ಪ್ರಕೃತಿ ವಿಕೋಪ ಪರಿಹಾರ ಸಮರ್ಪಕ ನಿರ್ವಹಣೆಗೆ ಸೂಚನೆ
ಚಾಮರಾಜನಗರ

ಪ್ರಕೃತಿ ವಿಕೋಪ ಪರಿಹಾರ ಸಮರ್ಪಕ ನಿರ್ವಹಣೆಗೆ ಸೂಚನೆ

July 31, 2018

ಚಾಮರಾಜನಗರ:  ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಳೆ ಹಾನಿ, ಪರಿಹಾರೋಪಾಯಗಳು ಮತ್ತು ಇತರೆ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆ, ಪ್ರವಾಹದಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು. ಆದಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ತೊಂದರೆಗೆ ಅವಕಾಶವಾಗದಂತೆ ಪೂರ್ವಭಾವಿಯಾಗಿ ಅಗತ್ಯ ಸಿದ್ಧತೆ ಕೆಲಸಗಳನ್ನು ನಿರ್ವಹಿಸಬೇಕು ಎಂದರು.

ಜಿಲ್ಲೆಯ ಬೆಳೆ, ಜಾನುವಾರುಳಿಗೆ ಲಭ್ಯವಿರುವ ಮೇವು ಕುರಿತು ಮಾಹಿತಿ ನೀಡುವ ವೇಳೆ ಉತ್ತರಿಸಿದ ಅಧಿಕಾರಿಗಳು ಮೇವು ದಾಸ್ತಾನು ಸಾಕಷ್ಟು ಇದೆ. ರಸಗೊಬ್ಬರ, ಬಿತ್ತನೆಬೀಜ ಕೊರತೆಯು ಇಲ್ಲ. ಬೇಡಿಕೆಗೆ ಅನುಸಾರವಾಗಿ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ಇಲಾಖೆಗಳು ಆಯಾ ಯೋಜನೆ ಕಾರ್ಯಕ್ರಮಗಳನ್ನು ವಿಳಂಬ ಮಾಡದೆ ಅನುಷ್ಠಾನ ಮಾಡಬೇಕು. ನಿಗದಿ ಗುರಿಯನ್ನು ಕಾಲಮಿತಿಯೊಳಗೆ ತಲುಪಿಸಬೇಕು. ಕಾರ್ಯಕ್ರಮ ಅನುಷ್ಠಾನದಲ್ಲಿ ಸೂಚಿಸಲಾಗುವ ಪ್ರಗತಿಯನ್ನು ಸಾಧಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಹಾಗೂ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ವಿವರವಾಗಿ ಮಾಹಿತಿ ನೀಡಿದರು. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು ಉಸ್ತುವಾರಿ ಕಾರ್ಯದರ್ಶಿ ಅವರು ಸೂಚಿಸಿರುವ ಕೆಲಸಗಳನ್ನು ಚಾಚು ತಪ್ಪದೇ ನಿರ್ವಹಿಸಬೇಕು. ಇಲಾಖೆಯ ಅಧಿಕಾರಿಗಳು ವಿಪತ್ತು ಸಂದರ್ಭದಲ್ಲಿ ತುರ್ತಾಗಿ ತೊಡಗಿಸಿಕೊಳ್ಳಬೇಕು. ಪರಿಹಾರ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದರು.

Translate »