ಪ್ರವಾಸಿಗರಿಲ್ಲದೆ ಸೊರಗುತ್ತಿದೆ ಕೊಡಗಿನ ಪ್ರವಾಸಿ ತಾಣ
ಕೊಡಗು

ಪ್ರವಾಸಿಗರಿಲ್ಲದೆ ಸೊರಗುತ್ತಿದೆ ಕೊಡಗಿನ ಪ್ರವಾಸಿ ತಾಣ

November 5, 2018

ಮಡಿಕೇರಿ:  ಪ್ರವಾಸೋದ್ಯಮದ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದಿದ್ದ ಪುಟ್ಟ ಕೊಡಗು ಜಿಲ್ಲೆ ಹೇಳಿ-ಕೇಳಿ ಪ್ರವಾಸಿಗರ ಹಾಟ್‍ಸ್ಟಾಟ್ ಆಗಿತ್ತು. ವರ್ಷಕ್ಕೆ ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ತಮ್ಮ ಮನೋ ರಂಜನೆ ಪಡೆದುಕೊಳ್ಳುತ್ತಿದ್ದರು. ಆದರೆ, ಪ್ರಕೃತಿ ವಿಕೋಪ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಗದಾ ಪ್ರಹಾರವನ್ನೇ ನಡೆಸಿದ್ದು, ಅದರ ಹೊಡೆತದಿಂದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇಂದಿಗೂ ಚೇತರಿಕೆ ಕಂಡಿಲ್ಲ. ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳೆಲ್ಲವೂ ಮೂಲಭೂತ ಸೌಕರ್ಯಗಳೊಂದಿಗೆ ಯಥಾಸ್ಥಿತಿಗೆ ಮರಳಿ ದ್ದರೂ ಕೂಡ ಹೊರ ಊರ ಪ್ರವಾಸಿಗರು ಮಾತ್ರ ಜಿಲ್ಲೆಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ.

ದುಬಾರೆ, ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಹಾರಂಗಿ, ರಾಜಾಸೀಟು, ಅಬ್ಬಿಫಾಲ್ಸ್, ಮಾಂದಲ್ ಪಟ್ಟಿ, ಇರ್ಪು, ಮಲ್ಲಳ್ಳಿ ಜಲಪಾತ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ಕಾಣದೇ ಹಲವು ದಿನಗಳೇ ಕಳೆದುಹೋಗಿದೆ. ಈ ಪ್ರದೇಶಗಳಲ್ಲಿದ್ದ ಸಣ್ಣಪುಟ್ಟ ವ್ಯಾಪಾರಿಗಳ ಪೈಕಿ ಹಲವರು ವಿಧಿ ಇಲ್ಲದೆ ಬೇರೆ ಉದ್ಯೋಗಗಳ ಕಡೆ ಮುಖ ಮಾಡಿದ್ದಾರೆ.

ಸಹಜವಾಗಿ ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಪ್ರವಾಸಿಗರು ಕಡಿಮೆ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಆ ಬಳಿಕ ಅಕ್ಬೋಬರ್ ತಿಂಗಳಿಂದ ಡಿಸೆಂಬರ್ ವರೆಗೆ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಾಲಿ ಡಲೂ ಕೂಡ ಸಾಧ್ಯವಿಲ್ಲದಂತೆ ಪ್ರವಾಸಿ ಗರು ತುಂಬಿರುತ್ತಿದ್ದರು. ಆದರೆ ಈ ವರ್ಷ ಅಂತಹ ಚಿತ್ರಣಗಳೇ ಕಂಡು ಬರುತ್ತಿಲ್ಲ. ಪ್ರವಾಸಿ ತಾಣಗಳೆಲ್ಲ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದ್ದರೆ, ಪ್ರವಾಸೋದ್ಯಮ ವನ್ನು ನಂಬಿಕೊಂಡು ಹೋಟೆಲ್, ಹೋಂ ಸ್ಟೇ, ಸ್ಪೈಸಸ್ ಮಳಿಗೆ ಇಟ್ಟುಕೊಂಡವರ ಸ್ಥಿತಿ ಅಧೋಗತಿಗೆ ಇಳಿದಿದೆ.

ಈ ಬಾರಿಯ ತಲಕಾವೇರಿ ತೀರ್ಥೋದ್ಭವ ಮತ್ತು ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾಕ್ಕೂ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬೆನ್ನು ತಿರುಗಿಸಿದ್ದರು. ಈ ಎರಡೂ ಹಬ್ಬಗಳ ಸಮಯದಲ್ಲಾದರೂ ಪ್ರವಾಸಿಗರು ಜಿಲ್ಲೆಗೆ ಆಗಮಿಸಬಹುದೆಂದು ನಂಬಿದ್ದವರಿಗೆ ತೀವ್ರ ನಿರಾಶೆಯಾದದ್ದು ಮಾತ್ರ ಸುಳ್ಳಲ್ಲ.

ನವೆಂಬರ್ ತಿಂಗಳಿನಿಂದ ಪ್ರವಾಸೋದ್ಯಮ ಚೇತರಿಕೆ ಕಾಣಬಹುದೆಂಬ ನಿರೀಕ್ಷೆ ವರ್ತಕ ಸಮುದಾಯದಲ್ಲಿ ಮೂಡಿತ್ತಾ ದರೂ ಇದೂ ಕೂಡ ಈಡೇರುವ ಸಾಧ್ಯತೆ ಕ್ಷೀಣಿಸತೊಡಗಿದೆ. ಯಾಕೆಂದರೆ ನ.10 ರಂದು ಟಿಪ್ಪು ಜಯಂತಿ ಆಚರಿಸಲು ರಾಜ್ಯ ಸಮ್ಮಿಶ್ರ ಸರಕಾರ ನಿರ್ಧರಿಸಿದೆ. ಟಿಪ್ಪು ಜಯಂತಿ ಆಚರಣೆಗೆ ಕೊಡಗು ಜಿಲ್ಲೆಯಲ್ಲಿ ಮೊದಲಿನಿಂದಲೂ ವಿರೋಧವಿದೆ. ಟಿಪ್ಪು ಜಯಂತಿಗೆ ದಿನಗಣನೆ ಆರಂಭ ವಾಗಿರುವ ಕಾರಣ ಕೊಡಗು ಜಿಲ್ಲೆಯಲ್ಲಿ ಮತ್ತೆ ಗಲಾಟೆಗಳು ಪ್ರಾರಂಭವಾಗಬಹುದೆಂದು ಪ್ರವಾಸಿಗರು ಭೀತಿಗೆ ಒಳಗಾಗಿದ್ದಾರೆ.

ಪ್ರಕೃತಿಯ ಮುನಿಸಿಗೆ ಈಡಾಗಿ, ಪ್ರವಾ ಸೋದ್ಯಮದ ತುತ್ತಿನಿಂದ ಹೊಟ್ಟೆ ತುಂಬಿ ಸಿಕೊಳ್ಳುತ್ತಿದ್ದ ಕುಟುಂಬಗಳಿಗೆ ಇದೀಗ ಟಿಪ್ಪು ಜಯಂತಿ ಆಚರಣೆ ನುಂಗಲಾರದ ತುತ್ತಾಗಿ ಪರಿಣಮಿಸಿದಂತಾಗಿದೆ. ಪ್ರವಾಸೋದ್ಯಮದ ಅಡಿಯಲ್ಲಿ ಸರ್ವ ಧರ್ಮೀಯರೂ ಕೂಡ ವ್ಯಾಪಾರೋದ್ಯಮದಲ್ಲಿ ತೊಡಗಿಸಿ ಕೊಂಡಿದ್ದು, ಪರ ವಿರೋಧದ ಅಭಿಪ್ರಾಯಗಳಿಗಿಂತ ಹೆಚ್ಚಾಗಿ ಒಂದರ ಮೇಲೊಂದು ಬೀಳುತ್ತಿರುವ ಹೊಡೆತಗಳ ನಡುವೆ ಬದುಕು ಸಾಗಿಸುವುದಾದರೂ ಹೇಗೆಂಬ ಚಿಂತೆ ವರ್ತಕ ಸಮುದಾಯವನ್ನು ಕಾಡುತ್ತಿದೆ.

Translate »