ಒಂದೆಡೆ ಕೊರೊನಾ ಭೀತಿ! ಮತ್ತೊಂದೆಡೆ ಖದೀಮರ ಹಾವಳಿ!!
ಮೈಸೂರು

ಒಂದೆಡೆ ಕೊರೊನಾ ಭೀತಿ! ಮತ್ತೊಂದೆಡೆ ಖದೀಮರ ಹಾವಳಿ!!

April 18, 2020

ಮೈಸೂರು,ಏ.17(ಆರ್‍ಕೆ)-ಕೊರೊನಾ ವೈರಸ್ ಹಾವಳಿಯಿಂದಾಗಿ ಲಾಕ್‍ಡೌನ್ ನಿರ್ಬಂಧ ಹೇರಿರುವುದರಿಂದ ಎಲ್ಲಾ ವಹಿವಾಟು ಸ್ಥಗಿತಗೊಂಡಿದ್ದು, ಇದೇ ಸಮಯದಲ್ಲಿ ಕೆಲವು ದುಷ್ಕರ್ಮಿಗಳು ಕಳ್ಳತನವನ್ನೇ ಕಸುಬು ಮಾಡಿಕೊಂಡಂತೆ ಕಂಡುಬರುತ್ತಿದೆ. ಇದಕ್ಕೆ ಗುರುವಾರ ರಾತ್ರಿ ಮೈಸೂರು ನಗರದ ವಿವಿಧೆಡೆ ಹಾಲಿನ ಬೂತ್ ಹಾಗೂ ದೇವಸ್ಥಾನದಲ್ಲಿ ನಡೆದಿರುವ ಕಳ್ಳತನಗಳೇ ನಿದರ್ಶನ.

ಲಾಕ್‍ಡೌನ್ ನಿರ್ಬಂಧದಿಂದ ವಾಣಿಜ್ಯ ವಹಿವಾಟು ಸ್ತಬ್ಧಗೊಂಡಿದೆ. ಅಲ್ಲದೆ ಹಗಲಲ್ಲೇ ಜನ ಹಾಗೂ ವಾಹನ ಸಂಚಾರ ವಿರಳಾತಿವಿರಳ. ಇನ್ನು ರಾತ್ರಿ ವೇಳೆ ಯಂತೂ ಒಂದು ನರಪಿಳ್ಳೆಯೂ ರಸ್ತೆಯಲ್ಲಿರಲು ಸಾಧ್ಯವಿಲ್ಲ. ಇದೇ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದ ಖದೀಮರು, ಸಂದರ್ಭದ ಲಾಭ ಪಡೆದು ಕಳ್ಳತನಕ್ಕೆ ಇಳಿದಿದ್ದಾರೆ ಎಂಬ ಶಂಕೆ ಮೂಡುತ್ತಿವೆ. ವಾಣಿಜ್ಯ ವಹಿವಾಟು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳ ಸಿಸಿ ಕ್ಯಾಮರಾಗಳು ಕಾರ್ಯನಿರ್ವಹಿಸದೇ ಇರುವುದನ್ನು ಖಚಿತಪಡಿಸಿಕೊಂಡಿರುವ ಖದೀಮರು ತಮ್ಮ ಕಸುಬು ಆರಂ ಭಿಸಿರಬಹುದು ಎಂದು ಹೇಳಲಾಗುತ್ತಿದೆ.

ಕೊರೊನಾ ವೈರಸ್ ಸೋಂಕು ಹಾವಳಿಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ವಿಧಿಸಿ, ಆ ಮೂಲಕ ಜನ, ವಾಹನ ಸಂಚಾರ ನಿರ್ಬಂ ಧಿಸಿದೆ. ಪರಿಣಾಮ ದಿನನಿತ್ಯ ಕೂಲಿನಾಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದ ಜನರ ಬದುಕು ದುಸ್ತರವಾಗಿದೆ. ದಾನಿಗಳು, ಸಂಘ-ಸಂಸ್ಥೆಗಳು ಇಂತಹವರ ನೆರವಿಗೆ ನಿಂತಿವೆ. ಪ್ರತಿನಿತ್ಯ ಸಾವಿರಾರು ಮಂದಿಗೆ ಸಿದ್ಧ ಆಹಾರ ಪದಾರ್ಥದ ಜೊತೆಗೆ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿವೆ. ಇನ್ನು ಯಾವುದೋ ಒಂದು ಕಾರಣಕ್ಕೆ ಮೈಸೂರಿಗೆ ಬಂದು ಲಾಕ್‍ಡೌನ್‍ನಿಂದ ಇಲ್ಲೇ ಸಿಕ್ಕಿ ಹಾಕಿಕೊಂಡವರು ದಾನಿಗಳ ನೆರವಿನೊಂ ದಿಗೆ ದಿನ ದೂಡುತ್ತಿದ್ದಾರೆ. ಇಂತಹವರ ನಡುವೆ ಕೆಲ ದುಷ್ಕರ್ಮಿಗಳು ಕಳ್ಳತನಕ್ಕೆ ಇಳಿದಿರಬಹುದೇ ಎಂಬ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »