ಕಬಿನಿ ಹೊರಹರಿವು ಕಡಿಮೆಯಾದರೂ ನಂ.ಗೂಡಲ್ಲಿ ಪ್ರವಾಹ ಇಳಿಮುಖವಾಗಿಲ್ಲ:  3ನೇ ದಿನವೂ ಮೈಸೂರು-ಊಟಿ ಹೆದ್ದಾರಿ ಬಂದ್
ಮೈಸೂರು

ಕಬಿನಿ ಹೊರಹರಿವು ಕಡಿಮೆಯಾದರೂ ನಂ.ಗೂಡಲ್ಲಿ ಪ್ರವಾಹ ಇಳಿಮುಖವಾಗಿಲ್ಲ: 3ನೇ ದಿನವೂ ಮೈಸೂರು-ಊಟಿ ಹೆದ್ದಾರಿ ಬಂದ್

August 13, 2018

ನಂಜನಗೂಡು: ಕಬಿನಿ ಜಲಾಶಯ ದಿಂದ ಹೊರಬಿಡುವ ನೀರಿನ ಪ್ರಮಾಣ ಕಡಿಮೆ ಯಾಗಿದ್ದರೂ ಸಹ ಕಪಿಲಾ ನದಿ ಪ್ರವಾಹ ಕಡಿಮೆಯಾಗಿಲ್ಲ. ಇದರ ಪರಿಣಾಮವಾಗಿ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹದ ಎಫೆಕ್ಟ್ ಮುಂದುವರೆದಿದ್ದು, ಮೂರನೇ ದಿನ ವಾದ ಶನಿವಾರವೂ ಸಹ ಮೈಸೂರು-ಊಟಿ ಹೆದ್ದಾರಿ ಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು.

ಕಬಿನಿ ಜಲಾಶಯಕ್ಕೆ ಇಂದು ಒಳಹರಿವು 50,900 ಕ್ಯೂಸೆಕ್ ಆಗಿದ್ದು, ಕಳೆದ ಎರಡು ದಿನಗಳಿಂದ ಹೊರಬಿಡಲಾಗುತ್ತಿದ್ದ 80 ಸಾವಿರ ಕ್ಯೂಸೆಕ್ ನೀರಿನ ಪ್ರಮಾಣವನ್ನು ಇಂದು 40,500 ಕ್ಯೂಸೆಕ್‍ಗೆ ಇಳಿಸಲಾಗಿತ್ತು. ಆದರೂ ಪ್ರವಾಹವಂತೂ ಕಳೆದ ಎರಡು
ದಿನಗಳಂತೆಯೇ ಇದೆ. ಇನ್ನೂ ಹನ್ನೆರಡು ಗಂಟೆಗಳಲ್ಲಿ ಪ್ರವಾಹದ ಪರಿಣಾಮ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ. ನಂಜನಗೂಡಿನ ಮಲ್ಲನಮೂಲೆ ಮಠದ ಮುಂದೆ ಮೈಸೂರು-ಊಟಿ ಹೆದ್ದಾರಿಯಲ್ಲಿ ನೀರು ನಿಂತಿದ್ದ ಕಾರಣದಿಂದ ಇಂದು ಸಹ ಹೆದ್ದಾರಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು.

ಪರ್ಯಾಯ ರಸ್ತೆ ಯಾದ ಹುಲ್ಲಹಳ್ಳಿ ಮಾರ್ಗ ದಲ್ಲಿರುವ ಹುಲ್ಲಹಳ್ಳಿ-ರಾಂಪುರ ಸೇತುವೆಯ ರಕ್ಷಣಾ ದೃಷ್ಟಿಯಿಂದ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ಇಂದು ಸಂಜೆ ಇಂದ ನಿಷೇಧಿಸ ಲಾಗಿದೆ. ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದರೂ, ‘ಸಮುದ್ರದ ನಂಟು ಉಪ್ಪಿಗೆ ಬರ’ ಎಂಬಂತಹ ಸ್ಥಿತಿ ನಂಜನಗೂಡು ಪಟ್ಟಣದ ನಿವಾಸಿಗಳದ್ದಾಗಿದೆ. ಪಟ್ಟಣ ದೊಳಗೆ ಪ್ರವಾಹ ತಲೆದೂರಿದ್ದರೂ, ನಂಜನಗೂಡು ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಂಜನಗೂಡು ಪಟ್ಟಣಕ್ಕೆ ನೀರು ಪೂರೈಸುವ ಕಾರ್ಯಾಗಾರದ ಪಂಪ್‍ಹೌಸ್ ಜಲಾವೃತವಾಗಿ ಟ್ರಾನ್ಸ್ ಫಾರ್ಮರ್ ನೀರಿನಲ್ಲಿ ಮುಳುಗಿದ ಪರಿಣಾಮ ಮೋಟಾರ್ ಚಲಾಯಿಸಲು ಸಾಧ್ಯವಾಗದೇ ಕಳೆದ ಎರಡು ದಿನಗಳಿಂದ ನಂಜನಗೂಡು ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಇದರಿಂದಾಗಿ ನೀರಿಗಾಗಿ ಕೊಡ ಹಿಡಿದು ಕೊಂಡು ಬೋರ್‍ವೆಲ್ ಇರುವೆಡೆಗೆ ಸಾರ್ವಜನಿಕರು ತೆರಳುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ನಗರಸಭೆ ಟ್ಯಾಂಕರ್‌ನಿಂದ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಿದ್ದರೂ ಕೂಡ, ಅದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದ್ದು, ಸಾರ್ವಜನಿಕರು ನೀರಿಗಾಗಿ ಪರದಾಡುತ್ತಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ನಾಳೆ(ಆ.13) ಇಲ್ಲಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ನಂಜನಗೂಡು ದೇವಸ್ಥಾನ ಭಾಗಶಃ ಜಲಾವೃತವಾಗಿರು ವುದರಿಂದ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳು ಪರದಾಡುವುದು ಮುಂದು ವರೆದಿದೆ. ಮೈದುಂಬಿ ಹರಿಯುತ್ತಿರುವ ಕಪಿಲೆಯನ್ನು ಕಣ್ತುಂಬಿಕೊಳ್ಳಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಬರುವ ಯುವ ಸಮೂಹದ ಸಂಖ್ಯೆಯೂ ಹೆಚ್ಚಾಗಿದೆ.

Translate »