ಮೈಸೂರು: ಸಾರ್ವಜನಿಕರೇ ಎಚ್ಚರ, ಮನೆಯ ಕಿಟಕಿ ಪಕ್ಕ ಬೆಲೆ ಬಾಳುವ ವಸ್ತುಗಳನ್ನು ಇಡಬೇಡಿ. ತೆರೆದ ಕಿಟಕಿಗಳಲ್ಲಿ ಕೊಂಡಿ ಬಳಸಿ ನಗದು, ಚಿನ್ನಾಭರಣಗಳನ್ನು ಕಳವು ಮಾಡುವ ತಂಡ ಮೈಸೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
ಬಾಗಿಲು ತೆರೆದಿದ್ದ ಕಿಟಕಿ ಮೂಲಕ ಕೊಂಡಿ ಅಳ ವಡಿಸಿದ ಪ್ಲಾಸ್ಟಿಕ್ ಪೈಪ್ ತೂರಿಸಿ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಮೈಸೂರಿನ ಬನ್ನಿಮಂಟಪ `ಸಿ’ ಲೇಔಟ್‍ನಲ್ಲಿ ನ. 6ರ ರಾತ್ರಿ ನಡೆದಿದೆ.
ಬನ್ನಿಮಂಟಪ `ಸಿ’ ಲೇಔಟ್, 4ನೇ ಮೇನ್, 4ನೇ ಕ್ರಾಸ್ ನಿವಾಸಿ ಲೇಟ್ ಗೌಸ್‍ಖಾನ್ ಅವರ ಮಗ ಮೊಹಮದ್ ರೂಮನ್‍ಖಾನ್ ಅವರ ಮನೆಯಲ್ಲಿ ಕಳವು ನಡೆದಿದ್ದು, ಈ ಕುರಿತು ಎನ್‍ಆರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮರಾ ಫುಟೇಜ್‍ನಲ್ಲಿ ಸಿಕ್ಕಿದ ಸುಳಿವಿನ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ.
ಆಂಗ್ಲ ಪತ್ರಿಕೆಯೊಂದರಲ್ಲಿ ಉಪ ಸಂಪಾದಕರಾಗಿರುವ ಮೊಹಮದ್ ರೂಮನ್ ಖಾನ್, ಬೆಂಗಳೂರಿನ ಹೆಚ್.ಬಿ.ಆರ್. ಲೇಔಟ್‍ನಲ್ಲಿ ವಾಸವಾಗಿದ್ದಾರೆ. ವಾರಕ್ಕೊಮ್ಮೆ ಮೈಸೂರಿಗೆ ಬಂದು ಹೋಗುತ್ತಿದ್ದ ಅವರು, ಅದರಂತೆ ನ.3ರಂದು ಬಂದಿದ್ದರು. ನ.6 ರಂದು ಪತ್ನಿಯೊಂದಿಗೆ ಅಜ್ಜಿ ಮನೆಯ ಕಾರ್ಯಕ್ರಮಕ್ಕೆ ತೆರಳಿ ರಾತ್ರಿ 12.45 ಗಂಟೆಗೆ ವಾಪಸ್ ಬಂದು ಮಲಗಿದ್ದರು. ಮರು ದಿನ (ನ.7) ಸಂಜೆ ಬೆಂಗಳೂರಿಗೆ ಹೊರಡಲು ಲಗೇಜ್ ಪ್ಯಾಕ್ ಮಾಡುತ್ತಿದ್ದಾಗ ವ್ಯಾನಿಟಿ ಬ್ಯಾಗ್‍ನಲ್ಲಿದ್ದ ಆಭರಣ, ನಗದು ನಾಪತ್ತೆಯಾಗಿರುವುದು ತಿಳಿದಿದೆ. ಎಟಿಎಂ ಕಾರ್ಡ್, ಮೊಬೈಲ್ ಚಾರ್ಜರ್ ಹಾಗೂ ಪೌಡರ್ ಬಾಕ್ಸ್ ಕೆಳಗೆ ಬಿದ್ದಿದ್ದವು. ನ.6ರಂದು ರಾತ್ರಿ ಮನೆಯ ಮೊದಲ ಮಹಡಿಯ ಕಿಟಕಿ ಮೂಲಕ ವ್ಯಾನಿಟಿ ಬ್ಯಾಗಿನಲ್ಲಿದ್ಧ 120 ಗ್ರಾಂ ತೂಕದ 4 ಚಿನ್ನದ ಬಳೆಗಳು, 40 ಗ್ರಾಂ ತೂಗುವ 4 ಉಂಗುರಗಳು, 15000 ರೂ. ನಗದು ಸೇರಿ ಒಟ್ಟು 5 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ಹಣವನ್ನು ಖದೀಮರು ದೋಚಿದ್ದಾರೆ ಎಂದು ಮೊಹಮದ್ ರೂಮನ್‍ಖಾನ್ ಪೊಲೀ ಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಎನ್‍ಆರ್ ಠಾಣೆ ಪೊಲೀಸರು ಮಹಜರು ನಡೆಸಿ ಮನೆಯ ಸಿಸಿ ಕ್ಯಾಮರಾ ಫುಟೇಜ್ ಪರಿಶೀಲಿಸಿದಾಗ ನ. 6ರ ರಾತ್ರಿ ಖದೀಮನೊಬ್ಬ ಸ್ಟೇರ್ ಕೇಸ್ ಮೂಲಕ ಮನೆಯ ಮೊದಲ ಮಹಡಿಗೇರಿ ಪ್ಲಾಸ್ಟಿಕ್ ಪೈಪ್‍ಗೆ ಕೊಂಡಿ ಅಳವಡಿಸಿಕೊಂಡು ಕಿಟಕಿಯಿಂದ ಒಳಕ್ಕೆ ತೂರಿಸಿ ವ್ಯಾನಿಟಿ ಬ್ಯಾಗ್ ಹತ್ತಿರಕ್ಕೆಳೆದು ಕೊಂಡು ಅದರಿಂದ ಆಭರಣ ಮತ್ತು ನಗದು ತೆಗೆದು ಕೊಂಡು ಹೋಗಿರುವ ದೃಶ್ಯಗಳು ಕಂಡು ಬಂದವು.
ಘಟನಾ ಸ್ಥಳಕ್ಕೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ.ವಿಕ್ರಂ ವಿ.ಅಮಟೆ, ಎನ್.ಆರ್ ಉಪ ವಿಭಾಗದ ಎಸಿಪಿ ಸಿ.ಗೋಪಾಲ್, ಬೆರಳಚ್ಚು ಮುದ್ರೆ ನಗರ ಘಟಕದ ಎಸಿಪಿ ರಾಜಶೇಖರ್, ಶ್ವಾನ ದಳದ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು. ಸಿಸಿ ಕ್ಯಾಮರಾದಲ್ಲಿ ದೊರೆತ ಸುಳಿವಿನ ಆಧಾರದಲ್ಲಿ ಶೋಧ ನಡೆಸುತ್ತಿರುವ ಎನ್‍ಆರ್ ಠಾಣೆ ಪೊಲೀಸರು, ಖದೀಮನ ಪತ್ತೆಗೆ ಬಲೆ ಬೀಸಿದ್ದಾರೆ.