`ಕಾವೇರಿ’ ಕಾಲಿಗೆ ಚುಚ್ಚಿದ ಮೊಳೆ
ಮೈಸೂರು

`ಕಾವೇರಿ’ ಕಾಲಿಗೆ ಚುಚ್ಚಿದ ಮೊಳೆ

September 23, 2019

ಮೈಸೂರು, ಸೆ.22(ಆರ್‍ಕೆಬಿ)- ಮೈಸೂರು ದಸರಾ ಆನೆಗಳ ಉಸ್ತುವಾರಿ ಹೊತ್ತವರ ಅಜಾಗರೂಕತೆಯಿಂದಾಗಿ ಭಾನುವಾರ ಪ್ರತಿದಿನದಂತೆ ಮೆರವಣಿಗೆ ತಾಲೀಮು ಹೊರಟಿದ್ದ ದಸರಾ ಗಜಪಡೆಯ ಕಾವೇರಿ ಆನೆಯ ಕಾಲಿಗೆ ಚೂಪಾದ ಮೊಳೆ ಯೊಂದು ಚುಚ್ಚಿದ ಘಟನೆ ನಡೆಯಿತು.

ಮೈಸೂರು ದಸರಾ ಮಹೋತ್ಸವಕ್ಕೆ ಕೇವಲ ಏಳು ದಿನಗಳಷ್ಟೇ ಬಾಕಿ ಇವೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ದಸರಾ ಗಜಪಡೆಯ ಮೆರವಣಿಗೆ ತಾಲೀಮು ನಡೆಸಲಾಗುತ್ತಿದೆ. ಅಂತೆಯೇ ಭಾನುವಾರವೂ ಬೆಳಿಗ್ಗೆ 7.25ರ ವೇಳೆಗೆ ಅರಮನೆ ಯಿಂದ ಬನ್ನಿಮಂಟಪದ ಕಡೆಗೆ ಗಜಪಡೆ ತಾಲೀಮು ಹೊರಟಿತ್ತು. ಈ ಸಂದರ್ಭದಲ್ಲಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕಾವೇರಿ ಆನೆಯ ಎಡಗಾಲಿಗೆ ಸಣ್ಣ ಮೊಳೆಯೊಂದು ಚುಚ್ಚಿಕೊಂಡಿತು. ಮುಂದೆ ಹೆಜ್ಜೆ ಇಡಲಾಗದ ಕಾವೇರಿ ಅಲ್ಲಿಯೇ ನಿಂತಿತು. ತಕ್ಷಣ ಇದನ್ನರಿತ ಮಾವುತರು ಆನೆಯ ಕಾಲನ್ನು ಪರಿ ಶೀಲಿಸಿದಾಗ ಎಡಗಾಲಿಗೆ ಸಣ್ಣ ಮೊಳೆಯೊಂದು ಚುಚ್ಚಿರುವುದು ಗೊತ್ತಾಯಿತು. ತಕ್ಷಣ ಮೊಳೆಯನ್ನು ತೆಗೆದ ಬಳಿಕವೇ ಕಾವೇರಿ ಮುಂದೆ ಹೆಜ್ಜೆ ಇಟ್ಟಳು. ಆಶ್ಚರ್ಯವೆಂದರೆ ಜಂಬೂಸವಾರಿ ದಾರಿ ಯಲ್ಲಿ ಮೆರವಣಿಗೆ ತಾಲೀಮು ನಡೆಸುವ ಗಜಪಡೆಯ ಮುಂದೆ ಚಲಿಸುವ ವಾಹನಕ್ಕೆ ಸ್ವಯಂಚಾಲಿತ ಮ್ಯಾಗ್ನೆಟಿಕ್ ಟ್ರ್ಯಾಲಿ ಅಳವಡಿಸ ಲಾಗಿರುತ್ತದೆ. ಗಜಪಡೆಗೂ ಮೊದಲೇ ಅದನ್ನು ಮುಂದೆ ಕೊಂಡೊ ಯ್ಯಲಾಗುತ್ತದೆ. ಆನೆ ತಾಲೀಮು ನಡೆಸುವ ಮಾರ್ಗ ಮಧ್ಯೆ ಕಬ್ಬಿಣದ ಮೊಳೆ, ಪಿನ್ನು ಇನ್ನಿತರ ಯಾವುದೇ ವಸ್ತುಗಳನ್ನು ಮ್ಯಾಗ್ನೇಟಿಕ್ ಉಪ ಕರಣ ತಕ್ಷಣ ಆಕರ್ಷಿಸುತ್ತದೆ. ಆದರೆ ಅದರ ಆಕರ್ಷಣೆಗೂ ಸಿಗದ ಕಬ್ಬಿಣದ ಮೊಳೆಯೊಂದು ಕಾವೇರಿ ಆನೆಯ ಕಾಲಿಗೆ ಚುಚ್ಚಿತ್ತು.

ಆನೆಯ ಕಾಲಿಗೆ ಮೊಳೆ ಚುಚ್ಚಿದ್ದನ್ನು ಗಮನಿಸಿದ ಅಲ್ಲಿದ್ದ ಜನರೂ ಅದರ ಸುತ್ತಮುತ್ತ ಮೊಳೆ ಮತ್ತಿತರ ವಸ್ತುಗಳನ್ನು ಹುಡುಕಲಾರಂ ಭಿಸಿದರು. ಈ ವೇಳೆ ಒಂದಷ್ಟು ಕಬ್ಬಿಣದ ಒಂದಿಂಚು, 3 ಇಂಚಿನ ಮೊಳೆಗಳು, ಸಣ್ಣ ಸಣ್ಣ ಮೊಳೆಗಳು, ಹೇರ್‍ಪಿನ್, ಬಟ್ಟೆಪಿನ್ ಗಳನ್ನು ಜನರೇ ಹುಡುಕಿ ತೆಗೆದರು. ಇದಕ್ಕೆ ಕಾರಣ ಹುಡುಕಿ ದಾಗ, ಅರಮನೆ ಬಳಿಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಲಾಗಿದ್ದ ಮ್ಯಾರಥಾನ್ (ಓಟ) ಕಾರ್ಯಕ್ರಮಕ್ಕಾಗಿ ಅಲ್ಲಲ್ಲಿ ಸಣ್ಣ ಸಣ್ಣ ಜರ್ಮನ್ ಡೇರೆ ಮತ್ತು ಶಾಮಿಯಾನಗಳನ್ನು ಹಾಕಲಾಗಿತ್ತು. ಡೇರೆಗಳನ್ನು ಹಾಕುವಾಗ ಅದರ ಕಾರ್ಮಿಕರು ಅಜಾಗರೂಕತೆಯಿಂದ ಮೊಳೆ ಮತ್ತು ಬಟ್ಟೆ ಪಿನ್‍ಗಳು ಅಲ್ಲೊಂದು ಇಲ್ಲೊಂದು ಚೆಲ್ಲಿತ್ತು. ಹೀಗಾಗಿ ಅದು ಆನೆಯ ಕಾಲಿಗೆ ಚುಚ್ಚಲ್ಪಟ್ಟಿತ್ತು. ಇದು ಮ್ಯಾರಥಾನ್ ಆಯೋಜಕರ ನಿರ್ಲಕ್ಷ್ಯ ಒಂದೆಡೆಯಾದರೆ, ಗಜಪಡೆಯ ಮೆರವಣಿಗೆ ತಾಲೀಮಿನ ಜವಾಬ್ದಾರಿ ಹೊತ್ತವರ ನಿರ್ಲಕ್ಷವೈ ಹೌದು.

30 ಮೊಳೆಗಳನ್ನು ಹುಡುಕಿ ತೆಗೆದಿದೆವು: ನಾವು ಕನಿಷ್ಟ 30 ಮೊಳೆ, ಪಿನ್ ಇತರೆ ಚೂಪಾದ ವಸ್ತುಗಳನ್ನು ಹುಡುಕಿ ತೆಗೆದಿದ್ದೇವೆ. ಕಾರ್ಯಕ್ರಮ ಸಂಯೋಜಕರು ಎಚ್ಚರಿಕೆ ವಹಿಸಬೇಕು. ಆನೆಗಳು ಈ ಮಾರ್ಗದಲ್ಲಿ ಓಡಾಡುವುದರಿಂದ ಅವುಗಳ ಕಾಲಿಗೆ ಚುಚ್ಚಿ ಗಾಯವಾಗಬಹುದು ಎಂಬ ಅತ್ಯಲ್ಪ ಜ್ಞಾನವೂ ಆಯೋಜಕರಿಗೆ ಇರಲಿಲ್ಲವೇ? ಎಂಬುದು ಬಲರಾಮ ಗೇಟ್ ಬಳಿ ಕನಿಷ್ಟ 5 ಮೊಳೆಗಳನ್ನು ಗುರುತಿಸಿದ ವಿಘ್ನೇಶ್ ಎಂಬವರು ಆಕ್ಷೇಪಿಸಿದರು. ಕಾವೇರಿ ಆನೆಗೆ ಮೊಳೆ ಚುಚ್ಚಿದ್ದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡರೂ ಇದು ಒಂದು ಸಣ್ಣ ಘಟನೆ. ಆನೆಯ ಪಾದದ ಕೆಳಗೆ ಮಾವುತರು ಕೈಯಾಡಿಸಿದಾಗ ಮೊಳೆ ಇದ್ದದ್ದು ಗೊತ್ತಾಯಿತು. ತಕ್ಷಣ ಅದನ್ನು ತೆಗೆಯಲಾಯಿತು. ಇನ್ನು ಮುಂದೆ ನಾವು ಹೆಚ್ಚು ಜಾಗರೂಕರಾಗಿರುತ್ತೇವೆ. ಇಂತಹ ಘಟನೆ ಮರು ಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ದಸರಾ ಆನೆಗಳ ಆರೋಗ್ಯ ನೋಡಿ ಕೊಳ್ಳುತ್ತಿರುವ ಪಶುವೈದ್ಯ ಡಾ.ಡಿ.ಎನ್.ನಾಗರಾಜು ಹೇಳಿದರು.

ಮ್ಯಾಗ್ನಟಿಕ್ ಟ್ರ್ಯಾಲಿ ಇರುವ ವಾಹನ ಮೊಳೆಗಳನ್ನು ಆಕರ್ಷಿಸಲು ವಿಫಲವಾದ ಬಗ್ಗೆ ಕೇಳಲಾದ ಪ್ರಶ್ನೆಗೆ, ಜೀಪ್‍ನಲ್ಲಿ ಅಳವಡಿಸಲಾದ ಮ್ಯಾಗ್ನಟಿಕ್ ಟ್ರ್ಯಾಲಿ ನಿರ್ದಿಷ್ಟ ಮಾರ್ಗದಲ್ಲಿ ಚಲಿಸುತ್ತಿದ್ದರೆ, ಆನೆಗಳು ಅದೇ ನಿರ್ದಿಷ್ಟ ಮಾರ್ಗದಲ್ಲಿ ನಡೆಯುವುದಿಲ್ಲ. ಅವು ನಡೆಯುವಾಗ ಅತ್ತಿತ್ತಲೂ ಹೆಜ್ಜೆ ಇಡುತ್ತಾ ಸಾಗುತ್ತವೆ. ಹೀಗಾಗಿ ಈ ಘಟನೆ ನಡೆದಿರಬಹುದು ಎನ್ನುತ್ತಾರೆ ಅವರು. ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಲೆಕ್ಷಾಂಡರ್ ಪ್ರಕಾರ ಇದು ಸಣ್ಣ ವಿಷಯವಾಗಿದೆ. ಕಾಡಿನಲ್ಲಿಯೂ ಆನೆಗಳು ಬಿದಿರಿನ ಮುಳ್ಳುಗಳು, ಇತರೆ ಚೂಪಾದ ಮರದಿಂದ ಚುಚ್ಚುತ್ತವೆ. ಇದು ಒಂದು ಸಣ್ಣ ಘಟನೆ. ನಾವು ಕಾವೇರಿಯ ಕಾಲಿಗೆ ಚುಚ್ಚಿದ್ದ ಮೊಳೆಯನ್ನು ಹೊರ ತೆಗೆದಿದ್ದೇವೆ. ಹೆಚ್ಚು ಜಾಗರೂಕರಾಗಿರಲು ನಮ್ಮ ಸಿಬ್ಬಂದಿಗೆ ಸೂಚಿನೆ ನೀಡಿದ್ದೇನೆ ಎಂದು ಹೇಳಿದರು.

Translate »