ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಿ
ಮೈಸೂರು

ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಿ

July 18, 2019

ಮೈಸೂರು,ಜು.17(ಆರ್‍ಕೆ)-ಅಧಿಕ ಪ್ರಮಾಣದಲ್ಲಿ (ಬಲ್ಕ್ ಯೂಸ್) ವಿದ್ಯುತ್ ಬಳಕೆ ಮಾಡಿಕೊಳ್ಳುವ ವರಿಗೆ ದರದಲ್ಲಿ ರಿಯಾಯಿತಿ ನೀಡಿ ಎಂದು ರೈತರು ಹಾಗೂ ಕೈಗಾರಿಕೋದ್ಯಮಿಗಳು ಅಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ದ ವತಿಯಿಂದ ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಇಂದು ಏರ್ಪಡಿಸಿದ್ದ ವಿದ್ಯುತ್ ಗ್ರಾಹಕ ರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದ ಕೈಗಾರಿಕೋದ್ಯಮಿ ಜಯಂತ್ ಅವರು ಮಾತನಾಡಿ, ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವ ಕೈಗಾರಿಕೆಗಳು, ರೈತರ ಕೃಷಿ ಪಂಪ್ ಸೆಟ್‍ಗಳಿಗೆ ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಿ ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿದರು.

ಟ್ರಾನ್ಸ್‍ಫಾರ್ಮರ್ ಲೈನ್‍ಗಳನ್ನು ಸರಿಯಾಗಿ ನಿರ್ವಹಿಸದ ಕಾರಣ ಡಿಸ್ಟ್ರಿಬ್ಯೂಷನ್‍ನಲ್ಲಿ ವಿದ್ಯುತ್ ಸೋರಿಕೆಯಾಗಿ ಕಂಪನಿಗೆ ನಷ್ಟವಾಗುವುದನ್ನು ತಡೆದು ಅದರಲ್ಲಿ ಉಳಿಯುವ ವಿದ್ಯುತ್‍ನಿಂದ ರಿಯಾಯಿತಿ ನೀಡಿದರೆ ಉಂಟಾಗುವ ನಷ್ಟವನ್ನು ಭರಿಸಬಹುದೆಂದು ಅಭಿಪ್ರಾಯಪಟ್ಟರು.

ರೈತ ಮುಖಂಡರುಗಳು ಮಾತನಾಡಿ, ಬಟ್ಟೆಯಾಗಲೀ, ಸಲಕರಣೆಯಾಗಲೀ ಬೇರೆ ಯಾವುದೇ ಸಾಮಗ್ರಿ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿದರೆ ಮಾರುಕಟ್ಟೆಯಲ್ಲಿ ದರ ಕಡಿಮೆ ಮಾಡಿ ಆಕರ್ಷಕ ರಿಯಾಯಿತಿ ನೀಡುವುದು ಸರ್ವೇ ಸಾಮಾನ್ಯ. ಅದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸಿ ಕೊಳ್ಳುವ ಗ್ರಾಹಕರಿಗೇಕೆ ವಿಶೇಷ ರಿಯಾಯಿತಿ ನೀಡಿ ಕಡಿಮೆ ದರದಲ್ಲಿ ಪೂರೈಸಬಾರದು ಎಂದು ಪ್ರಶ್ನಿಸಿದರು.

ನಾವು ರೈತರು ಕೃಷಿ ಪಂಪ್‍ಸೆಟ್‍ಗಳಿಗೆ ಪ್ರತೀ ದಿನ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತೇವೆ. ನಿಮ್ಮ ಕಂಪನಿಗೆ ನಾವು ವಿಶೇಷ ಗ್ರಾಹಕರು. ಅದಕ್ಕಾಗಿ ನಮಗೆ ವಿದ್ಯುತ್ ದರ ಕಡಿಮೆ ಮಾಡಬಹುದು ಎಂದ ಅವರು, ಗ್ರಾಹಕರಿಂದಾಗಿ ನಿಮ್ಮ ಸಂಬಳ ಹೆಚ್ಚಿಸಿ ಕೊಳ್ಳುತ್ತೀರಿ, ಮುಂಬಡ್ತಿ ಸಿಗುತ್ತದೆ. ಆ ಮೂಲಕ ನಿಮ್ಮ ವಿದ್ಯುತ್ ಸರಬರಾಜು ಕಂಪನಿ ಅಭಿವೃದ್ಧಿಯಾ ಗುತ್ತಿದೆಯೇ ಹೊರತು, ನಾವು ಪ್ರಗತಿಯಾಗುತ್ತಿಲ್ಲ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಹೆಚ್.ಎಸ್. ಗೋಪಾಲಕೃಷ್ಣ ಅವರು, ಗ್ರಾಹಕರಿಗೆ ನಿರಂತರ ಗುಣಾತ್ಮಕ ವಿದ್ಯುತ್ ಸರಬರಾಜು ಮಾಡುವುದೇ ಕಂಪನಿಯ ಮುಖ್ಯ ಉದ್ದೇಶ ವಾಗಿದ್ದು, ಲಾಭ-ನಷ್ಟವಿಲ್ಲದೆ ಸೇವೆ ಸಲ್ಲಿಸುವು ದಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಗೆ ಅಂತಹ ಅವಕಾಶ ಬಂದಲ್ಲಿ ಖಂಡಿತ ವಿದ್ಯುತ್ ದರದಲ್ಲಿ ರಿಯಾಯಿತಿ ನೀಡುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಟೆಂಪೊರರಿ ಪವರ್ ಸಪ್ಲೆಗೆ ಮೀಟರ್ ಸೆಕ್ಯೂರಿಟಿ ಡಿಪಾಸಿಟ್ ತೆಗೆದುಕೊಳ್ಳಲು ಅವಕಾಶವಿಲ್ಲದಿದ್ದರೂ ಠೇವಣಿ ಹಣ ಪಡೆಯುತ್ತಿದ್ದೀರಿ. ರೆವಿನ್ಯೂ ಬಡಾ ವಣೆಗಳ ಮನೆಗಳಿಗೆ ಈಗಾಗಲೇ ಮೀಟರ್ ಇದ್ದರೂ ಮತ್ತೆ ಹೊಸ ಮೀಟರ್ ಹಾಕಲಾಗುತ್ತಿದೆ. ಮೀಟರ್ ಅಳವಡಿಸಿ ಎಂದು ಒಬ್ಬ ವ್ಯಕ್ತಿ ಅರ್ಜಿ ಸಲ್ಲಿಸಿದರೆ, ಬೇರೊಂದು ಮನೆಗೆ ಮೀಟರ್ ಹಾಕುತ್ತಿದ್ದೀರಿ ಎಂದು ಆರೋಪಿಸಿದ ಸಿ.ಆರ್. ಅಶ್ವಥನಾರಾಯಣ ಅವರು, ಸೆಸ್ಕ್ ಕಂಪನಿಯಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದರು.

ವಿದ್ಯುತ್ ದರ ಪಾವತಿ ಹಾಗೂ ಇನ್ನಿತರ ಪ್ರಕ್ರಿಯೆಗೆ ಎಲೆಕ್ಟ್ರಾನಿಕ್ ಕ್ಲಿಯರ್ ಸಿಸ್ಟಂ ಅನ್ನು ಜಾರಿಗೆ ತರಬೇಕು, ವಿದ್ಯುತ್ ಸರಬರಾಜಿನಲ್ಲಿ ಸುಧಾರಣೆ ತರಬೇಕೆಂದು ಜೆಕೆವಿಆರ್ ಶೆಟ್ಟಿ ಅವರು ಸಲಹೆ ನೀಡಿದರೆ, ರಿಪೇರಿಯಲ್ಲಿರುವ ಹಳೇ ಪರಿವರ್ತಕಗಳನ್ನು ಬದಲಿಸಬೇಕು, ತಿಂಗಳಿಗೊಂದು ಜನಸಂಪರ್ಕ ಸಭೆ ಕರೆದು ಕೈಗೊಂಡ ಕ್ರಮದ ಬಗ್ಗೆ ತಿಳಿಸಬೇಕೆಂದು ಸುಬ್ರಹ್ಮಣ್ಯ ಅವರು ತಿಳಿಸಿದರು.

ಮೈಸೂರು ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಎ.ಎಸ್. ಸತೀಶ್ ಅವರು ಮಾತನಾಡಿ, ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿ ರುವ ವಿದ್ಯುತ್ ಲೈನ್ ಅನ್ನು ಭೂಮಿಯೊಳಗೆ ಹಾದು ಹೋಗುವಂತೆ ಮಾಡಿ ಎಂದು ಸಲಹೆ ನೀಡಿದರು.

ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್ ಮಾತನಾಡಿ, ಆಧಾರ್ ಲಿಂಕ್ ಮಾಡಿರುವಂತೆ ಆರ್‍ಆರ್ ನಂಬರ್‍ಗೆ ಗ್ರಾಹಕರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಲಿಂಕ್ ಮಾಡಿ ವಿದ್ಯುತ್ ಶುಲ್ಕ ಮತ್ತಿತರ ಮಾಹಿತಿ ಗಳನ್ನು ಶೇರ್ ಮಾಡಿ. ಸಣ್ಣ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಕೈಗಾರಿಕೆಗಳಿಗೆ ಪ್ರತ್ಯೇಕ ದರ ನಿಗದಿ ಮಾಡಿ ಎಂದು ಸಲಹೆ ನೀಡಿದರು.

ಖಾಸಗಿ ಡೆವಲಪರ್‍ಗಳು ಬಡಾವಣೆ ನಿರ್ಮಿಸು ವಾಗ ಕಡಿಮೆ ಗುಣಮಟ್ಟದ ವಿದ್ಯುತ್ ಸಂಪರ್ಕ ಸಾಧನ ಅಳವಡಿಸಿ ಹಸ್ತಾಂತರ ಮಾಡುವುದರಿಂದ ಅದರ ನಿರ್ವಹಣೆ ಹೊರೆ ಸೆಸ್ಕ್‍ಗೆ ಬರುತ್ತದೆ ಯಾದ್ದರಿಂದ ಸೆಸ್ಕ್ ನಿಂದಲೇ ಮೂಲ ಸೌಕರ್ಯ ಕಲ್ಪಿಸಿದರೆ ಹಣ ಪೋಲಾಗು ವುದು ತಪ್ಪುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸೆಸ್ಕ್ ಕಾರ್ಯನಿರ್ವಹಣೆ ಕುರಿತಂತೆ ತಾಂತ್ರಿಕ ನಿರ್ದೇಶಕ ಅಫ್ತಾಬ್ ಅಹಮದ್ ಮತ್ತು ಸೂಪರಿಂ ಟೆಂಡಿಂಗ್ ಇಂಜಿನಿಯರ್ ಮುನಿಗೋಪಾಲರಾಜು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಹಣಕಾಸು ಅಧಿಕಾರಿ ಶಿವಣ್ಣ, ಮುಖ್ಯ ಇಂಜಿನಿಯರ್ ಮಂಜುನಾಥ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಚಿಕ್ಕಲಿಂಗೇ ಗೌಡ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸಿ.ಎಂ. ಕೇಶವಮೂರ್ತಿ ಹಾಗೂ ಇತರ ಅಧಿಕಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 200 ಮಂದಿ ವಿದ್ಯುತ್ ಗ್ರಾಹಕರು ಪಾಲ್ಗೊಂಡಿದ್ದರು.

ವಿದ್ಯುತ್ ಕಳವು ಬಗ್ಗೆ ದೂರು ನೀಡಿದರೆ ವಿಜಿಲೆನ್ಸ್ ಕ್ರಮ ಕೈಗೊಳ್ಳಲೇ ಇಲ್ಲ !
ಕ್ರಮ ಕೈಗೊಳ್ಳದ ವಿಜಿಲೆನ್ಸ್: ವಿದ್ಯುತ್ ಕಳವು ಪ್ರಕರಣಗಳ ಬಗ್ಗೆ ಸಾಕ್ಷಿ ಸಮೇತ ದೂರು ನೀಡಿ ದರೂ ಕೆಪಿಟಿಸಿಎಲ್‍ನ ವಿಜಿಲೆನ್ಸ್ (ಜಾಗೃತ ದಳ) ನಿರ್ಲಕ್ಷ್ಯ ತೋರುತ್ತಿದೆ ಏಕೆ?

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಬುಧವಾರ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಹಕರ ಜತೆ ಸಂವಾದದಲ್ಲಿ ಹೀಗೆ ಕಠಿಣವಾಗಿ ಪ್ರಶ್ನಿಸಿದವರು ಸವಿತಾ ರಂಗನಾಥ್.

ನಗರದಲ್ಲಿ ಛತ್ರವೊಂದು ಭಾರೀ ಪ್ರಮಾಣದಲ್ಲಿ ವಿದ್ಯುತ್ ಕಳವು ನಡೆಸುತ್ತಿದೆ. ಈ ಬಗ್ಗೆ ವಿಜಿಲೆನ್ಸ್‍ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೀಗಾದರೆ ನಾವು ದೂರು ಕೊಡುವು ದಕ್ಕೆ ಅರ್ಥವೇನಿದೆ? ನಾನು ಸಿಜಿಆರ್‍ಎಫ್ (ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ) ಸದಸ್ಯೆಯೂ ಆಗಿದ್ದೇನೆ. ನನ್ನಂತಹವರ ದೂರನ್ನೇ ನಿರ್ಲಕ್ಷಿಸ ಲಾಗುತ್ತದೆ ಎಂದರೆ, ಸಾಮಾನ್ಯರ ದೂರುಗಳ ಕಥೆ ಏನು? ಎಂದು ಖಾರವಾಗಿ ಪ್ರಶ್ನಿಸಿದರು.

6 ತಿಂಗಳಿಂದ ಬಾಕಿ: ನಂತರ ಮಾತನಾಡಿದ ಜಿಲ್ಲಾ ಸಹಕಾರಿ ಸಂಸ್ಥೆಗಳ ಮಾಜಿ ನಿರ್ದೇಶಕ ಪಾರ್ಥಸಾರಥಿ ಅವರು ಗ್ರೀನ್ ಎಲೆಕ್ಟ್ರಿಸಿಟಿ ಬಗ್ಗೆ ಅಹವಾಲು ಹೇಳಿಕೊಂಡರು. ರೂಫ್ ಟಾಪ್ ಸೋಲಾರ್ ಎನರ್ಜಿ(ಮನೆ ತಾರಸಿ ಮೇಲೆ ಸೌರ ವಿದ್ಯುತ್ ಘಟಕ) ಸೇರಿದಂತೆ ಹಲವು ಕ್ರಮಗಳ ಗ್ರೀನ್ ಎಲೆಕ್ಟ್ರಿಸಿಟಿ ಯೋಜನೆ ಒಳ್ಳೆಯದೇ ಆಗಿದೆ. ಆದರೆ, ಅದರ ಭಾಗವಾಗಿರುವ ನಮಗೆ ಈಗ ಭ್ರಮ ನಿರಸನವಾಗಿದೆ. ನಾವು ಲಕ್ಷಾಂತರ ರೂ. ಬಂಡವಾಳ ಹೂಡಿ ಮನೆ ತಾರಸಿಯಲ್ಲಿ ಸೌರಫಲಕ ಅಳವಡಿಸಿ ಉತ್ಪತ್ತಿಯಾದ ವಿದ್ಯುತ್ತನ್ನು ಸೆಸ್ಕ್‍ಗೇ ಸರಬರಾಜು ಮಾಡುತ್ತಿದ್ದೇವೆ. ಮೊದಲೆಲ್ಲ 30 ದಿನಕ್ಕೇ ಅದರ ಹಣ ಸಂದಾಯ ಮಾಡುತ್ತಿದ್ದ ಸೆಸ್ಕ್ ಈಗ 6 ತಿಂಗಳಿಂದಲೂ ಹಣ ಬಾಕಿ ಉಳಿಸಿಕೊಂಡಿದೆ. ಗ್ರಾಹಕರು ಬಿಲ್ ಕಟ್ಟಲು 15 ದಿನ ತಡ ಮಾಡಿದರೆ ವಿದ್ಯುತ್ ಕಡಿತ ಮಾಡುವ ನಿಮ್ಮ ಸಂಸ್ಥೆ, ನಮಗೆ ಮಾತ್ರ 6 ತಿಂಗಳಾದರೂ ಹಣ ಪಾವತಿಸದಿರುವುದು ಸರಿಯೇ? ಎಂದು ಸೆಸ್ಕ್ ಎಂಡಿ ಗೋಪಾಲಕೃಷ್ಣ ಅವರನ್ನು ನೇರವಾಗಿಯೇ ಪ್ರಶ್ನಿಸಿದರು. ನಮ್ಮ ಹಣ ಪಾವತಿ ತಡವಾದರೆ ಅಷ್ಟೂ ದಿನಕ್ಕೆ ಬಡ್ಡಿಯನ್ನಾ ದರೂ ಸೇರಿಸಿಕೊಡಿ ಎಂದು ಮನವಿ ಮಾಡಿದರು.

ಕೋಳಿಫಾರಂ ಕೈಗಾರಿಕೆಯೇ?: ಮತ್ತೊಬ್ಬ ಗ್ರಾಹಕ ಎಂ.ಪಿ.ರಮೇಶ್ ಬಾಬು ಅವರು, ನಾನು ಬ್ಯಾಂಕ್‍ನಲ್ಲಿ ಸಾಲ ಪಡೆದು 1 ಎಕರೆಯಲ್ಲಿ 20 ವರ್ಷ ಗಳಿಂದ ಮೊಟ್ಟೆಕೋಳಿ ಫಾರಂ ನಡೆಸುತ್ತಿದ್ದೇನೆ. ಬ್ಯಾಂಕ್‍ನವರು `ಕೃಷಿ ಉಪ ಕಸುಬು’ ಎಂದೇ ಸಾಲ ನೀಡಿದ್ದಾರೆ. ಆದರೆ, ಸೆಸ್ಕ್‍ನವರು ನಮ್ಮ ಕೋಳಿ ಫಾರಂ ಅನ್ನು `ಸಣ್ಣ ಕೈಗಾರಿಕೆ’ ವಲಯಕ್ಕೆ ಸೇರಿಸಿದ್ದಾರೆ. ಇದರಿಂದಾಗಿ ವಾಣಿಜ್ಯ ಬಳಕೆ ಲೆಕ್ಕದಲ್ಲಿ ದುಬಾರಿ ವಿದ್ಯುತ್ ಬಿಲ್ ಪಾವತಿಸುವಂತಾಗಿದೆ. ಕೋಳಿ ಮೊಟ್ಟೆಯೂ ಆಹಾರವೇ. ಆರೋಗ್ಯಕಾರಿ ಆಹಾರ ಉತ್ಪಾದನೆ ಮಾಡುವ ಘಟಕಕ್ಕೂ ಹೀಗೆ ಮಾಡುವುದು ಸರಿಯೇ? ಎಂದು ಪ್ರಶ್ನಿಸಿದರು.

ಮುಡಾ ಬಡಾವಣೆ ಕರೆಂಟಿಲ್ಲ: ಜೆಪಿ ನಗರ 3ನೇ ಹಂತದ (ಕೊಪ್ಪಲೂರು) ನಿವಾಸಿ ಚಂದು ಅವರದು ಮತ್ತೊಂದು ಬಗೆಯ ಸಮಸ್ಯೆ. ಸಂದೇಶ್ ನಾಗರಾಜ್ ಅವರು ಮುಡಾ ಅಧ್ಯಕ್ಷರಾಗಿದ್ದಾಗ ಅಭಿವೃದ್ಧಿ ಪಡಿಸಿದ ಬಡಾವಣೆಯಲ್ಲಿ 80 ಕುಟುಂಬಗಳು ಮನೆ ಕಟ್ಟಿ ಕೊಂಡು ವಾಸವಿದ್ದೇವೆ. ಮೊದಲು ಅಲ್ಲಿ 3 ಟ್ರಾನ್ಸ್ ಫಾರ್ಮರ್ ಇದ್ದವು. ಈಗ ಒಂದೂ ಇಲ್ಲ. 80 ಮನೆಯವರೂ ದೂರದ ಮತ್ತೊಂದು ಬಡಾವಣೆ ಯಿಂದ ವಿದ್ಯುತ್ ಲೈನ್ ಎಳೆದುಕೊಂಡಿದ್ದೇವೆ. ಬೀದಿದೀಪ ಗಳೂ ಹಾಳಾಗಿ ರಾತ್ರಿ ವೇಳೆ ಓಡಾಡುವುದೇ ಕಷ್ಟ ವಾಗಿದೆ. ಮುಡಾ ಅಭಿವೃದ್ಧಿ ಪಡಿಸಿದ ಲೇಔಟ್‍ನಲ್ಲಿಯೇ ಹೀಗಾದರೆ ಹೇಗೆ? ಎಂದು ಅಲವತ್ತುಕೊಂಡರು.

ಕೈಗಾರಿಕೆ ಕಷ್ಟ: ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ನ್ಯೂ ಹೊರೈಜನ್ ಆಟೊಮೊಬೈಲ್ ಇಂಡಸ್ಟ್ರಿಯ ಮಾಲೀಕರೊಬ್ಬರು ಮಾತನಾಡಿ ಪದೇ ಪದೆ ವಿದ್ಯುತ್ ಕಡಿತದಿಂದ ಕೈಗಾರಿಕೆ ನಡೆಸುವುದೇ ಬಲು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ವ್ಯಾಪ್ತಿಯಲ್ಲಿ ಶೇ.20ರಷ್ಟು ಮಾತ್ರವೇ ವಿದ್ಯುತ್ ಪೂರೈಕೆಯಾಗುತ್ತಿದೆ. ನಮ್ಮ ಭಾಗದಲ್ಲಿ ಜೋರು ಗಾಳಿ ಬೀಸುತ್ತದೆ. ದಯಮಾಡಿ ವಿಂಡ್ ಮಿಲ್ (ಪವನ ವಿದ್ಯುತ್) ಘಟಕವನ್ನಾದರೂ ಸ್ಥಾಪಿಸಲು ಪ್ರಯತ್ನಿಸಿ ಎಂಬ ಸಲಹೆಯನ್ನೂ ನೀಡಿದರು.

ಭೂಸ್ವಾಧೀನ: ಕಡಕೊಳ ವ್ಯಾಪ್ತಿಯಲ್ಲಿ ವಿದ್ಯುತ್ ಘಟಕಕ್ಕೆ ಅಗತ್ಯ ಮೀರಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ರೈತರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು. ಸ್ವಾಧೀನ ಪಡಿಸಿಕೊಂಡ 110 ಎಕರೆಗಳಲ್ಲಿ ಬಳಸಿರುವುದು ಬಹಳ ಕಡಿಮೆ. ಹಾಗಿದ್ದರೆ ಅಷ್ಟೊಂದು ಜಮೀನನ್ನಾದರೂ ಏಕೆ ಸ್ವಾಧೀನ ಪಡಿಸಿಕೊಂಡಿರಿ ಎಂದು ಪ್ರಶ್ನಿಸಿದರು.

Translate »