ಮೈಸೂರಿನಲ್ಲಿ ಡಿ.27ರಿಂದ 3 ದಿನಗಳ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ
ಮೈಸೂರು

ಮೈಸೂರಿನಲ್ಲಿ ಡಿ.27ರಿಂದ 3 ದಿನಗಳ ರಾಷ್ಟ್ರೀಯ ಸಮಾಜಶಾಸ್ತ್ರ ಸಮ್ಮೇಳನ

December 25, 2018

ಮೈಸೂರು:  ಮೈಸೂರಿನ ಸಂತ ಫಿಲೋಮಿನಾಸ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಡಿ.27ರಿಂದ 44ನೇ ಅಖಿಲ ಭಾರತ ಸಮಾಜಶಾಸ್ತ್ರ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಭಾರತೀಯ ಸಮಾಜಶಾಸ್ತ್ರ ಸಂಘ, ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ ಸಂಯುಕ್ತವಾಗಿ ಮೂರು ದಿನಗಳ ಸಮ್ಮೇಳನಕ್ಕೆ ಡಿ.27ರಂದು ಬೆಳಿಗ್ಗೆ 9.30 ಗಂಟೆಗೆ ಅಂತಾರಾಷ್ಟ್ರೀಯ ಸಮಾಜಶಾಸ್ತ್ರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಪ್ರೊ.ಮಾರ್ಗರೇಟ್ ಅಬ್ರಹಾಂ ಚಾಲನೆ ನೀಡಲಿದ್ದಾರೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ.ಎಂ.ರಾಫೆಲ್ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ, ಸಂತಫಿಲೋಮಿನಾ ಕಾಲೇಜಿನ ಡಾ.ಬರ್ನಾಡ್ ಪ್ರಕಾಶ್ ಬಾರ್ನಿಸ್, ಭಾರತೀಯ ಸಮಾಜಶಾಸ್ತ್ರ ಸಂಘದ ಅಧ್ಯಕ್ಷೆ ಪ್ರೊ.ಆರ್. ಇಂದಿರಾ ಭಾಗವಹಿಸುವರು ಎಂದು ಅವರು ತಿಳಿಸಿದರು.
ಮೂರು ದಿನಗಳ ಸಮ್ಮೇಳನದಲ್ಲಿ ಮೂರು ಸಾಮಾನ್ಯ ಅಧಿವೇಶನ, ಪ್ರೊ.ರಾಧಾ ಕಮಲ್ ಮುಖರ್ಜಿ, ಪ್ರೊ.ಎಂ.ಎ.ಶ್ರೀನಿವಾಸ್ ಸ್ಮಾರಕ ಉಪನ್ಯಾಸ, ಭಾರತೀಯ ಸಮಾಜಶಾಸ್ತ್ರ ಸಂಘದ 28 ಸಂಶೋಧನಾ ಸಮಿತಿಗಳಲ್ಲಿ ಪ್ರಬಂಧಗಳ ಮಂಡನೆ ನಡೆಯಲಿದೆ. ಕೆಲ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಸೇರಿದಂತೆ ದೇಶದ ನಾನಾ ಭಾಗಗಳಿಂದ ಸುಮಾರು 850ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿ ಸಲಿದ್ದಾರೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷೆ ಪ್ರೊ.ಆರ್.ಇಂದಿರಾ, ಪ್ರೊ. ವಸಂತಮ್ಮ, ಪ್ರೊ. ಜಿ.ಕೆಂಪೇಗೌಡ, ಪ್ರೊ. ಪುಟ್ಟರಾಜು ಉಪಸ್ಥಿತರಿದ್ದರು.

Translate »