ಮಡಿಕೇರಿ, ಸೆ.1- ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿದು ಇವರೆಗೆ ಒಟ್ಟು 6 ಮಂದಿ ಮೃತಪಟ್ಟಿದ್ದು, ಇತರ 4 ಮಂದಿ ಇಂದಿಗೂ ನಾಪತ್ತೆಯಾಗಿದ್ದಾರೆ. ಈ ದುರ್ಘಟನೆ ಸಂಭವಿಸಿ ಇಂದಿಗೆ 23 ದಿನಗಳೇ ಕಳೆದಿದ್ದು, ನಾಪತ್ತೆಯಾದ ಇತರ 4 ಮಂದಿಗಾಗಿ ನಡೆಸ ಲಾಗುತ್ತಿದ್ದ ಶೋಧ ಕಾರ್ಯವನ್ನು ತಾತ್ಕಾಲಿಕ ವಾಗಿ ಸ್ಥಗಿತ ಮಾಡಲಾಗಿದೆ.
ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಗಿನ 10.30ರ ಸಮಯದಲ್ಲಿ ಘಟಿಸಿದ ಈ ಘೋರ ದುರಂತದಲ್ಲಿ ಹರೀಶ್ ಅವರ ಪತ್ನಿ 8 ತಿಂಗಳ ತುಂಬು ಗರ್ಭಿಣಿ ವೀಣಾ ಮತ್ತು ಪ್ರಭು ಭಟ್ ಅವರ ತಾಯಿ ಹಾಗೂ ಇಬ್ಬರು ಮಕ್ಕಳು ಇಂದಿಗೂ ನಾಪತ್ತೆಯಾಗಿದ್ದಾರೆ. ನೆನ್ನೆಯವರೆಗೂ ಎಡೆಬಿಡದೇ ನಿರಂತರ ಶೋಧ ನಡೆಸಿದ್ದರೂ ಕೂಡ ನಿರೀಕ್ಷಿತ ಫಲಿತಾಂಶ ಕಂಡು ಬಂದಿಲ್ಲ. ಮಾತ್ರವಲ್ಲದೇ, ಬೆಳಗಿನಿಂದ ಆರಂಭವಾಗುವ ಶೋಧ ಕಾರ್ಯ ಮಧ್ಯಾಹ್ನದವರೆಗೆ ಅಡೆತಡೆ ಇಲ್ಲದೇ ನಡೆಯುತ್ತಿತ್ತಾದರೂ, ಮಧ್ಯಾಹ್ನದ ನಂತರ ಸುರಿಯುವ ಮಳೆ ಮತ್ತು ದಟ್ಟ ಮಂಜು ಮುಸು ಕಿದ ವಾತಾವರಣದಿಂದ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗುತ್ತಿತ್ತು. ಭಾರೀ ಕೆಸರು ಮಣ್ಣು, ಮಣ್ಣಿ ನಡಿ ಹುದುಗಿರುವ ಬೃಹತ್ ಮರದ ದಿಮ್ಮಿಗಳು, ಕಲ್ಲು ಬಂಡೆಗಳು ಮಾತ್ರವಲ್ಲದೇ, ಆಳೆತ್ತರಕ್ಕೆ ತುಂಬಿ ರುವ ಮಣ್ಣಿನಲ್ಲಿ ಮೊಣಕಾಲಿನವರೆಗೂ ಹೂತು ಹೋಗುವ ವಿಷಮ ಪರಿಸ್ಥಿತಿಯಲ್ಲೂ ಆಂಧ್ರ ಪ್ರದೇಶದ ವೆಲ್ಲೂರಿನ 10ನೇ ಬೆಟಾಲಿಯನ್‍ನ ಎನ್‍ಡಿಆರ್‍ಎಫ್ ಯೋಧರು ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭಾರೀ ಪರಿಶ್ರಮ ದಿಂದ ಭೂ ಕುಸಿತದಲ್ಲಿ ಸಿಲುಕಿ ಮೃತಪಟ್ಟಿದ್ದ ಆರು ಮಂದಿಯ ಮೃತದೇಹಗಳನ್ನು ಹೊರತೆಗೆ ಯುವಲ್ಲಿ ಯಶಸ್ವಿಯಾಗಿದ್ದರು.
ತೋರಾ ಗ್ರಾಮದಲ್ಲಿ ಮಣಿಪಾರೆ ಬೆಟ್ಟ ಕುಸಿದು ಅಂದಾಜು 1.5 ಕಿ.ಮೀ. ವ್ಯಾಪ್ತಿಯ 150 ಎಕರೆ ಪ್ರದೇಶ ಸಂಪೂರ್ಣ ಭೂ ಗರ್ಭ ಸೇರಿದ್ದು, ಅಲ್ಲಿದ್ದ 7 ಮನೆಗಳು 50ರಿಂದ 60 ಅಡಿ ಆಳದಲ್ಲಿ ಭೂ ಸಮಾಧಿಯಾಗಿವೆ. ಒಟ್ಟು ಆರು ಬೃಹತ್ ಹಿಟಾಚಿ ಯಂತ್ರಗಳು ಅಂದಾಜು 40 ಅಡಿ ಆಳದ ಕೆಸರು ಮಣ್ಣನ್ನು ತೆರವು ಮಾಡುತ್ತಾ ನಿರಂತರ ಶೋಧ ಕಾರ್ಯದಲ್ಲಿ ತೊಡಗಿದ್ದ ಸಂದರ್ಭ ಮನೆಯೊಳಗಿದ್ದ ಸಾmಗ್ರಿಗಳು, ಪಾತ್ರೆಗಳು ಸೇರಿದಂತೆ ಮತ್ತಿತ್ತರ ವಸ್ತುಗಳು ಕೆಲ ದಿನಗಳ ಹಿಂದೆ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ ಈ ಸ್ಥಳದಲ್ಲಿ ನಾಪತ್ತೆಯಾದವರ ಮೃತದೇಹಗಳು ಮಾತ್ರ ಇಂದಿಗೂ ಗೋಚರಿಸಲಿಲ್ಲ. ಈ ಹಿನ್ನಲೆ ಯಲ್ಲಿ ಇದೀಗ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲು ರಕ್ಷಣಾ ತಂಡಗಳು ನಿರ್ಧರಿಸಿದ್ದು, ಈವರೆಗೆ ನಡೆಸಲಾದ ಕಾರ್ಯಾಚರಣೆಯ ಮಾಹಿತಿ ಯನ್ನು ಜಿಲ್ಲಾಡಳಿತಕ್ಕೆ ನೀಡಲು ನಿರ್ಧರಿಸಿವೆ ಎಂದು ತಿಳಿದು ಬಂದಿದ್ದು, ಜಿಲ್ಲಾಡಳಿತ ಕೈಗೊಳ್ಳುವ ಮುಂದಿನ ನಿರ್ಧಾರವನ್ನು ರಕ್ಷಣಾ ತಂಡಗಳು ಎದುರು ನೋಡುತ್ತಿವೆ. ನಾಪತ್ತೆಯಾದವರ ಬಗ್ಗೆ ಜಿಲ್ಲಾಡಳಿತ ಕಾನೂನಾತ್ಮಕವಾಗಿ ಯಾವ ನಿರ್ಧಾರ ಪ್ರಕಟಿಸುತ್ತದೆ ಎಂಬುದನ್ನು ಕೂಡ ಕಾದು ನೋಡಬೇಕಿದೆ.