ಡಿ.14ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮೀನುಗಾರರ ಬೃಹತ್ ಸಮಾವೇಶ
ಮೈಸೂರು

ಡಿ.14ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮೀನುಗಾರರ ಬೃಹತ್ ಸಮಾವೇಶ

December 13, 2019

ಮೈಸೂರು,ಡಿ.12(ಪಿಎಂ)- ರಾಷ್ಟ್ರೀಯ ಮೀನುಗಾರರ ಸಂಘ, ಕರ್ನಾಟಕ ಘಟಕದ ವತಿಯಿಂದ 39 ಪರ್ಯಾಯ ಪದಗಳಿಂದ ಗುರುತಿಸಲ್ಪಡುವ ಮೀನುಗಾರರ ಸಮುದಾಯ ಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ವಿಕಾಸಕ್ಕಾಗಿ ಡಿ.14 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮೀನುಗಾರರ ಬೃಹತ್ ಸ್ವಾಭಿಮಾನಿ ವಿಕಾಸ ಸಮಾವೇಶ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ ಗೌರವಾಧ್ಯಕ್ಷೆ ಪ್ರೊ.ವಸಂತಮ್ಮ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಅಂದು ಬೆಳಿಗ್ಗೆ 10ಕ್ಕೆ ಸಮಾವೇಶ ಉದ್ಘಾಟನೆಗೊಳ್ಳಲಿದೆ. ನವದೆಹಲಿಯ ರಾಷ್ಟ್ರೀಯ ಮೀನು ಗಾರರ ಸಂಘದ ಮಾರ್ಗದರ್ಶನದಲ್ಲಿ ರಾಷ್ಟ್ರದಾದ್ಯಂತ ಮೀನುಗಾರ ಸಮುದಾಯವನ್ನು ಸಂಘಟಿಸುವ ಉದ್ದೇಶ ದಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.

ಸಮಾವೇಶದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮೀನುಗಾರಿಕೆ ಸಚಿವರು ಸೇರಿದಂತೆ ಇನ್ನಿತರ ಸಚಿವರು ಹಾಗೂ ಕೇಂದ್ರ ಸರ್ಕಾರದ ಹಲವು ಸಚಿವರು ಭಾಗವಹಿಸಲಿ ದ್ದಾರೆ. 39 ಪರ್ಯಾಯ ಪದಗಳಿಂದ ಗುರುತಿಸುವ ಮೀನು ಗಾರ ಜನಾಂಗಗಳನ್ನು ಪರಿಶಿಷ್ಟ ಪಂಗಡ (ಎಸ್‍ಟಿ) ಪಟ್ಟಿಗೆ ಸೇರ್ಪಡೆ ಮಾಡುವಂತೆ ಸಮಾವೇಶದಲ್ಲಿ ಹಕ್ಕೊ ತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.

ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಒಡಿಸ್ಸಾ ರಾಜ್ಯ ದಲ್ಲಿ ಜಾರಿಯಲ್ಲಿರುವಂತೆ ರಾಜ್ಯದಲ್ಲೂ ಕೆರೆ, ಅಣೆ ಕಟ್ಟೆಗಳಲ್ಲಿ ಮೀನು ಹಿಡಿಯುವ ಅವಕಾಶವನ್ನು ಮೀನು ಗಾರರ ಸಮುದಾಯಗಳ ಸಹಕಾರ ಸಂಘಗಳಿಗೆ ಶೇ.90 ರಷ್ಟು ನೀಡಲು ಕಾನೂನು ಜಾರಿಯಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿವೆ. ಈ ಸಂಬಂಧ ರಾಜ್ಯ ಸರ್ಕಾರ ಸಮರ್ಥ ವಕೀಲರನ್ನು ನೇಮಿಸಿ ತಡೆಯಾಜ್ಞೆ ತೆರವುಗೊಳಿಸಲು ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದರು.

ಮೀನುಗಾರರ ಜನಾಂಗದ ಶಕ್ತಿ ಕೇಂದ್ರವಾದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಮತ್ತು ಗದ್ದಿಗೆಯನ್ನು ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಹಾಗೂ ಶ್ರೀನಿಜಶರಣ ಅಂಬಿಗರ ಚೌಡಯ್ಯ ನಿಗಮಕ್ಕೆ 100 ಕೋಟಿ ರೂ. ಅನುದಾನ ಮೀಸಲಿಡಬೇ ಕೆಂದು ಒತ್ತಾಯಿಸಲಾಗುವುದು. ಅಲ್ಲದೆ, ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ ವಿದ್ಯಾರ್ಥಿನಿಲಯ ಮತ್ತು ಶ್ರೀ ಗಂಗಾಪರಮೇಶ್ವರಿ ದೇವಾಲಯದ ಜೀರ್ಣೋ ದ್ಧಾರಕ್ಕಾಗಿ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಒತ್ತಾಯಿಸಲಾಗುವುದು ಎಂದರು. ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ಚಿಕ್ಕಲಿಂಗಸ್ವಾಮಿ, ಸಮುದಾಯ ಮುಖಂಡರಾದ ನಾಗೇಂದ್ರ, ಸೋಮ ಶೇಖರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »