ಮೈಸೂರು: ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನ ಮೇಲೆ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಬಂದ ನಾಡದೇವಿ ಚಾಮುಂಡೇಶ್ವರಿಯನ್ನು ಕಂಡು ಮೆರವಣಿಗೆಯುದ್ದಕ್ಕೂ ಅಪಾರ ಸಂಖ್ಯೆಯ ಜನರು ಕೈಮುಗಿದು ಹರ್ಷೋದ್ಘಾರದಿಂದ ಘೋಷಣೆ ಕೂಗಿದರು, ಆನಂದಭಾಷ್ಪ ಸುರಿಸಿದರು.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ನಂತರ ಸಂಜೆ 4.32ಕ್ಕೆ ಬಲರಾಮ ದ್ವಾರದಿಂದ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಅರಮನೆಯಿಂದ ಹೊರ ಬರುತ್ತಿದ್ದಂತೆ ಚಾಮರಾಜ ವೃತ್ತದ ಸುತ್ತಲೂ ಕುಳಿತಿದ್ದ ಅಪಾರ ಸಂಖ್ಯೆಯ ಜನ ಏಕಕಾಲಕ್ಕೆ ಹರ್ಷೋದ್ಘಾರಗೈದರು. ನಂತರ ಚಾಮರಾಜ ವೃತ್ತವನ್ನು ಬಳಸಿ ಕೆ.ಆರ್.ವೃತ್ತದ ಕಡೆ ಬರುತ್ತಿದ್ದಂತೆ ಜನರ ಉತ್ಸಾಹ ಮುಗಿಲು ಮುಟ್ಟಿತು. ಕೆ.ಆರ್.ವೃತ್ತದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಕಿಕ್ಕಿರಿದು ನೆರೆದಿದ್ದ ಜನತೆ ನಾಡದೇವತೆಯ ಉತ್ಸವ ಮೂರ್ತಿಯನ್ನು ಕಂಡು ಭಕ್ತಿಪರವಶರಾದರು.
ಮೆರವಣಿಗೆಯಲ್ಲಿ ಸಾಗಿದ ವಿವಿಧ ಜಾನಪದ ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳನ್ನು ಕಣ್ತುಂಬಿಕೊಂಡು ಆನಂದಿಸುತ್ತಿದ್ದ ಜನರು, ಚಿನ್ನದ ಅಂಬಾರಿ ಎದುರಾಗುತ್ತಿದ್ದಂತೆ ಕೇಕೆ, ಸಿಳ್ಳೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು. ಅದರಲ್ಲಿಯೂ ಮಹಿಳೆಯರು, ಹಿರಿಯ ನಾಗರಿಕರಂತೂ ತಾವು ಕುಳಿತಿದ್ದ ಸ್ಥಳದಲ್ಲಿಯೇ ಕೈಮುಗಿದು ಆನಂದಭಾಷ್ಪ ಸುರಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂದಿತು.
ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಕಾಣುತ್ತಿದ್ದಂತೆ ರಸ್ತೆ ಬದಿಯಲ್ಲಿ ಕುಳಿತಿದ್ದ ಜನರು ಚಾಮುಂಡೇಶ್ವರಿಗೆ ಜಯಘೋಷ ಮೊಳಗಿಸಿದರು. ಯುವಕರ ತಂಡ `ಜೈ ಜೈ ಮಾತಾ, ಚಾಮುಂಡಿ ಮಾತಾ, ಚಾಮುಂಡಿ ಮಾತಾಕಿ ಜೈ’ ಎಂಬ ಘೋಷಣೆ ಕೂಗುವ ಮೂಲಕ ನಾಡದೇವಿಯನ್ನು ಸ್ತುತಿಸಿದರು