75 ಸಾವಿರ ಹುದ್ದೆ ಭರ್ತಿಗೆ ಮುಂದಾದ ಮೋದಿ ಸರ್ಕಾರ
ಮೈಸೂರು

75 ಸಾವಿರ ಹುದ್ದೆ ಭರ್ತಿಗೆ ಮುಂದಾದ ಮೋದಿ ಸರ್ಕಾರ

June 4, 2019

ನವದೆಹಲಿ: ಕಳೆದ 45 ವರ್ಷಗಳಲ್ಲಿಯೇ ಅತಿ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ತೆರೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ.

ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಲಿದೆ. ಕೇಂದ್ರದ ಎಲ್ಲ ಸಚಿವಾಲಯಗಳಲ್ಲಿ ಮತ್ತು ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಸರ್ಕಾರ, ಮುಂದಿನ ಕೆಲವು ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಿದ್ದು, ಭರವಸೆ ನೀಡಿದಂತೆ ಉದ್ಯೋಗ ಸೃಷ್ಟಿ ಕಾರ್ಯಗಳು ನಡೆ ಯುತ್ತಿಲ್ಲ ಎಂದು ಕಳೆದ ಅವಧಿಯ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಭಾರಿ ಟೀಕಾಪ್ರಹಾರ ನಡೆಸಿದ್ದವು. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ನಿರುದ್ಯೋಗದ ಕುರಿತಾದ ವರದಿ ಪ್ರಕಟವಾಗಿದ್ದು, ಸರ್ಕಾರದ ಮೇಲಿನ ಒತ್ತಡ ವನ್ನು ಹೆಚ್ಚಿಸಿದೆ. ಹೀಗಾಗಿ ಉದ್ಯೋಗದ ಬಿಕ್ಕಟ್ಟು ನಿವಾರಿಸುವುದನ್ನು ತನ್ನ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ ಸರ್ಕಾರ ತುರ್ತಿನ ಕ್ರಮಕ್ಕೆ ಮುಂದಾ ಗಿದೆ. ನಿರುದ್ಯೋಗದ ಮಟ್ಟ 45 ವರ್ಷಗಳಲ್ಲಿಯೇ ಹೆಚ್ಚಾಗಿರುವುದರಿಂದ ಬಿಕ್ಕಟ್ಟು ಮತ್ತಷ್ಟು ಹೆಚ್ಚಲು ಹಾಗೂ ವಿರೋಧಿಗಳ ಬಾಯಿಗೆ ಮತ್ತೆ ಆಹಾರ ವಾಗಲು ಸರ್ಕಾರ ಬಯಸಿಲ್ಲ.

ಆಂತರಿಕ ಸಮಿತಿ ರಚಿಸಲು ಸೂಚನೆ: ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಎಲ್ಲೆಲ್ಲಿ ಉದ್ಯೋಗ ಖಾಲಿ ಉಳಿದಿದೆ, ಬಿಕ್ಕಟ್ಟಿನ ಮೂಲ ಕಾರಣಗಳ ಅಧ್ಯಯನ ಮತ್ತು ಅಂತಹ ಖಾಲಿ ಹುದ್ದೆಗಳ ಸೃಷ್ಟಿಗೆ ಕಾರಣವಾದ ಅಂಶಗಳನ್ನು ನಿವಾರಿಸಲು ತೆಗೆದುಕೊಳ್ಳಬೇಕಾದ ಆರಂಭಿಕ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಲು ಆಂತರಿಕ ಸಮಿತಿ ಗಳನ್ನು ರಚಿಸುವಂತೆ ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚನೆ ನೀಡಿದೆ.

2019ರ ಜೂನ್ 30ರ ಒಳಗೆ ಎಲ್ಲ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿರುವ ಇಲಾಖೆ, ವಿಶೇಷ ನೇಮಕಾತಿ ಪ್ರಕ್ರಿಯೆ ಮೂಲಕ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಲಿದೆ. ಅರಣ್ಯ ಇಲಾಖೆಯಲ್ಲಿ 3085 ಹುದ್ದೆಗಳ ಭರ್ತಿಗೆ ಒಪ್ಪಿಗೆ.

75 ಸಾವಿರ ಸರ್ಕಾರಿ ಹುದ್ದೆ: ವಿವಿಧ ಸಚಿವಾಲಯಗಳಲ್ಲಿ ಇರುವ ವಿವಿಧ ನೌಕರ ಸ್ಥಾನ ಗಳ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಮಾಹಿತಿ ದೊರಕಿದೆ. ಎಲ್ಲ ಮಾಹಿತಿಗಳೂ ದೊರಕಿದ ಬಳಿಕ ಅದು ಅಂತಿಮ ವರದಿ ಸಿದ್ಧಪಡಿಸಲಿದೆ. ಮುಂದಿನ ಕೆಲವು ದಿನಗಳಲ್ಲಿ ಸುಮಾರು 75 ಸಾವಿರ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಪ್ರಮುಖ ನೇಮಕಾತಿ ಸಂಸ್ಥೆಗಳಲ್ಲಿ ಒಂದಾದ ಸ್ಟಾಫ್ ಸೆಲೆಕ್ಷನ್ ಕಮಿಷನ್‍ಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಮತ್ತು ಪರೀಕ್ಷೆ ಗಳನ್ನು ನಡೆಸುವಂತೆ ಸೂಚಿಸುವ ಸಾಧ್ಯತೆ ಇದೆ.

ಬ್ಯಾಂಕುಗಳಿಗೆ ನೇಮಕಾತಿ: ವಿವಿಧ ಸಾರ್ವ ಜನಿಕ ವಲಯದ ಘಟಕಗಳು ಹಾಗೂ ಸಾರ್ವ ಜನಿಕ ವಲಯದ ಬ್ಯಾಂಕುಗಳಲ್ಲಿ ಸಾವಿರಾರು ಇತರೆ ಖಾಲಿ ಹುದ್ದೆಗಳಿವೆ. ಈ ವಲಯಗಳಿಗೂ ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆ ಆರಂಭ ವಾಗಲಿದೆ. ಅತಿ ಮಹತ್ವದ ಮೂಲಸೌಕರ್ಯ ಯೋಜನೆಯಲ್ಲಿ ಹೆದ್ದಾರಿಗಳ ಉದ್ದವನ್ನು ಮುಂದಿನ ಐದು ವರ್ಷಗಳಲ್ಲಿ 2 ಲಕ್ಷಕ್ಕೆ ದ್ವಿಗುಣಗೊಳಿಸ ಲಾಗುವುದು ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಹೊರ ರಸ್ತೆಗಳ ನಿರ್ಮಾಣವಾಗಲಿದೆ, ಸ್ಮಾರ್ಟ್ ಸಿಟಿಗಳ ಸಂಖ್ಯೆ 100ನ್ನೂ ದಾಟಲಿದೆ. ವಿಳಂಬಗೊಂಡಿರುವ ಯೋಜನೆಗಳು ಚುರುಕು ಪಡೆಯಲಿವೆ ಎಂದು ಹೇಳಿದ್ದಾರೆ.

Translate »