ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭ
ಮೈಸೂರು

ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭ

January 18, 2020

ಮೈಸೂರು, ಜ.17(ಆರ್‍ಕೆ)- ಬಹು ನಿರೀಕ್ಷಿತ ಮೈಸೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಇಂದಿನಿಂದ ಆರಂಭ ವಾಯಿತು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ದಲ್ಲಿ ಇಂದು ಬೆಳಿಗ್ಗೆ 11 ಗಂಟೆ ವೇಳೆಗೆ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್, ಮೈಸೂರಿ ನಿಂದ ಬೆಳಗಾವಿಗೆ ನಿತ್ಯ ಹಾರಾಡುವ 72 ಆಸನ ಸಾಮಥ್ರ್ಯದ ಟ್ರೂಜೆಟ್ ವಿಮಾನ ಸೇವೆಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಮೈಸೂರಿನಿಂದ ವಿವಿಧ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ 8ನೇ ವಿಮಾನ ಇದಾ ಗಿದ್ದು, ಮಂಡಕಳ್ಳಿ ವಿಮಾನ ನಿಲ್ದಾಣವೀಗ ಪ್ರತಿದಿನ ಬೆಳಿಗ್ಗೆ 7 ರಿಂದ ರಾತ್ರಿ 9.30 ಗಂಟೆಯವರೆಗೂ ವಿಮಾನ ಹಾರಾಟಗಳಿಂದ ಸಕ್ರಿಯವಾಗಿರುವುದಲ್ಲದೆ, ಪ್ರಯಾಣಿಕರ ಚಲನ-ವಲನಗಳಿಂದ ಕೂಡಿರುತ್ತದೆ.

ಪ್ರತಿ ದಿನ ಬೆಳಿಗ್ಗೆ 9.35ಗಂಟೆಗೆ ಬೆಳಗಾವಿ ಯಿಂದ ಹೊರಡುವ ಟ್ರೂಜೆಟ್ ವಿಮಾನವು ಬೆಳಿಗ್ಗೆ 11 ಗಂಟೆಗೆ ಮೈಸೂರಿಗೆ ಆಗಮಿ ಸಲಿದೆ. ಬೆಳಿಗ್ಗೆ 11.20ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭಿಸಿ ಮಧ್ಯಾಹ್ನ 12.45 ಗಂಟೆಗೆ ಬೆಳ ಗಾವಿ ವಿಮಾನ ನಿಲ್ದಾಣ ತಲುಪುವುದು.

ಮೊದಲ ಟ್ರಿಪ್‍ನಲ್ಲಿ ಬೆಳಗಾವಿಯಿಂದ 40 ಮಂದಿ ಮೈಸೂರಿಗೆ ಬಂದರೆ, ಮೈಸೂರಿನಿಂದ 40 ಪ್ರಯಾಣಿಕರು, ಇಂದು ಬೆಳಗಾವಿಗೆ ತೆರಳಿದರು. ಮೈಸೂರಿ ನಿಂದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿರುವ ಎಲ್ಲಾ ವಿಮಾನಗಳ ಶೇ.80 ರಷ್ಟು ಆಸನಗಳು ಭರ್ತಿಯಾಗುತ್ತಿದ್ದು, ಪ್ರಯಾಣಿಕರಿಂದ ಸೇವೆ ಪಡೆಯಲು ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇ ಶಕ ಆರ್. ಮಂಜುನಾಥ್ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಮಂಗಳೂರು, ಕೊಯಮತ್ತೂರು ಮಾರ್ಗವಾಗಿ ಚೆನ್ನೈಗೆ, ತಿರುಪತಿವರೆಗೂ ವಿಮಾನ ಹಾರಾಟ ಸೌಲಭ್ಯ ಒದಗಿಸಲು ವಿಮಾನ ಸೇವಾ ಸಂಸ್ಥೆಗಳೊಂದಿಗೆ ಮಾತನಾಡುತ್ತಿದ್ದೇನೆ. ನಮ್ಮಲ್ಲಿ ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯ ಗಳನ್ನು ಒದಗಿಸಲು ಸಕಲ ತಯಾರಿ ನಡೆಸಿದ್ದೇವೆ ಎಂದು ಅವರು ತಿಳಿಸಿದರು.

ಅತೀ ಶೀಘ್ರ ಮೈಸೂರು ವಿಮಾನ ನಿಲ್ದಾಣದಿಂದ ನೇರವಾಗಿ ಊಟಿ ಮತ್ತು ಕೊಡಗು ಜಿಲ್ಲೆ ಮಡಿಕೇರಿಗೂ ಫ್ಲೈ ಬಸ್ ಓಡಿಸಲಾಗುವುದು. ಈ ಬಗ್ಗೆ ತಾವು ಕೆಎಸ್ ಆರ್‍ಟಿಸಿ ಎಂಡಿಯವರೊಂದಿಗೆ ಚರ್ಚಿಸಿದ್ದೇನೆ. ಅವರು ಒಪ್ಪಿಕೊಂಡಿದ್ದು, ಇನ್ನೊಂದು ವಾರದಲ್ಲಿ ಸೇವೆ ಆರಂಭವಾಗುವ ಸಾಧ್ಯತೆ ಇದೆ ಎಂದು ಮಂಜುನಾಥ್ ತಿಳಿಸಿದರು.

ಈ ಸಂದರ್ಭ ಹಾಜರಿದ್ದ ಮೈಸೂರು ಟ್ರಾವೆಲ್ ಅಸೋಸಿಯೇಷನ್‍ನ ಜಯ ಕುಮಾರ್ ಹಾಗೂ ಪ್ರಶಾಂತ ಅವರು, ಮೈಸೂರಿನಿಂದ ಅತೀ ಹೆಚ್ಚಿನ ಸಂಖ್ಯೆಯ ವಿಮಾನಗಳು ಹಾರಾಡುತ್ತಿರುವುದರಿಂದ ಇಲ್ಲಿನ ಪ್ರವಾಸೋದ್ಯಮ ಕೈಗಾರಿಕೋದ್ಯಮ, ಹೋಟೆಲ್ ಉದ್ಯಮ, ವಾಣಿಜ್ಯ ವಹಿ ವಾಟಿಗೆ ಪೂರಕ ವಾತಾವರಣ ನಿರ್ಮಾಣ ವಾಗಿದೆಯಲ್ಲದೆ. ಮೈಸೂರಿನ ಅಭಿವೃದ್ಧಿಗೂ ಸಹಕಾರಿಯಾಗಿದೆ. ಅದಕ್ಕೆ ಸಂಸದ ಪ್ರತಾಪ್ ಸಿಂಹ ಅವರ ಜನಪರ ಹಾಗೂ ಅಭಿವೃದ್ಧಿ ಕಾಳಜಿ ಶ್ಲಾಘನೀಯವಾದದ್ದು ಎಂದರು.

ಸಂಸದ ಪ್ರತಾಪ್‍ಸಿಂಹ ಅವರ ಪತ್ನಿ ಶ್ರೀಮತಿ ಅರ್ಪಿತಾ ಪ್ರತಾಪ್‍ಸಿಂಹ, ಸಿಐಐ ಅಧ್ಯಕ್ಷ ಭಾಸ್ಕರ್ ಕಳಲೆ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಎ.ಎಸ್.ಸತೀಶ, ಟ್ರಾವೆಲ್ ನೆಕ್ಸ್ಟ್ ನಿರ್ದೇಶಕ ಕೆ.ಕೆ.ಮೋಹನ್, ಕಂಟ್ರಿಇನ್ ಸೂಟ್ಸ್‍ನ ಸೀನಿಯರ್ ಸೇಲ್ಸ್ ಮ್ಯಾನೇಜರ್ ಕೆ.ಕೆ.ಲಕ್ಷ್ಮಣ್, ಬಿಜೆಪಿ ಮುಖಂಡರಾದ ಎಂ.ರಾಜೇಂದ್ರ, ಹೆಚ್.ಪಿ. ರಾಜೀವ್, ಡಾ.ಅನಿತ್ ಥಾಮಸ್ ಸೇರಿದಂತೆ ಹಲವರು ಈ ನೂತನ ವಿಮಾನ ಹಾರಾಟ ಉದ್ಘಾಟನೆ ವೇಳೆ ಉಪಸ್ಥಿತರಿದ್ದರು.

Translate »