ಕೊಡಗು ಜಿಲ್ಲೆಯಲ್ಲಿ ಪುನರ್ವಸತಿ ಕಾರ್ಯ ಚುರುಕುಗೊಳಿಸಲು ಸೂಚನೆ
ಕೊಡಗು

ಕೊಡಗು ಜಿಲ್ಲೆಯಲ್ಲಿ ಪುನರ್ವಸತಿ ಕಾರ್ಯ ಚುರುಕುಗೊಳಿಸಲು ಸೂಚನೆ

March 6, 2019

ಮಡಿಕೇರಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕೊಡಗು ಜಿಲ್ಲೆಯಲ್ಲಿ ಕೈಗೊಂಡಿರುವ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳು ಕುರಿತಂತೆ ಸಭೆ ನಡೆಯಿತು.

ಬಡಾವಣೆಗಳಿಗೆ ಸಂಪರ್ಕ ರಸ್ತೆ, ಬಡಾವಣೆ ನಿರ್ಮಾಣ, ಜಿಲ್ಲಾ ಕ್ರೀಡಾಂಗಣ ಹಾಗೂ ಸರ್ಕಾರಿ ಜೂನಿಯರ್ ಕಾಲೇಜು ದುರಸ್ತಿ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರದ ದುರಸ್ತಿಗೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಬೆಳೆ ಹಾನಿ: ಜಿಲ್ಲೆಯಲ್ಲಿ 32,312 ರೈತರ 75201.68 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೊಳಗಾಗಿದ್ದು, ಪರಿಹಾರಕ್ಕಾಗಿ ಸುಮಾರು 100.51 ಕೋಟಿ ರೂ.ಗಳು ಅಗತ್ಯ ವಿದೆ. ಈವರೆಗೆ 18033 ರೈತರ 14609.44 ಹೆಕ್ಟೇರ್ ಪ್ರದೇಶಗಳ ಸುಧಾರಣೆಗಾಗಿ 14.39 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಭೂಕುಸಿತ ಮತ್ತು ಹೂಳೆತ್ತುವ ಕಾರ್ಯ: 1909 ರೈತರಿಗೆ ಸೇರಿದ 614.43 ಹೆಕ್ಟೇರ್ ಗಳಷ್ಟು ಪ್ರದೇಶ ಭೂಕುಸಿತಕ್ಕೊಳಗಾಗಿದ್ದು, 251.00 ಲಕ್ಷ ರೂ.ಗಳ ಅಗತ್ಯವಿದೆ. ಈವರೆಗೆ 579 ರೈತರನ್ನು ಪರಿಹಾರಕ್ಕಾಗಿ ಗುರುತಿಸಿ ಅವರಿಗೆ ಸಂಬಂಧಿಸಿದ 240.37 ಹೆಕ್ಟೇರ್ ಕೃಷಿ ಭೂಮಿಯಲ್ಲಿನ ಹೂಳೆತ್ತುವ ಕಾರ್ಯ ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ವಸತಿ ರಹಿತರ ಪುನರ್ವಸತಿಗಾಗಿ 1162 ಮನೆಗಳ ನಿರ್ಮಾಣಕ್ಕೆ 11,455 ಲಕ್ಷ ರೂ.ಗಳ ಅಗತ್ಯವಿದೆ ಎಂದು ತಿಳಿಸಿದರು. ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಿ ಕಾಲ ಮಿತಿಯೊಳಗೆ ಪೂರ್ಣ ಗೊಳಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ, ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್, ಯೋಜನಾ ಆಯುಕ್ತರಾದ ವಂದಿತಾ ಶರ್ಮಾ, ಕೃಷಿ ಮತ್ತು ತೋಟಗಾರಿಕೆ ನಿರ್ದೇಶಕ ಡಾ: ಮಹೇಶ್ವರ ರಾವ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »