.`ಸಾವಿನ ಮನೆಯ ನೆಂಟ’ ಪರಮೇಶ್‍ಗೆ  ವಿವಿಧ ಸಂಘಟನೆಗಳಿಂದ ಅಭಿನಂದನೆ
ಮೈಸೂರು

.`ಸಾವಿನ ಮನೆಯ ನೆಂಟ’ ಪರಮೇಶ್‍ಗೆ ವಿವಿಧ ಸಂಘಟನೆಗಳಿಂದ ಅಭಿನಂದನೆ

April 5, 2019

ಮೈಸೂರು: ಸಾವಿನ ಮನೆಯ ಕರೆ ಬಂದ ಕೂಡಲೇ ತಕ್ಷಣ ಅಲ್ಲಿಗೆ ಹಾಜರಾಗಿ ಅವರಿಗೆ ಸಾಂತ್ವನ ಹೇಳುವ ಜೊತೆಗೆ ಅಂತ್ಯಕ್ರಿಯೆಯ ಎಲ್ಲಾ ವಿಧಿ ವಿಧಾನಗಳಿಗೂ ಸಹಕಾರ ನೀಡುವ `ಸಾವಿನ ಮನೆಯ ನೆಂಟ’ ಪರಮೇಶ್ ಮನೆಗೆ ವಿವಿಧ ಸಂಘಟನೆಗಳ ಮುಖಂಡರು ಭೇಟಿ ನೀಡಿ, ಸನ್ಮಾನಿಸಿದರು.

ಪರಮೇಶನ ಮಾನವೀಯ ಕಾರ್ಯದ ಬಗ್ಗೆ ಏ.3ರ `ಮೈಸೂರು ಮಿತ್ರ’ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಓದಿದ ಮೈಸೂರಿನ ಮಹರ್ಷಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ತೇಜಸ್‍ಶಂಕರ್ ನೇತೃತ್ವದ ತಂಡ ತೊಣಚಿಕೊಪ್ಪಲು ಬಡಾವಣೆಯಲ್ಲಿರುವ ಪರಮೇಶ್ ಅವರ ಮನೆಗೆ ತೆರಳಿ ಮಾನವೀಯ ಗುಣ, ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಶಾಲು ಹೊದಿಸಿ ಸನ್ಮಾನಿಸುವುದರ ಜೊತೆಗೆ ಪ್ರೋತ್ಸಾಹ ಧನವನ್ನೂ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಸಮಾಜದಲ್ಲಿ ಅನಾಥ ವ್ಯಕ್ತಿಗಳು, ಅಸಹಾಯಕರು, ಬಡವರು, ಚಿಕಿತ್ಸೆ ಪಡೆಯಲಾಗದೆ, ಇತ್ತ ಜೀವನವನ್ನು ನಡೆಸಲಾಗದೆ ಸಾವನ್ನಪ್ಪಿದ ಅನೇಕ ನಿದರ್ಶನಗಳಿವೆ. ಅಂಥವರ ಕುಟುಂಬಕ್ಕೆ ಧೈರ್ಯ ತುಂಬಿ, ಅಂತಿಮ ವಿಧಿ ವಿಧಾನಗಳನ್ನು ಮುಗಿಸಿ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪರಮೇಶ್ ಕಾರ್ಯ ಶ್ಲಾಘನೀಯ ಎಂದರು. ಪರಮೇಶ್ ಅವರ ಮಾನವೀಯ ಗುಣ ಎಲ್ಲರಲ್ಲೂ ಬರಬೇಕು ಎಂದರು. ಈ ಸಂದರ್ಭದಲ್ಲಿ ಯುವ ಮುಖಂಡ ಪೂರ್ವಜ್ ವಿಶ್ವನಾಥ್, ಅಪೂರ್ವ ಸುರೇಶ್, ಜಿ.ರಾಘವೇಂದ್ರ, ಕಡಕೊಳ ಜಗದೀಶ್, ಹರೀಶ್ ನಾಯ್ಡು, ಎಸ್.ಎನ್.ರಾಜೇಶ್ ಇನ್ನಿತರರು ಉಪಸ್ಥಿತರಿದ್ದರು
ಮೈತ್ರಿ ಅಭ್ಯರ್ಥಿ ಪರ ಪ್ರಗತಿಪರ ಚಿಂತಕರಿಂದ

Translate »