ನೋಟಿಸ್ ನೀಡಿದ್ದಕ್ಕೆ ನಿದ್ರೆ ಮಾತ್ರೆ ಸೇವಿಸಿ ಇಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಅಸ್ವಸ್ಥ
ಮೈಸೂರು

ನೋಟಿಸ್ ನೀಡಿದ್ದಕ್ಕೆ ನಿದ್ರೆ ಮಾತ್ರೆ ಸೇವಿಸಿ ಇಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಅಸ್ವಸ್ಥ

January 19, 2020

ಮೈಸೂರು, ಜ. 18(ಆರ್‍ಕೆ)- ಸೇವಾ ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ್ದರಿಂದ ಬೇಸತ್ತÀ ಖಾಸಗಿ ಇಂಜಿನಿಯರಿಂಗ್ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕಿ ನಿದ್ರೆ ಮಾತ್ರೆ ಸೇವಿಸಿ, ತೀವ್ರ ಅಸ್ವಸ್ಥರಾಗಿರುವ ಘಟನೆ ಶುಕ್ರವಾರ ಸಂಜೆ ಮೈಸೂರಿನಲ್ಲಿ ಸಂಭವಿಸಿದೆ.

ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಸ್. ಸೌಮ್ಯ ಸುಧನ ಅಸ್ವಸ್ಥರಾದವ ರಾಗಿದ್ದು, ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ಮತ್ತೊಂದು ಕಂಪನಿಯೊಂದಿಗೆ ಭಾಗೀದಾರರಾಗಿದ್ದಾರೆಂಬ ವಿಷಯ ತಿಳಿದು ಸಂಸ್ಥೆಯ ಅಧ್ಯಕ್ಷರು ನೀಡಿದ ಸೂಚನೆ ಮೇರೆಗೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಲ್.ಬಸವರಾಜು ಅವರು ಜನವರಿ 6ರಂದು ಸೌಮ್ಯರಿಗೆ ನೋಟಿಸ್ ಜಾರಿ ಮಾಡಿ ಮೂರು ದಿನದೊಳಗಾಗಿ ವಿವರಣೆ ನೀಡುವಂತೆ ಸೂಚಿಸಿದ್ದರು.

ಇದರಿಂದ ಬೇಸತ್ತ ಸೌಮ್ಯ ಅವರು, ಜನವರಿ 17ರಂದು ಮಧ್ಯಾಹ್ನ ಕಾಲೇಜಿನ ತಮ್ಮ ವಿಭಾಗದಲ್ಲಿ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥರಾಗಿದ್ದರು. ವಿಷಯ ತಿಳಿದ ಸಂಸ್ಥೆಯ ಸಿಬ್ಬಂದಿ ಅವರನ್ನು ಕಾವೇರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ತಾನು ನಿದ್ರೆ ಮಾತ್ರೆ ಸೇವಿಸಿದ್ದೇನೆಂದು ಹೇಳಿದ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರು ಸೌಮ್ಯರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದ ನಂತರ ಇಂದು ವಾರ್ಡ್‍ಗೆ ಸ್ಥಳಾಂತರಿಸಿದ್ದಾರೆಂದು ತಿಳಿದು ಬಂದಿದೆ.

ಈ ಘಟನೆ ನಡೆಯುತ್ತಿದ್ದಂತೆಯೇ ಕಾಲೇಜು ಪ್ರಾಂಶುಪಾಲ ಪ್ರೊ. ಎಲ್. ಬಸವ ರಾಜು ಅವರು ಶುಕ್ರವಾರವೇ ವರುಣಾ ಠಾಣೆಗೆ ಲಿಖಿತ ಹೇಳಿಕೆ ನೀಡಿದ್ದು, ಸೇವಾ ನಿಯಮ ಉಲ್ಲಂಘಿಸಿದ ಕಾರಣ ಸೌಮ್ಯ ಅವರಿಗೆ ಸಂಸ್ಥೆಯಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಜನವರಿ 17ರಂದು ಮಧ್ಯಾಹ್ನ 3.45 ಗಂಟೆಗೆ ನನ್ನ ಚೇಂಬರ್‍ಗೆ ಬಂದು ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲು ನೋಟಿಸ್ ನೀಡಿರುತ್ತೀರಿ. ನನಗೆ ಎಲ್ಲಾ ಕಡೆಯಿಂದಲೂ ಕಿರುಕುಳ ನೀಡಲಾಗುತ್ತಿದೆ ಎಂದರು. ನಿಮ್ಮ ವೈಯಕ್ತಿಕ ವಿಚಾರ ಬೇಡ, ನೋಟಿಸ್‍ಗೆ ಉತ್ತರ ನೀಡಿದರೆ ಆಡಳಿತ ಮಂಡಳಿಗೆ ಸಲ್ಲಿಸುತ್ತೇನೆ ಎಂದು ಹೇಳಿದೆ ಎಂದು ಅವರು ತಿಳಿಸಿದ್ದಾರೆ. ಅದಾದ ಬಳಿಕ ತಮ್ಮ ವಿಭಾಗಕ್ಕೆ ಹೋಗಿ, ಅಲ್ಲಿಯೇ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಸೇರಿಸಲಾಯಿತು ಎಂದು ಪ್ರೊ. ಬಸವರಾಜು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ವರುಣಾ ಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿದಾಗ ಸೌಮ್ಯ ಅವರು ತಾವು ಹೇಳಿಕೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ ಈ ಸಂಬಂಧ ಯಾವುದೇ ಪ್ರಕರಣ ದಾಖಲು ಮಾಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Translate »