ ಅಂಬಾರಿ ಮೆರವಣಿಗೆ ಸೇರಿದಂತೆ ಇತರೆ ಕಲೆಗಳನ್ನು ಸಂಯೋಜನೆ ಮಾಡಿರುವುದು ಸೋಜಿಗ. ಇಂತಹ ಮೆರವಣಿಗೆಯನ್ನು ಬೇರೆ ಯಾವ ದೇಶದಲ್ಲೂ ನೋಡಲು ಸಾಧ್ಯವಿಲ್ಲ. ಆದ್ದರಿಂದ ವಿದೇಶಗಳಲ್ಲಿ ಜಂಬೂ ಸವಾರಿ ಮೆರವಣಿಗೆ ಯನ್ನು ಇಷ್ಟ ಪಡುತ್ತಾರೆ ಎಂದು ಆಸ್ಟ್ರೇಲಿಯ ದೇಶದ ಪ್ರವಾಸಿಗರೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.

ಅಪರಿಚಿತ ವ್ಯಕ್ತಿ ಮೃತ: ಮೈಸೂರಿಗೆ ಆಗಮಿಸಿದ್ದ ಅಪರಿಚಿತ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಯುರ್ವೇದ ವೃತ್ತದಲ್ಲಿ ಜಂಬೂ ಸವಾರಿಗೆ ನಿಯೋಜನೆ ಗೊಂಡಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಪಾಲಿಕೆ ಸಿಬ್ಬಂದಿ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರನ್ನು ವಾಹನದಲ್ಲಿ ಕರೆ ತಂದರು. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದಾಗ ಆತ ಮೃತಪಟ್ಟಿರುವ ಅಂಶ ಬೆಳಕಿಗೆ ಬಂತು ಎಂದು ವೈದ್ಯ ತಿಳಿಸಿದ್ದಾರೆ. ಆದರೆ, ಆತನ ಹೆಸರು, ವಿಳಾಸ ಪತ್ತೆಯಾಗಿಲ್ಲ. ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದ ಇತರೆ ಮೂವರಿಗೆ ಸಣ್ಣಪುಟ್ಟ ಗಾಯಗಳಾ ಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ, ಕಳುಹಿಸಲಾಗಿದೆ ಎಂದರು.

ಆಂಬುಲೆನ್ಸ್‍ಗೂ ತಟ್ಟಿದ ಟ್ರಾಫಿಕ್ ಬಿಸಿ: ಜಿಲ್ಲೆಯ ಗ್ರಾಮಾಂತರ ಪ್ರದೇಶದಿಂದ ರೋಗಿಯೊಬ್ಬರನ್ನು ಇರ್ವಿನ್ ರಸ್ತೆ ಮಾರ್ಗ ದಲ್ಲಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲು 3 ಗಂಟೆ ಸುಮಾರಿನಲ್ಲಿ ಆಂಬುಲೆನ್ಸ್ ಕರೆ ತಂದಿತ್ತು. ಆದರೆ, ಸಾವಿರಾರು ಮಂದಿ ಆಯುರ್ವೇದ ಕಾಲೇಜು ವೃತ್ತದಲ್ಲಿ ಜಮಾಯಿಸಿದ್ದ ರಿಂದ ಆಂಬುಲೆನ್ಸ್‍ಗೆ ದಾರಿ ಮಾಡಿಕೊಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ತಕ್ಷಣ ಪೊಲೀಸರು ಬೇರೆ ಮಾರ್ಗದಲ್ಲಿ ತೆರಳುವಂತೆ ಚಾಲಕನಿಗೆ ಸೂಚಿಸಿದರು.

ಶಿಳ್ಳೆ, ಕೇಕೆ ಮುಗಿಲು ಮುಟ್ಟಿತು: ಆಯುರ್ವೇದ ಕಾಲೇಜು ವೃತ್ತದಲ್ಲಿ ಜಂಬೂ ಸವಾರಿ ಮೆರವಣಿಗೆಯ ಕಲಾತಂಡ ಆಗಮಿಸಿದಾಗ ಈ ಸ್ಥಳದಲ್ಲಿ ಕುಳಿತಿದ್ದ ವೀಕ್ಷಕರು ಒಮ್ಮೆಲೇ ಶಿಳ್ಳೆ, ಕೇಕೆ ಹಾಕಿ ಕಲಾವಿದರನ್ನು ಹುರಿದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Translate »