ಅಭ್ಯರ್ಥಿ ಆಯ್ಕೆಗೆ ರಾಜಕೀಯ ಪಕ್ಷಗಳ ಹೆಣಗಾಟ
ಮೈಸೂರು

ಅಭ್ಯರ್ಥಿ ಆಯ್ಕೆಗೆ ರಾಜಕೀಯ ಪಕ್ಷಗಳ ಹೆಣಗಾಟ

August 13, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆ ಸ್ಪರ್ಧಾ ಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಂತಿಮ ಪಟ್ಟಿ ಸಿದ್ಧಪಡಿಸುವುದು ಮೂರು ಪಕ್ಷಗಳಿಗೂ ಸವಾಲಿನ ಕೆಲಸವಾಗಿದೆ.

ಕಳೆದ 2 ದಿನಗಳಿಂದ ಮೂರು ಪಕ್ಷಗಳಿಂದ ಸ್ಪರ್ಧಾಕಾಂಕ್ಷಿಗಳಿಗೆ ಅರ್ಜಿ ವಿತರಿಸಲಾಗುತ್ತಿದ್ದು, ನೂರಾರು ಮಂದಿ ಅರ್ಜಿ ಪಡೆದಿದ್ದಾರೆ. ಜೆಡಿಎಸ್‍ನಿಂದ ನರಸಿಂಹರಾಜ ಕ್ಷೇತ್ರದಲ್ಲಿ 36, ಚಾಮರಾಜ ಕ್ಷೇತ್ರದಲ್ಲಿ 20 ಹಾಗೂ ಕೃಷ್ಣರಾಜ ಕ್ಷೇತ್ರದಲ್ಲಿ 30 ಸೇರಿದಂತೆ 65 ವಾರ್ಡ್‍ಗಳಿಂದ ಒಟ್ಟು 86 ಅರ್ಜಿಗಳು ವಿತರಣೆಯಾಗಿವೆ.

ಹಾಗೆಯೇ ಕಾಂಗ್ರೆಸ್‍ನಲ್ಲಿ ಮೂರು ಕ್ಷೇತ್ರಗಳಿಂದ ಒಟ್ಟು 250 ಸ್ಪರ್ಧಾಕಾಂಕ್ಷಿಗಳು ಅರ್ಜಿ ಪಡೆದಿದ್ದಾರೆ.

ಬಿಜೆಪಿಯಲ್ಲಿ ಉಳಿದೆರಡು ಪಕ್ಷಗಳಿಗಿಂತ ಹೆಚ್ಚು ಸ್ಪರ್ಧಾಕಾಂಕ್ಷಿಗಳಿದ್ದಾರೆ. ಕೃಷ್ಣರಾಜದಲ್ಲಿ 233, ನರಸಿಂಹರಾಜ ದಲ್ಲಿ 150 ಹಾಗೂ ಚಾಮರಾಜ ಕ್ಷೇತ್ರದಲ್ಲಿ 158 ಅರ್ಜಿಗಳ ವಿತರಣೆಯಾಗಿದೆ. ಬಿಜೆಪಿ ಸ್ಪರ್ಧಾಕಾಂಕ್ಷಿಗಳು ಭರ್ತಿ ಮಾಡಿದ ಅರ್ಜಿಗಳನ್ನು ನಾಳೆ(ಆ.13) ಸಂಜೆ 5 ಗಂಟೆಯೊಳಗೆ ತಮ್ಮ ಮಂಡಲ ಅಧ್ಯಕ್ಷರಿಗೆ ವಾಪಸ್ಸು ಸಲ್ಲಿಸಬೇಕಿದ್ದು, ಮಂಗಳವಾರ ಒಟ್ಟು 65 ವಾರ್ಡ್‍ಗಳಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಒಟ್ಟುಗೂಡಿಸಿ, ನಗರಾಧ್ಯಕ್ಷರಿಗೆ ಸಲ್ಲಿಸಲಾಗುವುದು. ಬುಧವಾರ ನಡೆಯಲಿರುವ ಸಭೆಯಲ್ಲಿ ಅರ್ಜಿಗಳ ಪರಿಶೀಲನೆ ನಡೆಸಿ, ಶಾರ್ಟ್‍ಲಿಸ್ಟ್ ಮಾಡುವ ಸಾಧ್ಯತೆಯಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಹಾಗೆಯೇ ಮೈಸೂರು ನಗರ ಪಾಲಿಕೆ ಅಧಿಕಾರವನ್ನು ಸ್ವತಂತ್ರವಾಗಿ ಧಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಗೆಲ್ಲುವ ಕುದುರೆಗಳನ್ನೇ ಕಣಕ್ಕಿಳಿಸುವ ಚಿಂತನೆ ನಡೆದಿದೆ. ಆದರೆ ಪ್ರತಿ ವಾರ್ಡ್‍ನಲ್ಲಿ ಏಳೆಂಟು ಮಂದಿ ಆಕಾಂಕ್ಷಿಗಳು ಅರ್ಜಿ ಪಡೆದಿದ್ದಾರೆ. ಇವರಲ್ಲಿ ಅಂತಿಮವಾಗಿ ಯಾರನ್ನು ಆಯ್ಕೆ ಮಾಡಬೇಕೆಂಬುದು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರಿಗೆ ತಲೆಬಿಸಿಯಾಗಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಭುಗಿಲೇಳುವ ಅಸಮಾಧಾನವನ್ನು ಶಮನ ಗೊಳಿಸುವುದು ಸವಾಲಿನ ಕೆಲಸವಾಗಿದೆ. ಅನೇಕ ಆಕಾಂಕ್ಷಿಗಳು ತಮಗೆ ಹತ್ತಿರವಾಗಿ ರುವ ನಾಯಕರು, ಮುಖಂಡರ ಶಿಫಾರಸ್ಸಿಗೂ ದುಂಬಾಲು ಬಿದ್ದಿದ್ದಾರೆ. ನಾಳೆ (ಆ.13) ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಆ.20ರಂದು ನಾಮಪತ್ರ ಸಲ್ಲಿಸಲು ಕಡೇ ದಿನವಾಗಿದೆ. ಉಳಿದಿರುವ ಒಂದು ವಾರ ಕಾಲಾವಕಾಶ ದಲ್ಲಿ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಕಣಕ್ಕಿಳಿಸಬೇಕಿದೆ.

Translate »