ಮೈಸೂರು: ಮೈಸೂರಿನಲ್ಲಿ ವರ್ಷವಿಡೀ ನಾನಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಕುರಿತು ಚಿಂತನೆ ನಡೆಸಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.
ದಸರಾ ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ಮುನ್ನ ಲಲಿತ ಮಹಲ್ ಹೋಟೆಲ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೌಹಾರ್ದ ಭೇಟಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವವನ್ನು 10 ದಿನಕ್ಕೆ ಸೀಮಿತ ಮಾಡದೇ ವರ್ಷವಿಡೀ ಕಾರ್ಯಕ್ರಮ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು. ಬೃಂದಾವನ, ಮೇಲುಕೋಟೆ, ಸೋಮನಾಥಪುರ, ಮೈಸೂ ರಿನ ಪಾರಂಪರಿಕ ಕಟ್ಟಡಗಳು, ಕೊಡಗು ಒಳಗೊಂಡಂತೆ ಟೂರಿಸ್ಟ್ ಹಬ್ ಮಾಡುವ ಚಿಂತನೆಯನ್ನು ಸರ್ಕಾರ ಹೊಂದಿದ್ದು, ಈ ಸಂಬಂಧ ಬ್ಲೂ ಪ್ರಿಂಟ್ ತಯಾರಿಸಲು ಸೂಚನೆ ನೀಡಿರುವುದಾಗಿ ತಿಳಿಸಿದರು.
ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಪ್ರವಾಸಿಗರನ್ನು ಸೆಳೆಯುವ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದ್ದು, ಬೃಂದಾವನ ಗಾರ್ಡನ್‍ಗೆ ಅಲ್ಲಿ ಶಾಶ್ವತ ದೀಪಾಲಂ ಕಾರ, ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ಪ್ರವಾ ಸಿಗರನ್ನು ಆಕರ್ಷಿಸಲು ಅಂತಾರಾಷ್ಟ್ರೀಯ ಮಟ್ಟದ ಸವಲತ್ತು ನೀಡಲು ದೊಡ್ಡ ಮಟ್ಟದ ಯೋಜನೆಯ ಬಗ್ಗೆ ಪ್ರಾಥಮಿಕ ಚರ್ಚೆಯೂ ಆಗಿದೆ ಎಂದರು.
ಮೈಸೂರಿನ ಫಲಪುಷ್ಪ ಪ್ರದರ್ಶನಕ್ಕೆ 4.5 ಲಕ್ಷ ಜನರು ಭೇಟಿ ನೀಡಿ ವೀಕ್ಷಿಸಿದ್ದಾರೆಂಬ ಮಾಹಿತಿ ಇದೆ. ಹಿಂದಿನ ಸರ್ಕಾರ ನಿರ್ಮಿ ಸಿದ ಗಾಜಿನ ಮನೆಯನ್ನು ಉದ್ಘಾಟಿಸಿದ್ದೇನೆ. ಅಲ್ಲಿ ವಿಶೇಷ ಪುಷ್ಪ ಪ್ರದರ್ಶನ ಏರ್ಪಡಿ ಸಿದ್ದು, ಆಕರ್ಷಣೀಯವಾಗಿತ್ತು ಎಂದರು.
10 ದಿನದಲ್ಲಿ 25 ಲಕ್ಷ ಜನ: ದಸರಾ ಮಹೋತ್ಸದದಲ್ಲಿ ಕಳೆದ 10 ದಿನಗಳ ಅವಧಿ ಯಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಮೈಸೂರಿಗೆ ಭೇಟಿ ನೀಡಿ ಕಾರ್ಯಕ್ರಮಗಳನ್ನು ನೋಡಿ ಹೋಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಸಿಎಂ, ಈ ಬಾರಿ ದಸರಾ ಮಹೋತ್ಸವದಲ್ಲಿ 60 ಕಿ.ಮೀ. ವಿದ್ಯುತ್ ಅಲಂಕಾರ ಮಾಡಿರುವ ಬಗ್ಗೆಯೂ ತಿಳಿಸಿದರು.
ಸ್ಟ್ರೀಟ್ ಫೆಸ್ಟಿವಲ್ ಘಟನೆಗೆ ವಿಷಾದ: ಸ್ಟ್ರೀಟ್ ಫೆಸ್ಟಿವಲ್‍ನಲ್ಲಿ ಮಹಿಳೆಯರಿಗೆ ಕಿರುಕುಳದ ಮತ್ತು ಗೊಂದಲದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿರೀಕ್ಷೆಗಿಂತಲೂ ಹೆಚ್ಚು ಜನ ಆಗಮಿಸಿದ್ದರಿಂದ ಗೊಂದಲವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿ ಆಗದಿರಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ನೊಂದಿರುವ ಮಹಿಳೆಯರಿಗೆ ಸರ್ಕಾರದ ಪರವಾಗಿ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಬೆಂಗಳೂರು-ಮೈಸೂರು ಮತ್ತಷ್ಟು ಸಮೀಪ: ಮೈಸೂರು-ಬೆಂಗಳೂರು ರಸ್ತೆ ಅಗಲೀ ಕರಣಕ್ಕೆ ತೀರ್ಮಾನ ತೆಗೆದುಕೊಂಡಿದ್ದು, ಈ ಸಂಬಂಧ ಆಯಾ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಬೆಂಗಳೂರು -ಮೈಸೂರು ನಗರಗಳು ಮತ್ತಷ್ಟು ಸಮೀಪ ಎಂಬ ಭಾವನೆ ಜನರಲ್ಲಿ ಬರುವಂತೆ 10 ಪಥದ ರಸ್ತೆ ಮಾಡುವುದಕ್ಕೆ ಚಾಲನೆ ಕೊಟ್ಟು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿ ಸಲು ನಿರ್ಧರಿಸಿರುವುದಾಗಿಯೂ ಹೇಳಿದರು.
ಸೌಹಾರ್ದ ಕೂಟದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಣ್ಣ ಕೈಗಾರಿಕೆ ಸಚಿವ ಶ್ರೀನಿವಾಸ್, ಶಾಸಕ ರಾದ ಅಶ್ವಿನ್‍ಕುಮಾರ್, ಡಾ.ಅನ್ನದಾನಿ, ಶ್ರೀಕಂಠೇಗೌಡ, ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್. ಆರ್.ವಿಶುಕುಮಾರ್ ಉಪಸ್ಥಿತರಿದ್ದರು.
ಯಾರೂ ಚಿಕಿತ್ಸೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ
ಮೈಸೂರು: ಇನ್ನೂ ಆರೋಗ್ಯ ಕಾರ್ಡ್ ಆಗುತ್ತಿಲ್ಲ, ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರಿದೆ. ಈ ಬಗ್ಗೆ ತಕ್ಷಣದಲ್ಲಿ ನಿರ್ಧಾರ ಕೈಗೊಳ್ಳ ಲಿದ್ದು, ಯಾರೂ ಚಿಕಿತ್ಸೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಈ ಕುರಿತು 3-4 ದಿನದಲ್ಲಿ ಸಭೆ ಕರೆಯಲಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಭಯ ನೀಡಿದ್ದಾರೆ.
ಮೈಸೂರಿನ ಲಲಿತ ಮಹಲ್ ಹೋಟೆಲ್‍ನಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೌರ್ಹಾರ್ದ ಭೇಟಿ ಸಂದರ್ಭದಲ್ಲಿ ಮಾತನಾಡಿದ ಅವರು, ಚಿಕಿತ್ಸೆಗೆಂದು ಯಾರೇ ಬಂದರೂ ಅವರಿಗೆ ತೊಂದರೆ ಇಲ್ಲದಂತೆ ಚಿಕಿತ್ಸೆ ದೊರೆಯಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇನೆ ಎಂದರು.
ಕರ್ನಾಟಕ ಆರೋಗ್ಯಶ್ರೀ ಯೋಜನೆ ಮಾಡಿ ಯಶಸ್ವಿನಿ ಯನ್ನು ಇದರಲ್ಲಿ ಸೇರ್ಪಡೆ ಮಾಡಿದಾಗ ಹಲವು ರೀತಿಯ ತೊಂದರೆ ಜನಸಾಮಾನ್ಯರಿಗೆ ಆಗಲಿದೆ. ಹಾಗಾಗಿ ನನಗೆ 2 ತಿಂಗಳ ಕಾಲಾವಕಾಶ ನೀಡಿ. ಆರೋಗ್ಯ ಯೋಜನೆಯನ್ನು 4 ಕೋಟಿ ಜನರಿಗೂ ಒಳ್ಳೆಯದಾಗುವ ರೀತಿಯಲ್ಲಿ ಮಾಡ ಲಿರುವುದಾಗಿ ಅವರು ಭರವಸೆ ನೀಡಿದರು.
ಸಾಲಮನ್ನಾ, ಸಮರೋಪಾದಿ ಕೆಲಸ: ಸಾಲಮನ್ನಾ ನಂತ ರವೂ ಬ್ಯಾಂಕ್‍ಗಳು ರೈತರಿಗೆ ನೋಟೀಸ್ ನೀಡುತ್ತಿರುವ ಬಗ್ಗೆ ಗಮನ ಸೆಳೆದ ಪ್ರಶ್ನೆಗೆ ಉತ್ತರಿಸಿದ ಅವರು, ಸಹಕಾರ ಬ್ಯಾಂಕ್‍ನ 10,000 ಕೋಟಿಯಲ್ಲಿ 4900 ಕೋಟಿ ಬಿಡುಗಡೆ ಮಾಡಿದ್ದೇನೆ. ಮುಂದಿನ ಒಂದನೇ ತಾರೀಖಿನಿಂದ ಸಮರೋಪಾದಿಯಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಹೊಸ ಕೃಷಿ ಪದ್ಧತಿ ಚಿಂತನೆ: ಆತ್ಮಹತ್ಯೆ ಸಂಪೂರ್ಣ ನಿಲ್ಲ ಬೇಕು. ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಸಾಕಷ್ಟು ಬಾರಿ ಹೇಳಿದ್ದೇನೆ. ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಕಾರ್ಯಕ್ರಮಗಳನ್ನು ಮಾಡಲಿದ್ದೇನೆ. ರೈತರ ಬೆಳೆಗೆ ಬೆಲೆ, ವಾತಾವರಣಕ್ಕೆ ತಕ್ಕ ಬೆಳೆ, ಹೊಸ ರೀತಿಯ ಕೃಷಿ ಪದ್ಧತಿ ತರಲು ಚಿಂತನೆ ನಡೆಸಿದ್ದೇನೆ ಎಂದೂ ಹೇಳಿದರು.
ಮುಂಬರುವ ಉಪ ಚುನಾವಣೆಯಲ್ಲಿ ಎಲ್ಲಾ 5 ಕ್ಷೇತ್ರಗಳಲ್ಲೂ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ
ಮಾಡುವ ನಿರ್ಧಾರ ಮಾಡಿದ್ದೇವೆ. ನಾಳೆ ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ವಿಶ್ವನಾಥ್ ಇನ್ನಿತರರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಉಪ ಚುನಾವಣೆಯಲ್ಲಿ ನಮ್ಮ ಒಗ್ಗಟ್ಟು ಪ್ರದರ್ಶಿಸಲಿದ್ದೇವೆ ಎಂದರು.
ಬಿಎಸ್‍ವೈ ಲಘು ಹೇಳಿಕೆ: ಬಳ್ಳಾರಿ, ಶಿವಮೊಗ್ಗ ಗೆದ್ದಾಯಿತು.. ಇನ್ನೂ ಮಂಡ್ಯ ಮಾತ್ರ ಬಾಕಿ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆಗಳು ಲಘು ಅಭಿಪ್ರಾಯ. ಮುಂದಿನ 5 ಚುನಾವಣೆಯ ಫಲಿತಾಂಶವೂ ಅವರಿಗೆ ಮನವರಿಕೆಯಾಗಲಿದೆ. ಅವರು ಸರ್ಕಾರಕ್ಕೆ ಪದೇ ಪದೆ ಡೆಡ್‍ಲೈನ್ ಕೊಡುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.