ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ: ಸಿಎಂ
ಮೈಸೂರು

ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ: ಸಿಎಂ

November 29, 2018

ಮೈಸೂರು:  ಕುಲಪತಿಗಳ ಈಗಿನ ಆಯ್ಕೆ ಪದ್ಧತಿ ಬಗ್ಗೆ ಬಹಿರಂಗ ಚರ್ಚೆ ಮಾಡಿದರೆ ನಾಳೆ ಮಾಧ್ಯಮಗಳಲ್ಲಿ ಅದೇ ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಮಾಡುತ್ತಾರೆ. ಈಗಿನ ಆಯ್ಕೆ ಪದ್ಧತಿ ಬದಲಾಗಬೇಕೆಂಬುದು ನನ್ನ ನಿಲುವು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮೈಸೂರು ವಿವಿಯ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ಬುಧವಾರ ಆಯೋಜಿಸಿದ್ದ `ಕರ್ನಾಟಕ ರಾಜ್ಯದಲ್ಲಿ ಗುಣಾತ್ಮಕ ಉನ್ನತ ಶಿಕ್ಷಣ; ಸಾಧ್ಯತೆಗಳು ಹಾಗೂ ಸವಾಲುಗಳು’ ಕುರಿತು 28 ವಿವಿಗಳ ಕುಲಪತಿಗಳು ಹಾಗೂ ಶಿಕ್ಷಣ ತಜ್ಞರೊಡನೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 70 ವರ್ಷಗಳಿಂದ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಉನ್ನತ ವ್ಯಾಸಂಗ ಮುಗಿಸಿದ ಯುವಕರಲ್ಲಿ ಭವಿಷ್ಯದ ಬಗ್ಗೆ ಶೂನ್ಯ ಆವರಿಸಿದೆ. ಆದ್ದರಿಂದ ಉನ್ನತ ಶಿಕ್ಷಣ ಆಮೂಲಾಗ್ರ ಬದಲಾವಣೆ ಅವಶ್ಯಕ. ಆದರೆ, ಯಾವ ರೀತಿ ಎಂಬುದನ್ನು ಎಲ್ಲಾ ವಿವಿ ಕುಲಪತಿಗಳು ನೀಲನಕ್ಷೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಎಂದು ಮನವಿ ಮಾಡಿದರು.

ಮೈಸೂರು ವಿವಿ ಸೇರಿದಂತೆ ರಾಜ್ಯದ ಇತರೆ ವಿವಿಗಳಲ್ಲೂ ಕುಲಪತಿ ನೇಮಕ ಬಗ್ಗೆ ಚರ್ಚೆಯಾಗುತ್ತಿದೆ. ಕಳೆದೆರಡು ವರ್ಷಗಳಿಂದ ಮೈಸೂರು ವಿವಿ ಕುಲಪತಿ ಸ್ಥಾನ ಖಾಲಿ ಇತ್ತು. ಈ ಸ್ಥಾನಕ್ಕೆ ಪ್ರೊ.ಹೇಮಂತ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಆದರೆ, ಕುಲಪತಿ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಇರಬೇಕೆಂಬುದು ನನ್ನ ಹಂಬಲ. ಇದರ ಬಗ್ಗೆ ಚರ್ಚೆ ನಡೆಸಿದರೆ, ನಾಳೆಯೇ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಸುದ್ದಿ ಮಾಡುತ್ತಾರೆ. ಆ ಕ್ಷಣದಿಂದಲೇ ಶಿಕ್ಷಣ ಕ್ಷೇತ್ರದ ಬಗ್ಗೆ ಋಣಾತ್ಮಕ ಚರ್ಚೆ ಆರಂಭವಾಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳ ಕಡೆ ಮುಖ ತಿರುಗಿಸಿ ತುಸು ಬೇಸರದಿಂದಲೇ ಹೇಳಿದರು.

ವಿಶ್ವಮಟ್ಟದ ವಿಶ್ವವಿದ್ಯಾನಿಲಯ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಆದರೆ, ಯಾವ ರೀತಿ ಎಂಬುದನ್ನು ಆಯಾಯ ವಿವಿ ಕುಲಪತಿಗಳು ಕ್ರಿಯಾಯೋಜನೆ ರೂಪಿಸಬೇಕು. ಇದಕ್ಕೆ ಬೇಕಾದರೆ, ಬೆಂಗಳೂರಿನ ವಿಧಾನಸೌಧದಲ್ಲಿ ಪ್ರತ್ಯೇಕ ಸಭೆ ನಡೆಸಲು ಸಿದ್ಧನಿದ್ದೇನೆ. ವಿವಿ ಅಭಿವೃದ್ಧಿಗೆ ಕುಲಪತಿಗಳು ನೀಡುವ ಕ್ರಿಯಾ ಯೋಜನೆ ವರದಿ ರಾಜ್ಯ ಸರ್ಕಾರಕ್ಕೆ ತೃಪ್ತಿ ನೀಡಿದರೆ, ಅಂತಹ ವಿವಿಗೆ ಮೊದಲ ಆದ್ಯತೆ ನೀಡಿ, ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.

ಕೆಲವು ತಜ್ಞರು ಉನ್ನತ ಶಿಕ್ಷಣ ಇಲಾಖೆಗೆ ಪೂರ್ಣ ಪ್ರಮಾಣದ ಪ್ರಧಾನ ಕಾರ್ಯದರ್ಶಿ ಯೊಬ್ಬರನ್ನು ನೇಮಕ ಮಾಡುವಂತೆ ಸಲಹೆ ನೀಡಿದ್ದೀರಿ. ಅದೇ ತ್ರಾಸದಾಯಕ. ನೀವು ಹೇಳಿದಂತೆ ಪ್ರಾಮಾಣಿಕ ವ್ಯಕ್ತಿಯನ್ನು ಈ ಹುದ್ದೆಗೆ ನೇಮಿಸಿದರೆ, ಅವರು ಇಲ್ಲ-ಸಲ್ಲದ ಕಾನೂನುಗಳನ್ನು ಹುಡುಕಿ ಉನ್ನತ ಶಿಕ್ಷಣದ ಅಭಿವೃದ್ಧಿಗೆ ತೊಡಕಾಗುತ್ತಾರೆ. ಪ್ರಾಮಾಣಿಕತೆ ರೂಪದಲ್ಲಿರುವ ಐಎಎಸ್ ಅಧಿಕಾರಿಗಳು ಬ್ರಹ್ಮಾಂಡ ಜ್ಞಾನಗಳಂತೆ ವರ್ತಿಸಿ, ಅಭಿವೃದ್ಧಿಯನ್ನೇ ಕಡೆಗಣಿಸುತ್ತಾರೆ. ಅಂತಹ ಅಧಿಕಾರಿಗಳ ಮನಸ್ಥಿತಿ ಎಲ್ಲಾ ವಿವಿ ಕುಲಪತಿಗಳಿಗೆ ಅನುಭವಕ್ಕೆ ಬಂದಿರುತ್ತದೆ. ಸ್ವಲ್ಪ ಧನಾತ್ಮಕವಾಗಿ ಯೋಚಿಸುವವರನ್ನು ತಂದು ಕೂರಿಸಿದರೆ, ಅದಕ್ಕೆ ಬೇರೆ ಅರ್ಥವೇ ಕಲ್ಪಿಸುತ್ತಾರೆ ಎಂದು ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.

ಕೃಷಿ ಕ್ಷೇತ್ರದ ಬಗ್ಗೆ ಎಲ್ಲಾ ವಿವಿಗಳಲ್ಲೂ ಚರ್ಚೆ ಆರಂಭವಾಗಿರುವುದು ಉತ್ತಮ ಬೆಳವಣಿಗೆ. ನಮ್ಮ ಸರ್ಕಾರದಲ್ಲಿ ರೈತರ ಆತ್ಮಹತ್ಯೆ ತಪ್ಪಿಸಲು ಈ ಬಾರಿ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. ಇದು ತಾತ್ಕಾಲಿಕ ಪರಿಹಾರವೆಂಬುದು ನನಗೆ ಗೊತ್ತಿದೆ. ಆದರೆ, ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸಲು ಇಸ್ರೇಲ್ ಮಾದರಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿದೆ. ಅದಕ್ಕೆ ಕೃಷಿಕರಿಗೆ ತರಬೇತಿ ನೀಡುವ ಅಗತ್ಯತೆ ಇದ್ದು, ವಿವಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು. ಇಸ್ರೇಲ್‍ನಲ್ಲಿ ಸಮುದ್ರ ನೀರು ಸಂಸ್ಕರಣೆ, ತಂತ್ರಜ್ಞಾನ ಬಳಕೆ, ಸಹಕಾರಿ ಸಂಘಗಳ ಮೂಲಕ ಕೃಷಿ, ಲಾಭದಾಯಕ ಬೆಳೆಗಳಿಗೆ ಹೆಚ್ಚಿನ ಆದ್ಯತೆ, ಅಲ್ಲಿನ ವಿವಿ, ಸಂಘ-ಸಂಸ್ಥೆಗಳ ನೂತನ ತಂತ್ರಜ್ಞಾನ ಬಳಕೆ ಅರಿವು ಸೇರಿದಂತೆ ಆ ದೇಶದ ಪ್ರಜೆಗಳು ಒಗ್ಗಟ್ಟಿನಲ್ಲಿ ನಂಬಿಕೆ ಇಟ್ಟಿದ್ದಾರೆ. ಇಂತಹ ವಾತಾವರಣ ನಮ್ಮ ಕೃಷಿಕರಲ್ಲಿ ಮೂಡಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದರು.

ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಭಾಗದ ವಿವಿಗಳಲ್ಲಿ ಯುವತಿಯರ ವಿದ್ಯಾಭ್ಯಾಸ ಕ್ಕಾಗಿ ಹಾಸ್ಟೆಲ್ ಸಮಸ್ಯೆ ಬಗ್ಗೆ ಕೃಷ್ಣದೇವರಾಯ ವಿವಿ ಕುಲಪತಿಗಳು ಈ ಸಭೆಯ ಗಮನಕ್ಕೆ ತಂದಿದ್ದಾರೆ. ಇದನ್ನು ಬಗೆಹರಿಸುವುದಾಗಿ ತಿಳಿಸಿದರಲ್ಲದೆ, ಜಾನಪದ, ಸಂಗೀತ, ಅಕ್ಕಾಮಹಾದೇವಿ ಹಾಗೂ ಇತರೆ ವಿವಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಈ ಬಾರಿ ಬಜೆಟ್‍ನಲ್ಲಿ 1200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇದನ್ನು ಕುಲಪತಿಗಳು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.

ನೇಮಕಾತಿ ಬೋರ್ಡ್ ಸ್ಥಾಪನೆಗೆ ಒಲವು: ರಾಜ್ಯದ ಎಲ್ಲಾ ವಿವಿಗಳಲ್ಲಿ ಬೋಧಕರು, ಬೋಧಕೇತರರು ನೇಮಕಾತಿ ಕುರಿತಂತೆ ಪ್ರತ್ಯೇಕ ನೇಮಕಾತಿ ಮಂಡಳಿ ಸ್ಥಾಪಿಸುವಂತೆ ಈ ಸಭೆಯಲ್ಲಿ ಸಲಹೆ ನೀಡಿದ್ದೀರಿ. ಮುಂದಿನ ಅಧಿವೇಶನದಲ್ಲಿ ಇದರ ಸಾಧಕ-ಬಾಧಕ ಪರಿಶೀಲಿಸುತ್ತೇನೆ. ಅಲ್ಲದೆ, ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಆಶ್ವಾಸನೆ ನೀಡಿದರು. ವಿಧಾನಸೌಧದಲ್ಲಿ ಕಲುಷಿತ ವಾತವಾರಣವಿದೆ. ಇದರ ಎಫೆಕ್ಟ್ ಎಲ್ಲಾ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೂ ಹಬ್ಬಿದೆ. ಸಮಸ್ಯೆ ಸುಧಾರಿಸುವ ಬದಲು ನಾವೇ ಮತ್ತಷ್ಟು ಹದಗೆಡಿಸುತ್ತಿದ್ದೇವೆ. ಇದು ದುರಂತವೇ ಸರಿ. ಇದನ್ನು ಸರಿಪಡಿಸಲು ಪ್ರಯತ್ನಿಸಿದರೆ, ಮೈತ್ರಿ ಸರ್ಕಾರದ ಅಸ್ಥಿತ್ವದ ಪ್ರಶ್ನೆ ಎದುರಾಗುತ್ತದೆ. ಮೊನ್ನೆ ಹಿರಿಯ ನಟ ಅಂಬರೀಶ್ ಅಂತ್ಯಕ್ರಿಯೆ ವೇಳೆ ಸರ್ಕಾರ ನಡೆದುಕೊಂಡ ರೀತಿಗೆ ಸಾರ್ವಜನಿಕ ರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಇದು ಎಲ್ಲ ವಿಷಯದಲ್ಲೂ ಈ ರೀತಿ ಆಗಲೂ ಸಾಧ್ಯವಿಲ್ಲ. ಆದ್ದರಿಂದ ನನ್ನ ಇತಿಮಿತಿಯಲ್ಲಿ ಕೆಲಸ ಮಾಡಲು ನಾನು ಸಿದ್ಧನಿದ್ದು, ನನ್ನ ಮೇಲೆ ವಿಶ್ವಾಸವಿಡಿ ಎಂದು ಶಿಕ್ಷಣ ತಜ್ಞರಲ್ಲಿ ಸಿಎಂ ಮನವಿ ಮಾಡಿದರು.

ಎಲ್ಲಾ ವಿವಿಗಳಲ್ಲೂ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ, ಅಂತಹವರಿಂದ ವಿವಿ ಅಭಿವೃದ್ಧಿಗೆ ದೇಣಿಗೆ ಪಡೆಯುವಂತೆ ಸಲಹೆ ನೀಡಿದ್ದೀರಿ, ಇಂತಹ ಸಲಹೆಗಳು ಪ್ರಮುಖವಾಗಿ ಚರ್ಚೆಯಾಗಬೇಕು. ಒಟ್ಟಾರೆ ರಾಜ್ಯ ವಿವಿಗಳಲ್ಲಿ ಶೈಕ್ಷಣಿಕ ಪದ್ಧತಿ, ಸಮಾಜದ ಬದಲಾವಣೆಗೆ ವಿವಿ ಚಿಂತನೆಗಳು ಬದಲಾಗಬೇಕೆಂದು ಒತ್ತಿ ಹೇಳಿದರು.

ವೇದಿಕೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್, ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್.ವಿಶ್ವನಾಥ್, ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ಉಪಸ್ಥಿತರಿದ್ದರು.

ಸಿಎಂ ಸಂವಾದ ಸಭೆಯಲ್ಲಿ ರಾಜ್ಯದ ವಿವಿಧ ವಿವಿ ಕುಲಪತಿಗಳು ಮತ್ತು ಶಿಕ್ಷಣ ತಜ್ಞರಿಂದ ಬಂದ ಸಲಹೆಗಳು:

  • ಕಳೆದ ಹತ್ತು ವರ್ಷಗಳಿಂದ ರಾಜ್ಯದ ವಿವಿಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿ ಮತ್ತು ವಿವಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. -ಕುಲಪತಿ ಪ್ರೊ.ಎಸ್.ಆರ್.ನಿರಂಜನ್, ಗುಲ್ಬರ್ಗಾ ವಿವಿ
  • ಹೈದರಾಬಾದ್ ಮತ್ತು ಉತ್ತರ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಅಭಿವೃದ್ಧಿಗೆ ಅದರಲ್ಲೂ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಗಮನ ಅಗತ್ಯ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ಶಿಷ್ಯವೇತನ ಭಾರೀ ಪ್ರಮಾಣದಲ್ಲಿ ಹೆಚ್ಚಿಸಬೇಕು ಹಾಗೂ ರಾಜ್ಯದ ಎಲ್ಲ ವಿವಿಗಳಲ್ಲೂ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಬೇಕು. ಬಡ ವಿದ್ಯಾರ್ಥಿಗಳಿಗೆ ರಜಾದಿನಗಳಲ್ಲಿ ನರೇಗಾ ಯೋಜನೆಯಲ್ಲಿ ಉದ್ಯೋಗ ನೀಡುವ ಬಗ್ಗೆ ರಾಜ್ಯ ಸರ್ಕಾರ ಕ್ರಿಯಾ ಯೋಜನೆ ರೂಪಿಸಬೇಕು. – ಕುಲಪತಿ ಡಾ.ಎಂ.ಎಸ್.ಸುಭಾಷ್, ಕೃಷ್ಣದೇವರಾಯ ವಿವಿ.
  • ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾದರೆ, ಪ್ರಾದೇಶಿಕ ಭಾಷೆ ಜತೆಗೆ ರಾಷ್ಟ್ರ ಮತ್ತು ಅಂತ್ರಾರಾಷ್ಟ್ರೀಯ ಭಾಷೆ ಇಂಗ್ಲಿಷ್ ಹಾಗೂ ಜರ್ಮನಿ, ಫ್ರೆಂಚ್, ಜರ್ಮನಿ ಭಾಷೆಗಳ ಕಲಿಕೆ ಆಸಕ್ತಿ ವಹಿಸಬೇಕು.
    – ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ಬೆಂಗಳೂರು ವಿವಿ.
  • ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಜ್ಞಾನ ಸಾಮಥ್ರ್ಯ, ಶಿಕ್ಷಣ ನೀತಿ-ನಿಲುವು, ಕೌಶಲಾಭಿವೃದ್ಧಿ ತರಬೇತಿ ಬಗ್ಗೆ ವಿವಿಗಳು ಹೆಚ್ಚಿನ ಒತ್ತು ನೀಡಲು ರಾಜ್ಯ ಸರ್ಕಾರ ಪೂರಕ ವಾತಾವರಣ ನಿರ್ಮಿಸಬೇಕು. – ಡಾ.ಟಿ.ಡಿ.ಕೆಂಪರಾಜು, ಬೆಂಗಳೂರು ಉತ್ತರ ವಿವಿ.
  • ರಾಜ್ಯ ಉನ್ನತ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು.- ಕುಲಪತಿ ಡಾ.ಜೋಗನ್ ಶಂಕರ್, ಕುವೆಂಪು ವಿವಿ.
  • ವ್ಯಕ್ತಿತ್ವ ವಿಕಸನ ಹಾಗೂ ಜ್ಞಾನ ವಿಕಸನಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡಬೇಕ ಲ್ಲದೆ, ರಾಜ್ಯ ವಿವಿಗಳ ಗುಣಮಟ್ಟವನ್ನು ವಿಶ್ವಮಟ್ಟಕ್ಕೇರಿಸಲು ರಾಜ್ಯ ಸರ್ಕಾರ ಸಮಗ್ರ ನೀತಿ ರೂಪಿಸಬೇಕು. – ಕುಲಪತಿ ಡಾ.ವೈ.ಎಸ್.ಸಿದ್ದೇಗೌಡ, ತುಮಕೂರು ವಿವಿ.
  • ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಐಟಿಐ, ಡಿಪ್ಲೊಮಾ, ಬಿ.ಇ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ. ಉದ್ಯಮ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗುತ್ತಿರುವುದರಿಂದ ಹಾಗೂ ವೈ2ಕೆ ಯುಗದ ವಿದ್ಯಾರ್ಥಿಗಳು ತರಗತಿ ಕಲಿಕೆ ಮತ್ತು ಪ್ರಾಯೋಜಿಕ ತರಬೇತಿಗೆ ಸಾಕಷ್ಟು ಬದಲಾವಣೆ ಬಯುಸುತ್ತಿದ್ದು, ಇದಕ್ಕೆ ತಕ್ಕಂತೆ ಈ ಕ್ಷೇತ್ರವನ್ನು ಬದಲಿಸುವುದು ಉತ್ತಮ. – ಪ್ರೊ.ಕರಿಸಿದ್ದಪ್ಪ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ.
  • ವಿವಿಗಳ ಶೈಕ್ಷಣಿಕ ಗುಣಮಟ್ಟ ತೀರಾ ಕಳಪೆಯಾಗಿದೆ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಅರ್ಹತೆ ತಕ್ಕಂತೆ ಉದ್ಯೋಗಗಳು ಲಭ್ಯವಾಗುತ್ತಿಲ್ಲ. ಇದಕ್ಕೆಲ್ಲಾ ನಮ್ಮ ವಿವಿಗಳಲ್ಲಿರುವ ಶೈಕ್ಷಣಿಕ ವಾತಾವರಣ ಕಾರಣ. -ವಿಶ್ರಾಂತ ಕುಲಪತಿ ಪ್ರೊ.ಹೆಚ್.ಎ.ರಂಗನಾಥ್, ಬೆಂಗಳೂರು ವಿವಿ.
  • ಖಾಸಗಿ ಮತ್ತು ರಾಜ್ಯ ಸರ್ಕಾರ ವಿವಿಗಳಲ್ಲಿ ಮಾನವಸಂಪನ್ಮೂಲ ಬಳಸಿಕೊಂಡು ಉತ್ತಮ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ಅಗತ್ಯ.
    -ಡಾ.ಬಿ.ಸುರೇಶ್, ಶಿಕ್ಷಣ ತಜ್ಞ.
  • ಈಗಿನ ವಿದ್ಯಾರ್ಥಿಗಳು 4 ಗೋಡೆಗಳ ಮಧ್ಯೆ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಬದಲಾಗಿ, ಪ್ರಸ್ತುತ ಪ್ರಾಯೋಗಿಕ ಕಲಿಕೆ ಹಾಗೂ ನಿರ್ಬಂಧವಿಲ್ಲದ ಶಿಕ್ಷಣ ಪದ್ಧತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಇದಕ್ಕೆ ಪೂರಕವಾಗಿ ಉನ್ನತ ಶಿಕ್ಷಣ ನೀತಿ-ನಿಯಮಗಳಲ್ಲಿ ಬದಲಾವಣೆ ಅಗತ್ಯ. -ಪ್ರೊ.ಬಿ.ಜೆ.ಸಂಗಮೇಶ್ವರ್, ಶಿಕ್ಷಣ ತಜ್ಞ.
  • ಮುಕ್ತ ವಿವಿಗೆ ಪ್ರಾದೇಶಿಕ ಗಡಿ ಹಾಗೂ ಯುಜಿಸಿ ನಿಯಮಗಳು ಸಾಕಷ್ಟು ಕಠಿಣವಾಗಿವೆ. ಆದ್ದರಿಂದ ರಾಜ್ಯದ ಇತರೆ ವಿವಿಗಳಲ್ಲಿರುವ ದೂರ ಶಿಕ್ಷಣ ಪದ್ಧತಿಗೆ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವುದು ಅಗತ್ಯ.
    -ಕುಲಪತಿ ಪ್ರೊ.ಶಿವಲಿಂಗಯ್ಯ, ಕರ್ನಾಟಕ ರಾಜ್ಯ ಮುಕ್ತ ವಿವಿ.
  • ಜಾನಪದ, ಅಕ್ಕ ಮಹಾದೇವಿ, ಸಂಗೀತ, ಸಂಸ್ಕøತ ವಿವಿಗಳನ್ನು ಬಲು ಉತ್ಸಾಹದಿಂದ ಸ್ಥಾಪಿಸಿದ ರಾಜ್ಯ ಸರ್ಕಾರ, ಆ ನಂತರ ಅವುಗಳಿಗೆ ಮೂಲ ಸೌಕರ್ಯ ಒದಗಿಸಲು ಅನುದಾನ ಬಿಡುಗಡೆ ಮಾಡುತ್ತಿಲ್ಲ. ಇನ್ನು ಯುಜಿಸಿ ನಿಯಮಾವಳಿಗೆ ತಕ್ಕಂತೆ ಅಧ್ಯಾಪಕರ ನೇಮಕಾತಿ ಇಲ್ಲದೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುಧಾನ ಬಳಕೆಯೂ ಸಾಧ್ಯವಾಗುತ್ತಿಲ್ಲ ಮತ್ತು ಈ 4 ವಿವಿಗಳಿಗೆ ಇತರೆ ವಿವಿಗಳ ನಿಯಮಗಳನ್ನು ಹೊರತುಪಡಿಸಿ, ಬೇರೆ ನಿಯಮ ರೂಪಿಸಬೇಕು.
    – ಕುಲಪತಿ ಡಾಪದ್ಮಶೇಖರ್, ಸಂಸ್ಕøತ ವಿವಿ.
  • ಮಧ್ಯಪ್ರದೇಶ, ಒಡಿಶಾ ಸರ್ಕಾರಗಳು ಉನ್ನತ ಶಿಕ್ಷಣ ನೀತಿಯಲ್ಲಿ ಬದಲಾವಣೆ ತಂದು, 3 ಸಾವಿರ ರೂ. ಕೋಟಿಗೂ ಹೆಚ್ಚು ಅನುದಾನವನ್ನು ವಿಶ್ವಬ್ಯಾಂಕ್ ನಿಂದ ಪಡೆದುಕೊಂಡಿವೆ. ಈ ನೀತಿ ನಮ್ಮ ರಾಜ್ಯದಲ್ಲೂ ಅಳವಡಿಕೆಯಾಗಬೇಕು ಮತ್ತು ವಿವಿಗಳಲ್ಲಿ ಪ್ರಪಂಚದ ಮುಂಚೂಣಿಯಲ್ಲಿರುವ ಭಾಷೆಗಳ ಕಲಿಕೆ ಪ್ರಥಮ ಆದ್ಯತೆ ನೀಡಬೇಕು.
    -ಎಸ್.ಎ.ಕೋರಿ, ಶಿಕ್ಷಣ ತಜ್ಞ.

Translate »