ಸರಗಳ್ಳರ ಬೇಟೆಗೆ ‘FAST TRACK’ ಕಾರ್ಯಾಚರಣೆ
ಮೈಸೂರು

ಸರಗಳ್ಳರ ಬೇಟೆಗೆ ‘FAST TRACK’ ಕಾರ್ಯಾಚರಣೆ

May 4, 2019

ಮೈಸೂರು: ಗುರುವಾರ ಬೆಳ್ಳಂಬೆಳಿಗ್ಗೆ 5 ಕಡೆ ಕೈಚಳಕ ತೋರಿದ್ದ ಖದೀಮರು ರಾತ್ರಿ ಮತ್ತೆ ಎರಡು ಕಡೆ ಮಹಿಳೆಯರ ಚಿನ್ನದ ಸರ ಎಗರಿಸಿ, ಮೈಸೂರಲ್ಲಿ ಭಯಭೀತ ವಾತಾವರಣ ಉಂಟು ಮಾಡಿದ್ದು, ಮೈಸೂರು ನಗರ ಪೊಲೀಸರು ಸರಗಳ್ಳರ ಬೇಟೆಗೆ `ಫಾಸ್ಟ್ ಟ್ರ್ಯಾಕ್’ ವಿನೂತನ ಕಾರ್ಯಾಚರಣೆ ಆರಂಭಿಸಿದ್ದಾರೆ.

ನಿನ್ನೆ ಬೆಳಿಗ್ಗೆ ಘಟನೆಯಿಂದ ಎಚ್ಚೆತ್ತ ಮೈಸೂರು ನಗರ ಪೊಲೀಸರು ರಸ್ತೆಗಿಳಿದು, ಖದೀಮರ ಸೆರೆಗೆ ಕೋಳ ಹಿಡಿದು, ಶೋಧಿಸುತ್ತಿದ್ದರೆ, ರಾತ್ರಿ 8.40 ರಿಂದ 9.10 ಗಂಟೆಯೊಳಗೆ ವಿದ್ಯಾರಣ್ಯಪುರಂನ ಎರಡು ಕಡೆ ಸರಗಳ್ಳರು ಇಬ್ಬರ ಸರ ಕಳವು ಮಾಡಿ ರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ವಿದ್ಯಾರಣ್ಯಪುರಂನ ರಾಮಕೃಷ್ಣ ರಸ್ತೆ ನಿವಾಸಿ ಲೇಟ್ ಗಣೇಶ್ ಅವರ ಪತ್ನಿ ಗೀತಾ (41) ಹಾಗೂ ಮಹದೇವಪುರ ನಿವಾಸಿ ನಾಗರಾಜು ಅವರ ಪತ್ನಿ ನಾಗರತ್ನಮ್ಮ (47) ಸರ ಕಳೆದುಕೊಂಡವರು.

ರಾತ್ರಿ 8.40ರಲ್ಲಿ ಊಟ ಮುಗಿಸಿ ಮನೆ ಮುಂದೆ ವಾಯುವಿಹಾರದಲ್ಲಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಗೀತಾ ಅವರ ಕೊರಳಲ್ಲಿದ್ದ 32 ಗ್ರಾಂ ತೂಕದ ಸರ ಕಿತ್ತುಕೊಂಡು ಶರವೇಗ ದಲ್ಲಿ ಕಣ್ಮರೆಯಾದರು. ನಂತರ ರಾತ್ರಿ 9.10 ಗಂಟೆಗೆ ಮಹದೇವಪುರದಲ್ಲಿ ನಾಗರತ್ನಮ್ಮ ಅವರ 20 ಗ್ರಾಂ ಚಿನ್ನದ ಸರ ಎಗರಿಸಿದ್ದಾರೆ. ತಲೆಗೆ ಫುಲ್ ಫೇಸ್‍ನ ಹೆಲ್ಮೆಟ್ ಧರಿಸಿದ್ದ ಕಳ್ಳರು ಕಪ್ಪು ಬಣ್ಣದ ಪಲ್ಸರ್ ಬೈಕ್‍ನಲ್ಲಿ ಬಂದಿದ್ದರು. ಕತ್ತಲಲ್ಲಿ ನಂಬರ್ ಕಾಣಿಸುತ್ತಿರಲಿಲ್ಲ ಎಂದು ಚಿನ್ನದ ಸರ ಕಳೆದುಕೊಂಡ ಗೀತಾ ಹಾಗೂ ನಾಗರತ್ನಮ್ಮ ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರಿಗೆ ಘಟನೆ ಬಗ್ಗೆ ವಿವರಿಸಿದರು. ಗುರುವಾರ ಬೆಳಿಗ್ಗೆ 6.30ರಿಂದ 8 ಗಂಟೆಯೊಳಗೆ ಬೈಕ್ ಸವಾರರಿಬ್ಬರು ವಿದ್ಯಾರಣ್ಯಪುರಂನಲ್ಲಿ ಎರಡು ಕಡೆ, ಇಟ್ಟಿಗೆಗೂಡು, ಗೋಕುಲಂ ಮೊದಲ ಹಂತ ಹಾಗೂ ಉನ್ನತಿನಗರಗಳಲ್ಲಿ ವೃದ್ಧೆಯರಿಂದ ಸರ ಕಸಿದು, ಆತಂಕ ಮೂಡಿಸಿದ್ದರಿಂದ ಎಚ್ಚೆತ್ತ ಪೊಲೀಸರು ಇಡೀ ಮೈಸೂರು ಜಾಲಾಡಿದರು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಖದೀಮರು, ನಿನ್ನೆ ರಾತ್ರಿ ಮತ್ತೆರಡು ಕಡೆ ಮಹಿಳೆ ಯರ ಚಿನ್ನದ ಸರ ಅಪಹರಿಸಿರುವುದು ಪೊಲೀಸರಿಗೇ ಖದೀಮರು ಸವಾಲಾಕಿದಂತಿದೆ.

ಆಪರೇಷನ್ ಫಾಸ್ಟ್‍ಟ್ರ್ಯಾಕ್: ಒಂದೇ ದಿನ 7 ಕಡೆ ಚಿನ್ನದ ಸರ ಅಪಹರಿಸಿದ್ದರಿಂದ ಎಚ್ಚೆತ್ತ ಪೊಲೀಸರು, ಖದೀಮರ ಹೆಡೆಮುರಿ ಕಟ್ಟಲು ‘ಫಾಸ್ಟ್‍ಟ್ರ್ಯಾಕ್’ ವಿನೂತನ ಕಾರ್ಯಾಚರಣೆಯನ್ನು ಇಂದಿನಿಂದ ಆರಂಭಿಸಿದ್ದಾರೆ. ಸರಣಿ ಸರ ಅಪ ಹರಣಗಳಿಂದ ಆತಂಕಗೊಂಡಿರುವ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು, ಪ್ರತೀ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿವಿಲ್ ಪೊಲೀಸ್ ಸಿಬ್ಬಂದಿ ಜೊತೆಗೆ ಸಿಎಆರ್, ಟ್ರಾಫಿಕ್ ಹಾಗೂ ಮಹಿಳಾ ಠಾಣೆ ಪೊಲೀಸರನ್ನೂ ‘ಆಪರೇಷನ್ ಫಾಸ್ಟ್‍ಟ್ರ್ಯಾಕ್’ಗೆ ನಿಯೋಜಿಸಿದ್ದಾರೆ.

ಇನ್ಸ್‍ಪೆಕ್ಟರ್, ಸಬ್‍ಇನ್ಸ್‍ಪೆಕ್ಟರ್, ಗರುಡ, ಪಿಸಿಆರ್, ಇಂಟರ್‍ಸೆಪ್ಟರ್, ಚೀತಾ ವಾಹನಗಳನ್ನು ಬೀದಿಗಿಳಿಸಿರುವ ನಗರ ಪೊಲೀಸ್ ಆಯುಕ್ತರು, ಮೈಸೂರು ನಗರದಾ ದ್ಯಂತ ಖದೀಮರು ಪತ್ತೆಗೆ ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ಬ್ಲಾಕ್ ಅಂಡ್ ರೆಡ್ ಪಲ್ಸರ್: ಫಾಸ್ಟ್ ಟ್ರ್ಯಾಕ್ ಕಾರ್ಯಾಚರಣೆಯಲ್ಲಿ ಕಪ್ಪು ಮತ್ತು ಕೆಂಪು ಬಣ್ಣದ ಬಜಾಜ್ ಪಲ್ಸರ್ ಬೈಕ್‍ಗಳ ಮೇಲೆ ನಿಗಾ ವಹಿಸುತ್ತಿರುವ ಪೊಲೀಸರು, ಬೈಕ್ ನಿಲ್ಲಿಸಿ ಸವಾರರನ್ನು ವಿಚಾರಣೆ ಮಾಡಿ ಪೂರ್ಣ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದಾರೆ.
ಜಾಗೃತಿ: ಸರಗಳ್ಳರಿದ್ದಾರೆ, ಮಹಿಳೆಯರು, ವೃದ್ಧರು ಚಿನ್ನದ ಸರ ಹಾಕಿಕೊಂಡು ಒಬ್ಬೊರೇ ಓಡಾಡಬೇಡಿ. ಅಪರಿಚಿತರು ಮಾತನಾಡಿಸಿದರೆ ಪ್ರತಿಕ್ರಿಯಿಸಬೇಡಿ, ಎಚ್ಚರವಾಗಿರಿ ಎಂದು ಪೊಲೀಸರು ಮೈಸೂರು ನಗರದಾದ್ಯಂತ ಸಾರ್ವಜನಿಕರಲ್ಲಿ ಜಾಗೃತಿ ಮೂಡಿ ಸುತ್ತಿದ್ದಾರೆ. ಗರುಡ, ಪಿಸಿಆರ್ ವಾಹನಗಳಲ್ಲಿ ವಸತಿ ಬಡಾವಣೆ, ಪಾರ್ಕ್, ನಿರ್ಜನ ಪ್ರದೇಶದ ರಸ್ತೆಗಳಲ್ಲಿ ಮೈಕ್ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿರುವ ಪೊಲೀಸರು ಎಚ್ಚರ ವಹಿಸುವಂತೆ ಸಲಹೆ ನೀಡುತ್ತಿದ್ದಾರೆ.

ಎಸ್ಕೇಪ್ ರೂಟ್‍ಗಳು: ಖದೀಮರು ಮಹಿಳೆಯರಿಂದ ಸರ ಕಿತ್ತು ಪರಾರಿಯಾಗಲು ಹುಡುಕಿಕೊಂಡಿರುವ ಮಾರ್ಗ (ಎಸ್ಕೇಪ್ ರೂಟ್ಸ್)ಗಳನ್ನು ಪೊಲೀಸರು ಗುರುತಿಸಿದ್ದಾರೆ. ಅಂತಹ ಸ್ಥಳಗಳಲ್ಲಿ ಚೈನ್ ಸ್ನ್ಯಾಚಿಂಗ್ ಪಾಯಿಂಟ್‍ಗಳೆಂದು ಪರಿಗಣಿಸಿ ಅಲ್ಲಿಗೆ ಸಿಬ್ಬಂದಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸಲಾಗಿದೆ.

Translate »