ಓಟಿಪಿ ಆಧರಿತ ಆಸ್ತಿ ನೋಂದಣಿ ಪ್ರಕ್ರಿಯೆ ಮಂದಗತಿ!
ಮೈಸೂರು

ಓಟಿಪಿ ಆಧರಿತ ಆಸ್ತಿ ನೋಂದಣಿ ಪ್ರಕ್ರಿಯೆ ಮಂದಗತಿ!

February 16, 2020

ಮೈಸೂರು, ಫೆ.15 (ಎಂಟಿವೈ)- ನಕಲಿ ದಾಖಲೆ ನೀಡಿ ಅಮಾಯಕರ ಬೆಲೆಬಾಳುವ ಆಸ್ತಿಯನ್ನು ಪರಬಾರೆ ಮಾಡುವ ವಂಚನೆಯ ಜಾಲಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ `ಓಟಿಪಿ’ ಆಧರಿಸಿದ ನೋಂದಣಿ ಪ್ರಕ್ರಿಯೆ ಸದ್ಯ ತಾಂತ್ರಿಕ ಸಮಸ್ಯೆಯಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. ಇದು ರೈತರು, ಆಸ್ತಿ ಮಾರಾಟಗಾರರು, ಖರೀದಿದಾರರಷ್ಟೇ ಅಲ್ಲದೇ, ಉಪ ನೋಂದಣಾ ಧಿಕಾರಿ ಕಚೇರಿಯ ಸಿಬ್ಬಂದಿಗೂ ತೀವ್ರ ತಲೆ ನೋವಾಗಿ ಪರಿಣಮಿಸಿದೆ.

ರಿಯಲ್ ಎಸ್ಟೇಟ್‍ಗೆ ಭಾರೀ ಬೇಡಿಕೆ ಬಂದು ನಿವೇ ಶನ ಮತ್ತು ಮನೆಗಳ ಬೆಲೆ ಗಗನಕ್ಕೇರಿದ್ದರಿಂದ ನಕಲಿ ದಾಖಲೆ ಸೃಷ್ಟಿಸಿ ಅಮಾಯಕರ ಬೆಲೆಬಾಳುವ ಭೂಮಿ, ನಿವೇಶನ ಕಬಳಿಸುವ ದೊಡ್ಡ ಜಾಲವೇ ಎಲ್ಲೆಡೆ ಸೃಷ್ಟಿ ಯಾಗಿದೆ. ಅಸಲಿ ದಾಖಲೆಯನ್ನೇ ಹೋಲುವಂತೆ ನಕಲಿ ದಾಖಲೆ ಸೃಷ್ಟಿಸಿ ಗೋಲ್‍ಮಾಲ್ ಮಾಡುತ್ತಿದ್ದ ಪ್ರಕರಣಗಳಿಗೆ ಶಾಶ್ವತ ಅಂತ್ಯ ಹಾಡಲು ಫೆ.5ರಿಂದ ರಾಜ್ಯಾದ್ಯಂತ ಓಟಿಪಿ ನಂಬರ್ ನೀಡಿ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಹೊಸ ಪದ್ಧತಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಆರಂಭದಲ್ಲೇ ತಾಂತ್ರಿಕ ದೋಷವುಂಟಾಗಿದ್ದರಿಂದ ಫೆ.5ರಿಂದ 10ರವ ರೆಗೂ ಹಲವೆಡೆ ಒಂದೇ ಒಂದು ಆಸ್ತಿ ನೋಂದಣಿ ಪ್ರಕ್ರಿಯೆ ನಡೆದಿರಲಿಲ್ಲ. ರಾಜ್ಯದಾದ್ಯಂತ ಸರ್ವರ್ ಸಮಸ್ಯೆ ಹಾಗೂ ಹೊಸಪದ್ಧತಿಯಲ್ಲಿ ದೋಷದಿಂದ ನೋಂದಣಿ ಸ್ಥಗಿತಗೊಂಡಿತ್ತು. ಆದರೆ ಫೆ.11ರಿಂದ ಹೊಸ ಪದ್ಧತಿಯಂತೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಮಂದಗತಿಯಲ್ಲಿ ಸಾಗುತ್ತಿರುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ತಡವ್ಯಾಕೆ: ರಾಜ್ಯ ಸರ್ಕಾರ ಆಸ್ತಿ ನೋಂದಣಿ ಪ್ರಕ್ರಿಯೆಗಾಗಿ ಬಳಸುತ್ತಿದ್ದ `ಕಾವೇರಿ ತಂತ್ರಾಂಶ’ವನ್ನು ಅಭಿವೃದ್ಧಿಪಡಿಸಿ, ಈ ತಂತ್ರಾಂಶದಲ್ಲಿ 6.8 ಪ್ಯಾಚ್ ನಿಯಮ ಅಳವಡಿಸಿದೆ. ಇದರಿಂದ ರಾಜ್ಯದ ಯಾವುದೇ ಜಿಲ್ಲೆಗಳಲ್ಲಾದರೂ ಆಸ್ತಿ ಮಾರುವವರು, ಕೊಳ್ಳುವವರು ಹಾಗೂ ಇಬ್ಬರು ಸಾಕ್ಷಿದಾರರೂ ಅಗತ್ಯ ದಾಖಲೆ ನೀಡ ಬೇಕಾಗುತ್ತದೆ. ಖರೀದಿದಾರರು, ಮಾರಾಟ ಮಾಡುವ ವ್ಯಕ್ತಿ ಹಾಗೂ ಸಾಕ್ಷಿದಾರರು ಕಡ್ಡಾಯವಾಗಿ ಮತ ದಾರರ ಗುರುತಿನ ಚೀಟಿ, ವಾಹನ ಚಾಲನಾ ಪರ ವಾನಗಿ, ಪಾಸ್‍ಪೋರ್ಟ್, ಆಧಾರ್ ಕಾರ್ಡ್, ಭಾವಚಿತ್ರವಿರುವ ಬ್ಯಾಂಕ್‍ಗಳ ಪಾಸ್‍ಬುಕ್‍ಗಳಲ್ಲಿ ಯಾವುದಾದರೂ ಒಂದನ್ನು ನೀಡಬೇಕು. ಈ ದಾಖಲೆಯೊಂದಿಗೆ ಅವರು ಬಳಸುವ ಮೊಬೈಲ್ ಸಂಖ್ಯೆ ನೀಡಲೇಬೇಕು. ನೋಂದಣಿ ಪ್ರಕ್ರಿಯೆ ನಡೆ ಯುವ ವೇಳೆ ಮೂವರಿಗೂ ಅವರು ನೀಡಿರುವ ಮೊಬೈಲ್‍ಗೆ ಓಟಿಪಿ ನಂಬರ್ ಬರುತ್ತದೆ. ಆ ಸಂಖ್ಯೆಯನ್ನು ನೋಂದಣಾಧಿಕಾರಿಗಳಿಗೆ ನೀಡಿದರೆ ಮಾತ್ರ, ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ಪ್ರಕ್ರಿಯೆಗೆ ನಿಧಾನವಾಗಿ ಸಾಗುತ್ತಿದೆ. ಒಂದು ನೋಂದಣಿಗೆ 30 ನಿಮಿಷ ಬೇಕಾಗುತ್ತಿದೆ. ಮೈಸೂರಿನ ಮಿನಿ ವಿಧಾನಸೌಧ, ರಾಜ್‍ಕುಮಾರ್ ರಸ್ತೆ, ಶಾರದಾದೇವಿ ನಗರ, ವಿಜಯನಗರ ಹಾಗೂ ಮುಡಾ ಕಚೇರಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗಾಗಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಈ ಹಿಂದೆ ಮೈಸೂರಿನಲ್ಲಿರುವ 5 ಉಪನೋಂದಣಾಧಿಕಾರಿ ಕಚೇರಿಯಲ್ಲಿ ಈ ಹಿಂದೆ ದಿನಕ್ಕೆ ನಡೆಯುತ್ತಿದ್ದ ಸರಾಸರಿಯಂತೆ 80-90 ನೋಂದಣಿ ಪ್ರಕ್ರಿಯೆ ಇದೀಗ 40-50ಕ್ಕೆ ಕುಸಿದಿದೆ. ಬೆಳಿಗ್ಗೆಯೇ ನೋಂದಣಾಧಿಕಾರಿ ಕಚೇರಿಗೆ ಬರುವ ಆಸ್ತಿ ಮಾರಾಟ ಮಾಡುವವರು ಅಥವಾ ಖರೀದಿದಾರರಿಗೆ ಟೋಕನ್ ನೀಡಲಾಗುತ್ತಿದೆ. ಟೋಕನ್ ಪಡೆದವರು ಸಾಲುಗಟ್ಟಿ ದಿನವಿಡೀ ನಿಲ್ಲಬೇಕಾದ ಸ್ಥಿತಿ ಒದಗಿದೆ.

ಸಂಕಷ್ಟ: ಆಸ್ತಿ ನೋಂದಣಿಯಲ್ಲಿ ಧೋಖಾ ತಡೆಗಟ್ಟಿ, ಪಾರದರ್ಶಕತೆ ಕಾಪಾಡಲು ಜಾರಿಗೆ ತಂದಿ ರುವ ಓಟಿಪಿ ನಂಬರ್ ಆಧಾರಿತ ನೋಂದಣಿ ಪ್ರಕ್ರಿಯೆ ಜನರಿಗಷ್ಟೇ ಅಲ್ಲದೆ ಸಿಬ್ಬಂದಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಮೊಬೈಲ್ ಬಳಸದೇ ಇರುವ ಗ್ರಾಮೀಣ ಪ್ರದೇಶ ಹಿರಿಯ ನಾಗರಿಕರು ಇದೀಗ ಆಸ್ತಿ ಮಾರಾಟದ ಸಲುವಾಗಿ ಮೊಬೈಲ್ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಪೋಡ್ ಮಾಡಿಸಿಕೊಳ್ಳಲು ಬರುವವರು, ಆಸ್ತಿ ಭಾಗ ಮಾಡಿಸಿಕೊಂಡು ನೋಂದಾಯಿಸಿಕೊಳ್ಳಲು ಬರು ವವರು, ಭೂಮಿ ಮೇಲೆ ಕೃಷಿ ಸಾಲ ಪಡೆಯಲು ನೋಂದಾಯಿಸಿಕೊಳ್ಳಲು ಬರುವವರು, ಅಗ್ರಿಮೆಂಟ್ ಮಾಡಿಸಿಕೊಳ್ಳಲು ಬರುವವರು ಹೊಸ ಪದ್ಧತಿ ಯಿಂದ ಪರದಾಡುವಂತಾಗಿದೆ.

Translate »