ಮೈಸೂರು: ನಗರ ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಕೆ.ಆರ್.ಕ್ಷೇತ್ರದ ವಾರ್ಡ್‍ಗಳಲ್ಲಿನ ಸಮಸ್ಯೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ನಡೆಯಿತು. ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಪಾಲಿಕೆ ಅಧಿಕಾರಿಗಳೊಂದಿಗೆ ಕ್ಷೇತ್ರದ ವಾರ್ಡ್‍ನಲ್ಲಿನ ಸಮಸ್ಯೆಗಳ ಕುರಿತು ಸಭೆ ನಡೆಸಿ, ಚರ್ಚಿಸಿದರು. ಈ ವೇಳೆ ರಾಮದಾಸ್ ಅವರು ಇಂತಿಂಥ ಕಾಮಗಾರಿಗಳನ್ನು ಇಂತಿಷ್ಟು ದಿನಗಳೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ಪಾಲಿಕೆ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಪಾಲಿಕೆಯ ಸೇಸ್‍ಗಳಿಗೆ ಪ್ರತ್ಯೇಕ ಬ್ಯಾಂಕ್ ಖಾತೆ ಇಲ್ಲದಿರುವುದು ಹಾಗೂ ಪಾಲಿಕೆಯಲ್ಲಿ ಯಾವುದೇ ರೀತಿಯ ಬೈಲಾ ಸಿದ್ದಪಡಿಸಿಲ್ಲದಿರುವುದು ಶಾಸಕ ರಾಮದಾಸ್ ಗಮನಕ್ಕೆ ಬಂದಾಗ, ಎಲ್ಲಾ ರೀತಿಯ ಸೆಸ್‍ಗಳಿಗೂ ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದಿ ರಬೇಕು. ಹಾಗೆಯೇ ಎಲ್ಲಾ ಕಾಮಗಾರಿಗಳಿಗೂ ಒಂದೊಂದು ಬೈಲಾ ಸಿದ್ದಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಈ ಹಿಂದೆ ವಲಯ 1ರ ಕಂದಾಯ ನಿರೀಕ್ಷಕರಾಗಿದ್ದ ಶಿವಕುಮಾರ್ ಎಂಬುವರು ಸಾರ್ವಜನಿಕರ ಕೆಲಸ ಮಾಡಿಕೊಡಲು ತುಂಬಾ ತೊಂದರೆ ಕೊಡುತ್ತಿದ್ದ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಕೂಡಲೇ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಶಾಸಕರು ಆಯುಕ್ತರಿಗೆ ಸೂಚಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಜಗದೀಶ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವಕುಮಾರ್ ಮತ್ತು ಕ್ಷೇತ್ರದ ಎಲ್ಲ ಪಾಲಿಕೆ ಸದಸ್ಯರು ಹಾಜರಿದ್ದರು.