ಕಾಡುತ್ತಿದೆ ಕೊಡಗಿಗೆ ಲೋಕಸಭೆಗೆ ತಮ್ಮವರಿಲ್ಲದ ಕೊರಗು…
ಕೊಡಗು

ಕಾಡುತ್ತಿದೆ ಕೊಡಗಿಗೆ ಲೋಕಸಭೆಗೆ ತಮ್ಮವರಿಲ್ಲದ ಕೊರಗು…

March 21, 2019

ಮಡಿಕೇರಿ: ರಾಜಕೀಯ ಕ್ಷೇತ್ರ ಹೊರತು ಪಡಿಸಿದರೆ ಉಳಿದ ಎಲ್ಲಾ ವಿಚಾ ರದಲ್ಲೂ ಕೊಡಗು ಜಿಲ್ಲೆ ಸೈ ಎನಿಸಿ ಕೊಂಡ ಫಲವತ್ತಾದ ಭೂ ಪ್ರದೇಶ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿ ಯಾದ ರಾಜಕಾರಣ ಮಾತ್ರ ಪುಟ್ಟ ಜಿಲ್ಲೆ ಎನ್ನುವ ಕಾರಣಕ್ಕಾಗಿ ಕೊಡಗಿನಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ. ಕೇವಲ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಡಗು, ಜನಸಂಖ್ಯಾ ಬಲದ ಕೊರತೆಯ ನೆಪ ದಲ್ಲೇ ಸ್ವತಂತ್ರ ಲೋಕಸಭಾ ಕ್ಷೇತ್ರವನ್ನು ಹೊಂದುವಲ್ಲಿ ವಿಫಲವಾಗಿದೆ.

ಸ್ವಾತಂತ್ರ್ಯಾ ನಂತರದ ಅವಧಿಯಿಂದ ದಶಕದ ಹಿಂದಿನವರೆಗೂ ಕರಾವಳಿಯ ನಾಡು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಭಾಗವಾಗಿತ್ತು. ನಂತರ ಬಯಲುಸೀಮೆ ಮೈಸೂರಿನ ಅಂಗವಾಗಿರುವ ‘ಕೊಡಗು’ ತನ್ನೊಳಗಿನ ಸಂಕಷ್ಟಗಳನ್ನು ದಿಲ್ಲಿಯಲ್ಲಿ ಮೊಳಗಿಸುವ ತನ್ನದೇ ಅಭ್ಯರ್ಥಿಯನ್ನು ಕಾಣದಿರುವ ದೌರ್ಭಾಗ್ಯವನ್ನು ಎದುರಿ ಸುತ್ತಿದೆ.

ಭೌಗೋಳಿಕವಾಗಿ ಬೆಟ್ಟ, ಗುಡ್ಡ ಗಳಿಂದ ಆವೃತ್ತವಾಗಿ, ಪಶ್ಚಿಮಘಟ್ಟ ಸಾಲಿ ನಲ್ಲಿ ಬರುವ ಕೊಡಗು ಜಿಲ್ಲೆ ಕರಾವಳಿ ಇಲ್ಲವೆ ಬಯಲು ಸೀಮೆಯ ಭೌಗೋಳಿಕ ಗುಣ ಲಕ್ಷಣಗಳಿಂದ ವಿಭಿನ್ನವಾಗಿದೆ. ತನ್ನೊಳಗೆ ಹತ್ತು ಹಲವು ಸಮಸ್ಯೆಗಳನ್ನು ತುಂಬಿಕೊಂಡು, ಬಗೆಹರಿಸಿಕೊಳ್ಳಲು ದಿಲ್ಲಿಯತ್ತ ನೋಟ ಹರಿಸುತ್ತಾ ಕಾಯ ಬೇಕಾದ ಪರಿಸ್ಥಿತಿ ಇದ್ದು, ನಮ್ಮನ್ನು ಪ್ರತಿನಿಧಿಸಲು ನಮ್ಮವರಿಲ್ಲ ಎನ್ನುವ ಕೊರಗು ಕೊಡಗಿನ ಜನರÀನ್ನು ಕಾಡುತ್ತಿದೆ.

‘ಸಿ’ ರಾಜ್ಯವಾಗಿದ್ದ ಕೊಡಗು: ಸ್ವಾತಂತ್ರ್ಯ ಲಭಿಸಿದ ಆರಂಭಿಕ ವರ್ಷಗಳಲ್ಲಿ ಕೊಡಗು ಪ್ರತ್ಯೇಕ ಜಿಲ್ಲೆಯಾಗಿ ಪರಿಗಣಿತವಾಗದೆ ‘ಸಿ’ ರಾಜ್ಯದ ಸ್ಥಾನಮಾನಗಳನ್ನು ಹೊಂದಿತ್ತು. ಸಿ.ಎಂ. ಪೂಣಚ್ಚ ಅವರು ಅಂದು ಕೊಡಗು ‘ಸಿ’ ರಾಜ್ಯದ ಮುಖ್ಯ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ನಂತರÀ ಕೊಡಗು ಅಂದಿನ ಮೈಸೂರು ರಾಜ್ಯದೊಂದಿಗೆ ವಿಲೀನಗೊಂಡಾಗ 1967 ರಲ್ಲಿ ಲೋಕಸಭಾ ಸದಸ್ಯರಾಗಿ ಚುನಾಯಿ ತರಾಗಿದ್ದರು. ಅದೇ ಮೊದಲು, ಅದೇ ಕೊನೆ. ಮತ್ತೆಂದೂ ಕೊಡಗಿನ ಯಾವೊಬ್ಬ ಅಭ್ಯರ್ಥಿಯೂ ಲೋಕಸಭೆಯ ಮೆಟ್ಟಿ ಲೇರಲೇ ಇಲ್ಲ. ಲೋಕಸಭೆಯನ್ನು ಪ್ರತಿನಿಧಿ ಸಿದ್ದ ಸಿ.ಎಂ.ಪೂಣಚ್ಚ ಅವರು ಉಕ್ಕು ಮತ್ತು ಹೆವಿ ಇಂಜಿನಿಯರಿಂಗ್ ಸಚಿವರಾಗಿ ಮತ್ತು ರೈಲ್ವೆ ಸಚಿವರಾಗಿಯೂ ಕಾರ್ಯನಿರ್ವಹಿಸಿ ರುವುದು ಇದೀಗ ಇತಿಹಾಸ.

ಪರರು ನಮ್ಮವರಾದರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಭಾಗವಾಗಿ ಕೊಡಗು ಗುರುತಿಸಿಕೊಂಡಿದ್ದ ಸಂದರ್ಭ 1957ರಲ್ಲಿ ಈ ಕ್ಷೇತ್ರವನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ.ಆರ್.ಆಚಾರ್, 1962ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಡೂರು ಶಂಕರ್ ಆಳ್ವ, 1967ರಲ್ಲಿ ಸಿ.ಎಂ. ಪೂಣಚ್ಚ ಮತ್ತು 1971 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕೆ.ಕೆ.ಶೆಟ್ಟಿ ಅವರುಗಳು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಮೈಸೂರು ರಾಜ್ಯವೆನ್ನುವುದು ‘ಕರ್ನಾಟಕ’ ವೆಂದು ನಾಮಕರಣಗೊಂಡ ಬಳಿಕ ನಡೆದ 1977, 1980, 1984 ಮತ್ತು 1989ರ ಲೋಕ ಸಭಾ ಚುಣಾವಣೆಯಲ್ಲಿ ‘ಸಾಲ ಮೇಳದ ಸರದಾರ’ ಎಂದೇ ಪ್ರಖ್ಯಾತರಾಗಿದ್ದ ಜನಾ ರ್ಧನ ಪೂಜಾರಿ ಸತತ ನಾಲ್ಕು ಬಾರಿ ಆಯ್ಕೆಯಾಗಿರುವುದು ವಿಶೇಷ. ಆ ಬಳಿಕ ಜನಾರ್ಧನ ಪೂಜಾರಿ ಅವರಿಗೆ ಸೋಲು ಣಿಸಿದ ಭಾರತೀಯ ಜನತಾ ಪಾರ್ಟಿಯ ವಿ. ಧನಂಜಯ ಕುಮಾರ್ ಅವರು 1991, 1996, 1998, 1999ರಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿ ಕಾಂಗ್ರೆಸ್ ಹಿಡಿತ ದಲ್ಲಿದ್ದ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ದಕ್ಷಿಣ ಕನ್ನಡದ ಭಾಗವಾಗಿ 2004ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾ ಪಾರ್ಟಿಯ ಡಿ.ವಿ. ಸದಾನಂದ ಗೌಡ ಅವರು ಗೆಲುವು ಸಾಧಿಸಿದ್ದರು. ದಕ್ಷಿಣ ಕನ್ನಡದ ಭಾಗವಾ ಗಿದ್ದ ಕೊಡಗನ್ನು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಒಳಪಡಿಸಿದ ಬಳಿಕ 2009ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಡಗೂರು ಹೆಚ್.ವಿಶ್ವ ನಾಥ್ ಗೆಲುವು ಸಾಧಿಸಿದ್ದರು. 2014ರಲ್ಲಿ ವಿಶ್ವನಾಥ್ ಅವರನ್ನು ಸೋಲಿಸಿದ ಭಾರ ತೀಯ ಜನತಾ ಪಾರ್ಟಿಯ ಪ್ರತಾಪಸಿಂಹ ಮೊದಲ ಬಾರಿಗೆ ಲೋಕಸಭಾ ಮೆಟ್ಟಿಲೇರಿದರು.

ಕೊಡಗಿನವರಿಗೂ ಸ್ಪರ್ಧಿಸಲು ಅವಕಾಶ ನೀಡಿ ಎಂದು ರಾಷ್ಟ್ರೀಯ ಪಕ್ಷಗಳ ಕೆಲವು ಹಿರಿಯರು ಬೇಡಿಕೆ ಇಟ್ಟರೂ ಮೈಸೂರಿನ ರಾಜಕೀಯ ಲೆಕ್ಕಾಚಾರದ ಎದುರು ಕೊಡ ಗಿನ ಧ್ವನಿ ಅರಣ್ಯರೋದನವಾಗುತ್ತಿದೆ.

ಹೀಗೆ ಪ್ರತಿ ಬಾರಿಯೂ ಕೊಡಗನ್ನು ಹೊರ ಜಿಲ್ಲೆಯ ಮಂದಿ ಪ್ರತಿನಿಧಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೊಡಗಿನ ಮೂಲ ಸಮ ಸ್ಯೆಗಳು ಪರಿಹಾರ ಕಾಣದೆ ಹಾಗೇ ಉಳಿದು ಬಿಟ್ಟಿವೆ ಎನ್ನುವ ಬೇಸರವೂ ಕೊಡಗಿನ ಮೂಲ ನಿವಾಸಿಗಳಲ್ಲಿದೆ.

ಪ್ರಸಾದ್ ಸಂಪಿಗೆಕಟ್ಟೆ

Translate »