ಗುಂಪು ಮನೆ ಯೋಜನೆಗಿಲ್ಲ ಸರ್ಕಾರದ ಗ್ರೀನ್ ಸಿಗ್ನಲ್
ಮೈಸೂರು

ಗುಂಪು ಮನೆ ಯೋಜನೆಗಿಲ್ಲ ಸರ್ಕಾರದ ಗ್ರೀನ್ ಸಿಗ್ನಲ್

November 4, 2019

ಮೈಸೂರು, ನ. ೩- ಸೂರಿಲ್ಲದ ಸಾಮಾನ್ಯ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಮನೆ ನಿರ್ಮಿಸಿಕೊಡುವ ವಸತಿ ಯೋಜನೆಗೆ ಸರ್ಕಾರ ಅನುಮೋದನೆ ನೀಡದ ಕಾರಣ ವಿಳಂಬವಾಗುತ್ತಿದೆ. ಮೈಸೂರಿನ ವಿಜಯನಗರ ೨ನೇ ಹಂತ ಬಡಾವಣೆಯಲ್ಲಿ ರಿಂಗ್ ರೋಡ್‌ಗೆ ಹೊಂದಿಕೊಂಡಂತಿರುವ ಮುಡಾದ ಸುಮಾರು ೧೮ ಎಕರೆ ಜಾಗದಲ್ಲಿ ೧೪ ಅಂತ ಸ್ತಿನ ಕಟ್ಟಡವನ್ನು ನಿರ್ಮಿಸಿ ೧,೩೪೮ ಮನೆಗಳನ್ನು ಅರ್ಹ ಫಲಾ ನುಭವಿಗಳಿಗೆ ನಿಯಮಾನುಸಾರ ಹಂಚಿಕೆ ಮಾಡುವ ಮಹತ್ವಾಕಾಂಕ್ಷೆ ಯೋಜನೆಯನ್ನು ೨೦೧೭ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧಗೊಳಿಸಿತ್ತು.

ಹೈಟೆನ್ಷನ್ ರಸ್ತೆ, ರಿಂಗ್ ರಸ್ತೆ, ಶೇಷಾದ್ರಿಪುರಂ ಕಾಲೇಜು ನಡುವೆ ಇರುವ ಉದ್ದೇಶಿತ ಪ್ರದೇಶವು ಉತ್ಕೃಷ್ಟ ವಿಜಯ ನಗರ ೨ನೇ ಹಂತದ ಬಡಾವಣೆಯಲ್ಲಿದ್ದು, ಈಗಾಗಲೇ ಸಂಪೂರ್ಣ ಅಭಿವೃದ್ಧಿಗೊಂಡಿರುವುದರಿAದ ಗುಂಪು ಮನೆ ನಿರ್ಮಿಸಿದಲ್ಲಿ ಜನರಿಗೂ ನಗರದ ಮಧ್ಯೆಯೇ ವಾಸ ಮಾಡಲು ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಮುಡಾ ಅಧಿಕಾರಿಗಳು ಅಫೋರ್ಡಬಲ್ ಹೌಸಿಂಗ್ ಸ್ಕೀಂ ಅನ್ನು ತಯಾರಿಸಿದ್ದರು. ೧೪ ಅಂತಸ್ತಿನ ಕಟ್ಟಡದಲ್ಲಿ ವಿವಿಧ ಅಳತೆಯ ಒಟ್ಟು ೧,೩೪೮ ಮನೆಗಳನ್ನು ನಿರ್ಮಿಸಲು ೪೨, ೨೦೦ ಲಕ್ಷ ರೂ. ವೆಚ್ಚವಾಗಬಹುದೆಂದು ಅಂದಾಜಿಸಿ ೨೦೧೭-೧೮ನೇ ಸಾಲಿನ ಆಯ-ವ್ಯಯದಲ್ಲಿ ೭,೫೦೦ ಲಕ್ಷ ರೂ. ಹಣವನ್ನೂ ಮುಡಾ ಕಾಯ್ದಿರಿಸಿತ್ತು. ೫೧೧.೧೪ ಚದರಡಿ ಯಲ್ಲಿ ೧ ಕೊಠಡಿಯ (೧ ಃಊಏ) ೧೨೦ ಮನೆಗಳು, ೮೧೩.೯೪ ಚದರಡಿಯಲ್ಲಿ ೨ ಕೊಠಡಿಗಳ ೧,೧೬೮ ಮನೆಗಳು ಹಾಗೂ ೧,೨೨೦.೯೧ ಚದರಡಿ ವಿಸ್ತೀರ್ಣದಲ್ಲಿ ೩ ಕೊಠಡಿಗಳ ೬೦ ಮನೆಗಳನ್ನು ನಿರ್ಮಿಸಲು ಯೋಜಿಸಿ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗಿತ್ತು.

ಮನೆಗಳಿಗೆ ಬೇಡಿಕೆ ಸಮೀಕ್ಷೆಗಾಗಿ ಪ್ರಕಟಣೆ ಮಾಡಿ ದಾಗ ೨೦೧೭ರ ಮೇ ೨ರಿಂದ ೩೧ ರವರೆಗೆ ೧ ಕೊಠಡಿ ಮನೆಗೆ ೧೩,೯೪೪, ೨ ಕೊಠಡಿ ಮನೆಗೆ ೨೫,೩೮೦ ಹಾಗೂ ೩ ಕೊಠಡಿ ಮನೆಗೆ ೭,೦೨೨ ಮಂದಿ ಮನೆ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಮುಡಾ ನಿರ್ಮಿಸಬೇಕೆಂದಿದ್ದ ಕೇವಲ ೧,೩೪೮ ಮನೆಗಳಿಗೆ ಸಾರ್ವಜನಿಕರಿಂದ ಒಟ್ಟು ೪೬,೩೪೬ ಬೇಡಿಕೆ ಅರ್ಜಿ ಬಂದಿದ್ದವು. ಮುಡಾ ನಿಗದಿ ಮಾಡಿದ್ದ ದರ ಕೊಡಲು ಒಪ್ಪಿ ಮನೆ ಖರೀದಿ ಮಾಡಲು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಂದಿನ ಅಧ್ಯಕ್ಷ ಡಿ. ಧ್ರುವಕುಮಾರ್ ಹಾಗೂ ಆಯುಕ್ತ ಎನ್. ಮಹೇಶ್ ಅವರು ಯೋಜನೆಯ ನಕ್ಷೆ, ಡಿಪಿಆರ್‌ನೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ತದನಂತರ ಸರ್ಕಾರ ಬದಲಾಯಿತು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಈ ಯೋಜನೆಯಡಿ ಮನೆಗಳ ಹಂಚಿಕೆಗೆ ನೀವು ಯಾವ ಮಾನದಂಡ, ನಿಯಮ ರೂಪಿಸಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿ ಎಂದು ಮುಡಾಗೆ ಪತ್ರ ಬರೆದಿದ್ದರಲ್ಲದೆ, ಕೆಲವು ಅಬ್ಸರ್ವೇಷನ್‌ಗಳಿಗೆ ಉತ್ತರಿಸಿ ಎಂದು ಹೇಳಿದ್ದರು.

ಅದಕ್ಕೆ ಶೀಘ್ರವೇ ಉತ್ತರ ನೀಡಿರುವ ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಅವರು, ಮನೆ ಹಂಚಿಕೆಗೆ ಅನುಸರಿಸಲುದ್ದೇಶಿಸಿರುವ ಮಾನದಂಡ, ನಿಯಮ (Mode of allotment & Rules)ಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.

ಆದರೂ ಕಳೆದ ೧ ವರ್ಷದಿಂದ ಈ ಗುಂಪು ಮನೆ ಯೋಜನೆ ಪ್ರಸ್ತಾವನೆಯು ಸರ್ಕಾ ರದ ಹಂತದಲ್ಲೇ ಕೊಳೆಯುತ್ತಿರುವುದರಿಂದ ಮುಡಾ ಅಫೋರ್ಡಬಲ್ ಹೌಸಿಂಗ್ ಸ್ಕೀಂ ಇದೀಗ ಮತ್ತಷ್ಟು ವಿಳಂಬವಾಗುತ್ತಿದೆ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಸುಮಾರು ೧,೩೫,೦೦೦ ಮಂದಿ ೨೦-೨೫ ವರ್ಷಗಳಿಂದ ಕಾಯುತ್ತಿದ್ದಾರೆ. ಭೂಮಿ ಕೊರತೆಯಿಂದಾಗಿ ವಸತಿ ಬಡಾವಣೆ ನಿರ್ಮಿಸಿ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ವಸತಿ ಬಡಾವಣೆ ಕಷ್ಟಸಾಧ್ಯ. ಅದೇ ಉದ್ದೇಶದಿಂದ ಮುಡಾ ಮಾಲೀಕತ್ವದಲ್ಲೇ ಇರುವ ವಿವಿಧ ಬಡಾವಣೆಗಳಲ್ಲಿ ದೂರದೃಷ್ಟಿಯಿಂದ ಮೀಸಲಿ ರಿಸಿರುವ ಜಾಗಗಳಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಿಸಿ (ವರ್ಟಿಕಲ್ ಗ್ರೂಪ್) ಮನೆಗಳನ್ನು ಹಂಚಿಕೆ ಮಾಡುವುದೊಂದೇ ಮುಡಾಗಿರುವ ಅವಕಾಶ.

ಇಂತಹ ಯೋಜನೆಗೆ ಹೊಸದಾಗಿ ಅಗತ್ಯವಿಲ್ಲ, ಬಡಾವಣೆಯಂತೆ ರಸ್ತೆ, ನೀರು, ಚರಂಡಿ, ವಿದ್ಯುತ್ ಲೈನ್‌ನಂತಹ ಬಾಬತ್ತಿಗೆ ಹಣ ಖರ್ಚು ಮಾಡಬೇಕಾಗಿಲ್ಲ. ನಿವೇಶನ ಆಕಾಂಕ್ಷಿಗಳಿಗೆ ಬೆಂಗಳೂರಿನ ಬಿಡಿಎ ಮಾದರಿಯಲ್ಲಿ ಗುಂಪು ಮನೆ ನಿರ್ಮಿಸಿ ಕೈಗೆಟಕುವ ದರದಲ್ಲಿ ಮಂಜೂರು ಮಾಡುವುದೊಂದೇ ಮಾರ್ಗವಾಗಿದ್ದು, ಅದರಿಂದ ಬೇಡಿಕೆಯೂ ಈಡೇರುತ್ತದೆ. ಖಾಲಿ ಜಾಗವನ್ನೂ ಅಭಿವೃದ್ಧಿಗೊಳಿಸಿ ಬಳಸಿಕೊಂಡAತಾಗುತ್ತದೆ. ಹೊಸ ಬಡಾವಣೆ ನಿರ್ಮಿಸಬೇಕೆಂದರೆ ಮೈಸೂರಿನಿಂದ ಸುಮಾರು ೨೫ರಿಂದ ೩೦ ಕಿ.ಮೀ. ದೂರಕ್ಕೆ ಹೋಗಬೇಕು. ಅಲ್ಲಿ ಜನರು ನಿವೇಶನ ಖರೀದಿಸಲು ಮುಂದೆ ಬರುವುದಿಲ್ಲ. ಹತ್ತಿರದಲ್ಲಿ ಈಗಾಗಲೇ ಖಾಸಗಿಯವರು ಭೂಮಿ ಖರೀದಿಸಿರುವುದರಿಂದ ಮುಡಾಗೆ ಒಂದು ಅಡಿ ಜಾಗವೂ ಸಿಗುವುದಿಲ್ಲ. ೨೦೧೨ರಲ್ಲೇ ಅನುಮೋದನೆಯಾದ ಬಲ್ಲಹಳ್ಳಿ ವಸತಿ ಯೋಜನೆ ಮಾಡಲು ಹೊರಟಿರುವ ಮುಡಾ ಇನ್ನೂ ಸಾಕಾರಗೊಳಿ ಸಿಲ್ಲ. ಅದರ ವಿಳಂಬ ಧೋರಣೆ, ಪರಿಹಾರ ನೀಡುವಲ್ಲಿ ನಡೆದುಕೊಳ್ಳುವ ರೀತಿಯಿಂದ ಬೇಸತ್ತಿರುವ ರೈತರು ಭೂಮಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಎಸ್.ಟಿ. ರವಿಕುಮಾರ್

Translate »