ವಸತಿ ಯೋಜನೆ ದುರ್ಬಳಕೆ ತಡೆಗೆ ಹೊಸ ಕಾಯ್ದೆ ರಚನೆ
ಮೈಸೂರು

ವಸತಿ ಯೋಜನೆ ದುರ್ಬಳಕೆ ತಡೆಗೆ ಹೊಸ ಕಾಯ್ದೆ ರಚನೆ

December 12, 2019

ಬೆಂಗಳೂರು,ಡಿ.11(ಕೆಎಂಶಿ)- ವಸತಿ ಯೋಜನೆಯಲ್ಲಿ ದುರ್ಬಳಕೆಯಾಗುವು ದನ್ನು ತಡೆಯಲು ಹೊಸ ಕಾಯ್ದೆ ರೂಪಿಸುವುದಾಗಿ ತಿಳಿಸಿರುವ ವಸತಿ ಸಚಿವ ವಿ.ಸೋಮಣ್ಣ, ರಾಜ್ಯವನ್ನು ಕೊಳಚೆ ಮುಕ್ತ ಮಾಡುವುದಾಗಿ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಯ ಯೋಜನೆಯಡಿ ಭಾರೀ ಅವ್ಯವಹಾರ ನಡೆದು, ಅಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರು ಕೋಟ್ಯಾಂತರ ರೂ. ಗುಳುಂ ಮಾಡಿದ್ದಾರೆ. ಒಂದೇ ಮನೆಯನ್ನು ನಾಲ್ಕರಿಂದ ಹತ್ತು ಜನಗಳಿಗೆ ಹಂಚಿ, ಆ ದುಡ್ಡನ್ನು ಸ್ಥಳೀಯ ಅಧಿಕಾರಿಗಳು, ನುಂಗಿ ಹಾಕಿದ್ದಾರೆ. ಇಂತಹವರನ್ನು ಅಮಾನತು ಮಾಡಿ, ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಅವರು ತಿಳಿಸಿದರು.

ಸೂರಿಲ್ಲದವರಿಗೆ ಸೂರು ನೀಡಲು ಇಟ್ಟಿದ್ದ ಹಣವನ್ನು ಈ ಅಧಿಕಾರಿಗಳು ಗುಳುಂ ಮಾಡಿದ್ದು, ಅಂತಹವರ ಬಗ್ಗೆ ದೊಡ್ಡ ಮಟ್ಟದಲ್ಲಿ ತನಿಖೆ ಆರಂಭವಾಗಿದೆ. ಮೇಲ್ನೊಟಕ್ಕೆ ಕೆಲವು ಜಿಲ್ಲೆಗಳಲ್ಲಿ ಇಂತಹ ಪ್ರಕರಣ ನಡೆದಿದ್ದು, ಎಲ್ಲೆಡೆ ಇದರ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು. ಪಂಚಾಯಿತಿಯ ಸದಸ್ಯರು ತಮ್ಮ ಅಧಿಕಾರವನ್ನು ಬಳಸಿಕೊಂಡು, ತಮ್ಮ ಆಪ್ತರಿಗೆ ನೀಡಿದ್ದಾರೆ. ಬಡವರು ಮತ್ತು ಸೂರಿಲ್ಲದವರು ಹಾಗೆಯೇ ನಿರ್ಗತಿಕರಾಗಿ ಉಳಿದಿದ್ದಾರೆ. ಪ್ರಾಥಮಿಕ ತನಿಖೆ ಯಲ್ಲಿ ಭ್ರಷ್ಟಾಚಾರ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ಸರ್ಕಾರ 6 ಲಕ್ಷ ಆಶ್ರಯ ಮನೆಗಳನ್ನು ಹಂಚಿದ್ದನ್ನು ಹಿಂದಕ್ಕೆ ಪಡೆಯಲಾಗಿದೆ ಎಂದರು. ಭ್ರಷ್ಟಾಚಾರ ತಡೆಗಟ್ಟಿ, ಅರ್ಹರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಹೊಸ ಕಾಯ್ದೆಯನ್ನು ಜಾರಿಗೆ ತರುತ್ತಿದ್ದೇವೆ. ಯಾರೇ ಮುಂದೆ ತಪ್ಪು ಮಾಡಿದರೆ, ಅವರ ವಿರುದ್ಧ ಕ್ರಿಮಿನಲ್ ದಾವೆ ಹೂಡಿ, ಶಿಕ್ಷೆ ವಿಧಿಸುವ ಅವಕಾಶವನ್ನು ಈ ಕಾನೂನಿನಲ್ಲಿ ಕಲ್ಪಿಸುವುದಾಗಿ ಹೇಳಿದರು. ಇನ್ನು ಮುಂದೆ ವಸತಿ ಯೋಜನೆಯಡಿ ಗ್ರಾಮ ಸಭೆ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವುದೇ

ಅಂತಿಮವಲ್ಲ. ತಾರತಮ್ಯ, ಪಕ್ಷಪಾತ ತಪ್ಪಿಸಲು ಮತ್ತು ಅದನ್ನು ತಹಬದಿಗೆ ತರಲು ಪರಿಶೀಲನೆಗೆ ಒಳಪಡಿಸಲಾಗುವುದು. ಮನೆ ಮಂಜೂರಾತಿಯಲ್ಲಿ ಪಾರದರ್ಶಕತೆ ತರಲು ನಿನ್ನೆಯಿಂದ ಮೊಬೈಲ್ ಆ್ಯಪ್ ಬಳಸಲಾಗುತ್ತಿದೆ. ಕಳೆದ ಆರು ವರ್ಷದಲ್ಲಿ 28 ಲಕ್ಷ ಮನೆಗಳು ಮಂಜೂರಾಗಿದ್ದು, 14 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಆರು ಲಕ್ಷ ಮನೆಗಳು ವಿವಿಧ ಹಂತದಲ್ಲಿ ನಿರ್ಮಾಣವಾಗುತ್ತಿವೆ. ಇನ್ನುಳಿದ ಆರು ಲಕ್ಷ ಮನೆ ಮಂಜೂರಾತಿಯನ್ನು ವಾಪಸ್ ಪಡೆಯಲಾಗುವುದು ಎಂದರು.

ಫಲಾನುಭವಿಗಳ ಆಯ್ಕೆ ಪರಿಶೀಲನೆ ಜವಾಬ್ದಾರಿಯನ್ನು ಶಾಸಕರಿಗೆ ಪತ್ರ ಬರೆದು  ನೀಡಲಾಗುವುದು. ಆದರೆ, ಪಂಚಾಯ್ತಿ ಹಕ್ಕನ್ನು ಕಸಿಯುವುದಿಲ್ಲ. ದುರುಪಯೋಗ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಪಂ ಶಿಫಾರಸು ಮಾಡಿದ ಫಲಾನುಭವಿಗಳ ಪಟ್ಟಿಯನ್ನು ತಹಸೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಪರಿಶೀಲನೆ ನಡೆಸಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಕಳುಹಿಸಬೇಕು. ನಂತರ ಜಿಲ್ಲಾಧಿಕಾರಿಗಳ ಸಮಿತಿ ಸಮ್ಮತಿಸಿದ ನಂತರ ಒಪ್ಪಿಗೆ ನೀಡಲಾಗುವುದು. ಸರ್ವರಿಗೂ ಸೂರು ಒದಗಿಸುವುದು, ರಾಜ್ಯವನ್ನು ಕೊಳಚೆ ಮುಕ್ತಗೊಳಿಸುವ ಸಂಕಲ್ಪವನ್ನು ಸರ್ಕಾರ  ಹೊಂದಿದೆ. ಬೆಂಗಳೂರು ನಗರದಲ್ಲಿ 432 ಕೊಳಚೆ ಪ್ರದೇಶಗಳಿದ್ದು, 3.21 ಲಕ್ಷ ಕುಟುಂಬ ಗಳು ವಾಸಿಸುತ್ತಿವೆ. ಇನ್ನೊಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಕೊಳಗೇರಿಗಳ ಸಂಖ್ಯೆಯನ್ನು 150ಕ್ಕೆ ಇಳಿಸುವ ಉದ್ದೇಶವಿದೆ. ಮುಂದಿನ ಮೂರು ವರ್ಷದಲ್ಲಿ ರಾಜ್ಯದಲ್ಲಿ ಕೊಳಚೆ ಮುಕ್ತ ಮಾಡುವ ಪ್ರಯತ್ನದಲ್ಲಿ ಶೇ.80ರಷ್ಟು ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ಈಗಾಗಲೇ 2.80 ಲಕ್ಷ ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ಹೇಳಿದರು.

ಕರ್ನಾಟಕ ಗೃಹ ನಿರ್ಮಾಣ ಮಂಡಳಿ ವತಿಯಿಂದ ಹೊಸಕೋಟೆ, ಚಲ್ಲಘಟ್ಟ, ಮೈಸೂರು ಸೇರಿದಂತೆ 8 ಕಡೆಗಳಲ್ಲಿ ಬಡವರು ಮತ್ತು ಮಧ್ಯಮದವರಿಗೆ ರಿಯಾಯ್ತಿ ದರದಲ್ಲಿ 1 ಮತ್ತು 2 ಕೊಠಡಿಗಳ ನಾಲ್ಕು ಸಾವಿರ ಮನೆ ನಿರ್ಮಿಸಿ, ಮೂರು ವರ್ಷ ಕಾಲ ಮನೆ ನಿರ್ವಹಣೆ ಕೂಡ ಮಾಡಲಾಗುವುದು ಎಂದು ತಿಳಿಸಿದರು.

 

Translate »