ಮುಂಬೈ, ಜ.29- 72 ವರ್ಷದ ಇನ್ಫೋಸಿಸ್ ಸಹ- ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು 82 ವರ್ಷದ ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಾಲಿಗೆ ನಮಸ್ಕರಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದ್ದು, ನಾರಾಯಣಮೂರ್ತಿ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮುಂಬೈನಲ್ಲಿ ಮಂಗಳವಾರ ನಡೆದ ಟೈಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾ ಯಣ ಮೂರ್ತಿ ನೀಡಿದರು. ಈ ವೇಳೆ ನಾರಾಯಣ ಮೂರ್ತಿ ಅವರು ರತನ್ ಟಾಟಾ ಅವರ ಕಾಲುಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ರತನ್ ಟಾಟಾ ಅವರು ಈ ಚಿತ್ರವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, ನನ್ನ ಒಳ್ಳೆಯ ಸ್ನೇಹಿತ ನಾರಾಯಣ ಮೂರ್ತಿ ಅವರ ಕೈಯಿಂದ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ಪಡೆಯುವ ಗೌರವ ನನಗೆ ಸಿಕ್ಕಿತು ಎಂದು ಅವರು ಬರೆದುಕೊಂಡಿದ್ದಾರೆ. ಸಾಫ್ಟ್ ವೇರ್ ಸರ್ವಿಸ್ ಕ್ಷೇತ್ರದಲ್ಲಿ ಇನ್ಫೋಸಿಸ್ ಮತ್ತು ಟಾಟಾ ಸರ್ವಿಸಸ್ ಪ್ರತಿಸ್ಪರ್ಧಿಗಳೆನಿಸಿವೆ. ಹೀಗಿದ್ದರೂ ನಾರಾ ಯಣ ಮೂರ್ತಿ ಅವರು ತಮ್ಮ ಪ್ರತಿಸ್ಪರ್ಧಿಯ ಕಾಲಿಗೆ ನಮಸ್ಕಾರ ಮಾಡಿಕೊಂಡಿದ್ದು ಅಚ್ಚರಿ ಮೂಡಿಸಿದೆ.