ಮೂರು ದಿನ ಜ್ವರ ಕಾಣಿಸಿಕೊಂಡರೆ ಕಡ್ಡಾಯ ತಪಾಸಣೆಗೆ ಸೂಚನೆ
ಮೈಸೂರು

ಮೂರು ದಿನ ಜ್ವರ ಕಾಣಿಸಿಕೊಂಡರೆ ಕಡ್ಡಾಯ ತಪಾಸಣೆಗೆ ಸೂಚನೆ

July 26, 2019

ಮೈಸೂರು,ಜು.25(ಎಂಟಿವೈ)-ಸತತ ವಾಗಿ ಮೂರು ದಿನ ಜ್ವರ ಕಾಣಿಸಿ ಕೊಂಡರೆ ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯ ವಾಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವಂತೆ ಜಿಲ್ಲಾ ಆಶ್ರಿತ ರೋಗಗಳ ರೋಗ ವಾಹಕ ನಿಯಂತ್ರಣಾಧಿಕಾರಿ  ಡಾ.ಎಸ್.ಚಿದಂಬರಂ ಮನವಿ ಮಾಡಿದ್ದಾರೆ.

ಬೆಂಗಳೂರು ಮತ್ತು ಮಂಗಳೂರಿನಲ್ಲಿ ಡೆಂಗ್ಯೂ ಸಮಸ್ಯೆ ತೀವ್ರಗೊಂಡಿರುವ ಹಿನ್ನೆಲೆ ಯಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಮೈಸೂರಿನ ಜನರು ಡೆಂಗ್ಯೂ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಜನವರಿ ತಿಂಗಳಿಂದ ಜೂನ್‍ವರೆಗೆ 22 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ. ಅವರೆಲ್ಲ ರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖ ರಾಗಿದ್ದಾರೆ. ಎಲ್ಲಾ ವೈರಲ್ ಜ್ವರಗಳಿಗೂ ಒಂದೇ ಮಾದರಿಯಲ್ಲಿ ಸೋಂಕು ಕಾಣಿಸಿ ಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ದಲ್ಲಿ ಆಯಾ ರೋಗಿಗಳ ಗುಣ ಲಕ್ಷಣಗಳನ್ನು ಗಮನಿಸಿ ಶಂಕಿತ ಡೆಂಗ್ಯೂ ಇರಬಹುದು ಎಂದು ಅಭಿಪ್ರಾಯಪಟ್ಟು, ರಕ್ತದ ಮಾದರಿ ಯನ್ನು ಡಿಹೆಚ್‍ಓ ಕಚೇರಿಗೆ ಕಳುಹಿಸುತ್ತಾರೆ. ಆದರೆ ಜನರು ಮಾತ್ರ ಶಂಕಿತ ಎಂಬ ಪದ ವನ್ನು ಗಮನಿಸದೆ ಡೆಂಗ್ಯೂ ಬಂದಿದೆ ಎಂದು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಮೈಸೂರು ಜಿಲ್ಲೆ ಯಲ್ಲಿ ಡೆಂಗ್ಯೂ ಬಗ್ಗೆ ಆತಂಕಪಡಬೇಕಾ ಗಿಲ್ಲ. ಡೆಂಗ್ಯೂನಲ್ಲಿ 4 ವೈರಸ್‍ಗಳಿರುತ್ತವೆ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ 1ರಿಂದ 3ರವರೆಗಿನ ವೈರಸ್‍ಗಳು ಕಾಣಿಸಿಕೊಳ್ಳು ತ್ತಿವೆ. ಡೆಂಗ್ಯೂನ 4ನೇ ವೈರಸ್ ಅಪಾಯ ಕಾರಿಯಾಗಿದೆ. ಇದು ಜಿಲ್ಲೆಯಲ್ಲಿ ಇದು ವರೆಗೆ ಕಾಣಿಸಿಕೊಂಡಿಲ್ಲ. ಇದರಿಂದ ಎಲ್ಲರೂ ಆತಂಕಪಡುವ ಅಗತ್ಯವಿಲ್ಲ ಎಂದರು.

ಸತತ 3 ದಿನ ಜ್ವರ ಕಾಣಿಸಿಕೊಂಡರೆ ಸರ್ಕಾರಿ ಅಥವಾ ದೊಡ್ಡಾಸ್ಪತ್ರೆಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದು ಕೊಳ್ಳಬೇಕು. ಕೆಲವರು ಸಣ್ಣ ಪುಟ್ಟ ಕ್ಲಿನಿಕ್ ಗಳಲ್ಲಿ ಚಿಕಿತ್ಸೆ ಪಡೆದು ಸುಮ್ಮನಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರೂ ಮೈಮರೆಯ ಬಾರದು. ಇದುವರೆಗೆ 480ಕ್ಕೂ ಹೆಚ್ಚು ಶಂಕಿತ ಡೆಂಗ್ಯೂ ರೋಗಿಗಳ ರಕ್ತ ತಪಾಸಣೆ ಮಾಡ ಲಾಗಿದೆ. ಅದರಲ್ಲಿ 22 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿತ್ತು. ಎಲ್ಲರಿಗೂ ಚಿಕಿತ್ಸೆ ನೀಡುತ್ತಿರುವುದರಿಂದ ಎಲ್ಲರೂ ಗುಣಮುಖ ರಾಗಿದ್ದಾರೆ. ಮನೆಯ ಸುತ್ತಮುತ್ತ ಸೊಳ್ಳೆ ಉತ್ಪಾದನೆಯಾಗದಂತೆ ಸಾಧ್ಯವಾದಷ್ಟು ಜಾಗ್ರತೆ ವಹಿಸಬೇಕು. ಅಲ್ಲದೇ ಮಲಗುವ ವೇಳೆ ಸೊಳ್ಳೆ ಪರದೆ ಹಾಗೂ ಮಸ್ಕಿಟೋ ಕಾಯಿಲ್ (ಸೊಳ್ಳೆ ಬತ್ತಿ) ಬಳಸುವಿಕೆಗೆ ಆದ್ಯತೆ ನೀಡಬೇಕು. ಇದುವರೆಗೆ ಮೈಸೂರಿನಲ್ಲಿ ದೃಢಪಟ್ಟಿರುವ 22 ಪ್ರಕರಣಗಳಲ್ಲಿ 12 ಪ್ರಕ ರಣ ಬೆಂಗಳೂರು ಮತ್ತು ಮಂಗಳೂರಿ ನವರೇ ಆಗಿದೆ ಎಂದು ತಿಳಿಸಿದರು.

 

Translate »