ಕೇವಲ 8 ಮತಗಳ ಅಂತರದ ಗೆಲುವು!
ಮೈಸೂರು

ಕೇವಲ 8 ಮತಗಳ ಅಂತರದ ಗೆಲುವು!

September 4, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ 58ರಲ್ಲಿ ಕೇವಲ 8 ಮತಗಳ ಅಂತರದಲ್ಲಿ ಬಿಜೆಪಿಯ ಆರ್.ಕೆ. ಶರತ್ ಕುಮಾರ್ ಗೆಲುವು ಸಾಧಿಸಿದ್ದು, ಇದು ಅತ್ಯಂತ ಕಡಿಮೆ ಅಂತರದ ಗೆಲುವಾಗಿದೆ.

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಬಿ.ಪಿ. ಮಂಜುನಾಥ್ ಅಳಿಯನೂ ಆದ ಆರ್.ಕೆ.ಶರತ್‍ಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ, ಕಾಂಗ್ರೆಸ್‍ನ ಹೆಚ್.ಸಿ.ಕೃಷ್ಣಕುಮಾರ್ ಸಾಗರ್ 1770 ಮತಗಳನ್ನುಗಳಿಸುವ ಮೂಲಕ ಪ್ರಬಲ ಪೈಪೋಟಿ ನೀಡಿದ್ದರು.

ಅದೇ ರೀತಿ ವಾರ್ಡ್ 19ರಲ್ಲಿ 11 ಮತಗಳ ಅಂತರದಲ್ಲಿ ಜೆಡಿಎಸ್‍ನ ಶ್ರೀಮತಿ ಭಾಗ್ಯ, ಬಿಜೆಪಿಯ ಬಿ.ಎಸ್.ಹೇಮಾಲತಾರನ್ನು (1887) ಮಣಿಸಿದ್ದಾರೆ.

ಶ್ರೀಮತಿ ಭಾಗ್ಯ ಅವರು ಮಾಜಿ ಕಾರ್ಪೊರೇಟರ್ ಸಿ. ಮಹದೇಶ್ (ವಾರ್ಡ್ ನಂ.32) ಅವರ ಪತ್ನಿ. ಅದೇ ರೀತಿ ವಾರ್ಡ್ 62ರಲ್ಲಿ ಬಿಜೆಪಿಯ ಶಾಂತಮ್ಮ (ಪಡೆದ ಮತಗಳು 1751), 52 ಮತಗಳ ಅಂತರದಲ್ಲಿ ಕಾಂಗ್ರೆಸ್‍ನ ಕೆ.ನಾಗರತ್ನ ಅವರಿಗೆ (1699) ಸೋಲುಣಿಸಿದ್ದಾರೆ. ವಾರ್ಡ್ 26ರಲ್ಲಿ ಜೆಡಿಎಸ್‍ನ ತಸ್ನಿಂ ಕೇವಲ 72 ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಇವರು 2322 ಮತಗಳನ್ನು ಗಳಿಸಿದ್ದರೆ, ಪ್ರಬಲ ಪೈಪೋಟಿ ನೀಡಿದ ಎಸ್‍ಡಿಪಿಐನ ಅಸ್ಮ ಖಾನಂ 2250 ಮತಗಳನ್ನು ಪಡೆದಿದ್ದಾರೆ. ವಾರ್ಡ್ 28ರಲ್ಲಿ ಬಿಜೆಪಿಯ ಡಾ.ಅಶ್ವಿನಿ ಶರತ್ 2290 ಮತಗಳನ್ನು ಗಳಿಸುವ ಮೂಲಕ 68 ಮತಗಳ ಅಂತರದಲ್ಲಿ ಕಾಂಗ್ರೆಸ್‍ನ ಆರ್.ಕಮಲ ಉದಯಕುಮಾರ್ ಅವರನ್ನು (2222) ಮಣಿಸಿದ್ದಾರೆ.

Translate »