ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳು ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಸಂವಿಧಾನವು ಒಂದು ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ
ಕೊಡಗು

ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳು ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಸಂವಿಧಾನವು ಒಂದು ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ

April 30, 2019

ಕುಶಾಲನಗರ: ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಜ್ಞಾನವನ್ನು ಒಂದು ಶಕ್ತಿಯನ್ನಾಗಿಸಿಕೊಳ್ಳುವುದು ಹೇಗೆಂಬುದನ್ನು ಇಡೀ ಪ್ರಪಂಚಕ್ಕೆ ತಿಳಿಸಿಕೊಟ್ಟ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‍ರವರ ಜನ್ಮ ದಿನಾಚರಣೆ ಮನುಕುಲ ಇರುವವರೆಗೂ ಪ್ರಪಂಚದಾದ್ಯಂತ ಬಹು ಸಡಗರದಿಂದ ಜರುಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜಗನ್ನಾಥ್ ಕೆ. ಡಾಂಗೆ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋ ತ್ತರ ಕೇಂದ್ರ ಚಿಕ್ಕ ಅಳುವಾರ, ಇಲ್ಲಿನ ವಿಜ್ಞಾನ ಸಂಕೀರ್ಣದಲ್ಲಿ ಸೋಮವಾರ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ 128ನೇ ಜಯಂತ್ಯೋತ್ಸವದ ಅಂಗವಾಗಿ ಸಾಮಾಜಿಕ ಬದಲಾವಣೆಯಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್‍ರವರ ವಿಚಾರಧಾರೆಗಳು’ ಕುರಿತ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ರವರು ಸಾಮಾಜಿಕವಾಗಿ ಸ್ವತಂತ್ರರಾಗದ ಹೊರತು ರಾಜಕೀಯ ಸ್ವತಂತ್ರರಾಗಲು ಸಾಧ್ಯವಿಲ್ಲ ಎಂದವರು. ಈ ದೇಶದ ತಳವರ್ಗದ ಜನರ ಅಭ್ಯುಧ್ಯಯಕ್ಕಾಗಿ ಶ್ರಮಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವು ಒಂದು ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಅದರ ನಡುವೆಯೂ ಆರೋಗ್ಯ, ಜಾಗತಿಕ ಶಾಂತಿ, ಮಹಿಳೆಯರ ಮೇಲಿನ ದೌರ್ಜನ್ಯ, ಧರ್ಮಾಧಾರಿತ ಮತ್ತು ಜಾತಿಯಾಧಾರಿತ ಸಂಘರ್ಷಗಳು, ಶ್ರೀಮಂತರು ಮತ್ತು ಬಡವರ ನಡುವಿನ ತಾರತಮ್ಯದ ಮನೋಭಾವನೆಗಳು ಹೆಚ್ಚಾಗುತ್ತಿರುವುದು ವಿಷಾದನೀಯ ಸಂಗತಿ ಎಂದರು.

ಇಂದು ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಕೇವಲ ಶೇ.26 ಮಾತ್ರ. ಅದರಲ್ಲೂ ಶಿಕ್ಷಣದಲ್ಲಿ ಸ್ವಜನ ಪಕ್ಷಪಾತ ಹೆಚ್ಚಾಗುತ್ತಿದೆ. ಖಾಸಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಸರ್ಕಾರವು ಶಿಕ್ಷಣಕ್ಕೆ ಮೀಸಲಿಡುತ್ತಿರುವ ಬಜೆಟ್‍ನ ಪ್ರಮಾಣವು ಕೇವಲ 56 ಸಾವಿರ ಕೋಟಿ ಮಾತ್ರ. ಅದೇ ಭಾರತೀಯರು ಹೊರದೇಶ ಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ತೆರಳಿದರೆ ಎರಡು ಪಟ್ಟು ಹೆಚ್ಚಿನ ಬಜೆಟ್ ಮೀಸಲಿಡಲಾಗುತ್ತಿದೆ. ಅದರ ಬದಲಿಗೆ ನಮ್ಮ ದೇಶದ ಶಿಕ್ಷಣದ ಮಟ್ಟದಲ್ಲಿ ಸುಧಾರಣೆ ತರುವ ಮೂಲಕ ಯುವಜನತೆ ಯಲ್ಲಿ ಸಮಗ್ರ ಆಲೋಚನೆ ಮತ್ತು ಸಾಮಾಜಿಕ ಚಿಂತನೆಗಳು ಹೆಚ್ಚು ಮೂಡುವಂತೆ ಮಾಡಬೇಕು. ಇಂದಿನ ಯುವ ಸಮುದಾಯವು ಕಲಿಕೆಯಲ್ಲೂ ಜಿಪುಣತನವನ್ನು ತೋರಿಸುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ 24 ಲಕ್ಷ ಉದ್ಯೋಗಗಳು ಖಾಲಿ ಇದ್ದು ಬಗೆಹರಿಸುವ ಪ್ರಯತ್ನ ಮಾಡದಿರುವುದು ಶೋಚನೀಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ, ತಳ ಸಮುದಾಯಗಳ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಆರ್.ವಿ.ಚಂದ್ರಶೇಖರ್ ಮಾತನಾಡಿ, ಭಾರತದಲ್ಲಿ ಬಹಳಷ್ಟು ಜನರಿಗೆ ಸಂವಿಧಾನದ ಬಗ್ಗೆ ಕನಿಷ್ಠ ತಿಳುವಳಿಕೆ ಇಲ್ಲ. ನಮ್ಮ ಸುತ್ತಮುತ್ತಲ್ಲಿನಲ್ಲೇ ಇಂದಿಗೂ ಅದೆಷ್ಟೋ ಅಗೋಚರ ಸಮುದಾಯಗಳಿವೆ. ಅವರನ್ನು ಗುರುತಿಸಿ ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ಇಂದಿಗೂ ನಡೆಯುತ್ತಿಲ್ಲ. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ, ಸಹೋದರತೆಯ ಪ್ರತಿಪಾದನೆ ಮಾಡುವುದರ ಜೊತೆಗೆ ಮಹಿಳೆಯರ ಪರ, ಕಾರ್ಮಿಕರ ಪರ, ಸರ್ವರ ಪರ ಧ್ವನಿ ಎತ್ತಿದವರು ಡಾ.ಬಿ.ಆರ್. ಅಂಬೇಡ್ಕರ್ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕರಾದ ಪ್ರೊ.ಮಂಜುಳಾ ಶಾಂತರಾಮ್‍ರವರು, ಸಂವಿಧಾನದ ಮೂಲಕ ಇಡೀ ದೇಶವನ್ನು ಒಂದಾಗಿಸುವ ಮೂಲಕ ಸ್ತ್ರೀಕುಲ ಸೇರಿದಂತೆ ಸಾಮಾನ್ಯ ನಾಗರಿಕನು ಕೂಡ ಗೌರವಯುತವಾಗಿ, ಆತ್ಮವಿಶ್ವಾಸದಿಂದ ಬದುಕನ್ನು ಕಂಡು ಕೊಳ್ಳುವಂತೆ ಮಾಡಿದ ಮಹಾನ್ ಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಐಎಫ್‍ಎಸ್ ಅಧಿಕಾರಿ ಎಸ್. ಸಿದ್ದಪ್ಪ ಹಾಗೂ ವಿಚಾರ ಸಂಕಿರಣದ ಸಂಘಟನಾ ಕಾರ್ಯ ದರ್ಶಿ ಮತ್ತು ಎಸ್‍ಸಿಎಸ್ಟಿ ಸೆಲ್‍ನ ಸಂಯೋಜಕ ರಾಜ್‍ಕುಮಾರ್ ಎಸ್. ಮೇಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸೂಕ್ಷ್ಮಾಣು ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಸಿ.ಪುಷ್ಪಲತಾ, ಸಹ ಪ್ರಾಧ್ಯಾಪಕ ಕೆ.ಎಸ್.ಚಂದ್ರ ಶೇಖರಯ್ಯ, ದೈಹಿಕ ಉಪನಿರ್ದೇಶಕ ಡಾ.ಟಿ.ಕೇಶವಮೂರ್ತಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ.ಕೆ.ಕೆ.ಧರ್ಮಪ್ಪ, ಸಹಾಯಕ ಪ್ರಾಧ್ಯಾಪಕ ಬಿ.ಎಸ್.ಶ್ರೀನಾಥ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಬೋಧಕೇತರ ವೃಂದ, ತಾಂತ್ರಿಕ ವೃಂದ, ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು, ವಿವಿಧ ಕಡೆಯಿಂದ ವಿಚಾರ ಮಂಡನೆ ಮಾಡಲು ಆಗಮಿಸಿದ್ದ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಮಮತಾ ನೆರವೇರಿಸಿದರು.

Translate »