ಭಾರತ್ ಬಂದ್ ವೇಳೆ ಖಾಲಿ   ಸಂಚರಿಸಿದ ಸಾರಿಗೆ ಸಂಸ್ಥೆ ಬಸ್‍ಗಳು
ಮೈಸೂರು

ಭಾರತ್ ಬಂದ್ ವೇಳೆ ಖಾಲಿ ಸಂಚರಿಸಿದ ಸಾರಿಗೆ ಸಂಸ್ಥೆ ಬಸ್‍ಗಳು

January 9, 2019

ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ; ಆಟೋ ರಿಕ್ಷಾಗಳಿಗೂ ಇರದ ಬೇಡಿಕೆ

ಮೈಸೂರು: ಕೇಂದ್ರ ಸರ್ಕಾರ ಜನ ಹಾಗೂ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿ ಎಡಪಕ್ಷಗಳು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್ ವೇಳೆ ಮಂಗಳವಾರ ಪ್ರಯಾಣಿಕರ ಕೊರತೆ ಯಿಂದಾಗಿ ದಿನವಿಡೀ ಸಾರಿಗೆ ಸಂಸ್ಥೆ ಬಸ್‍ಗಳು ಬಹು ತೇಕ ಖಾಲಿ ಖಾಲಿಯಾಗಿ ಸಂಚಾರ ನಡೆಸಿದವು.

ಭಾರತ್ ಬಂದ್ ವೇಳೆ ರಸ್ತೆ ತಡೆ, ಕಲ್ಲೆಸೆತ ನಡೆಯಬಹು ದೆಂಬ ಆತಂಕದಲ್ಲಿ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಇಂದು ಬೆಳಿಗ್ಗೆ ಬಸ್‍ಗಳನ್ನು ರಸ್ತೆಗಿಳಿಸಲು ಹಿಂಜರಿ ದರು. ನಗರ ಸಾರಿಗೆ ಸಂಸ್ಥೆಯ ಬಸ್‍ಗಳು ಮಾತ್ರ ಎಂದಿನಂತೆ ಬೆಳಿಗ್ಗೆ 10 ಗಂಟೆವರೆಗೂ ಸಂಚರಿಸಿ ದವು. ಜಿಲ್ಲೆಯಲ್ಲಿ ಎಲ್ಲಿಯೂ ರಸ್ತೆ ತಡೆ, ಬಸ್‍ಗಳ ಮೇಲೆ ದಾಳಿ ಘಟನೆ ವರದಿಯಾಗದೆ ಇರುವುದನ್ನು ಮನಗಂಡ ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್ ಸಂಚಾರ ಮುಂದುವರೆಸುವುದಕ್ಕೆ ನಿರ್ಧರಿಸಿದರು. ಇದರಿಂದ ನಗರ ಬಸ್ ನಿಲ್ದಾಣದಿಂದ ಕುವೆಂಪುನಗರ, ಬನ್ನಿ ಮಂಟಪ, ಸಾತಗಳ್ಳಿ ಹಾಗೂ ವಿಜಯನಗರ ಬಸ್ ಡಿಪೋಗಳಿಂದ ಒಟ್ಟು 450 ಬಸ್‍ಗಳು 175 ಮಾರ್ಗ ಗಳಲ್ಲಿ ಸಂಚರಿಸಿದವು. ಸಾಮಾನ್ಯ ದಿನಗಳಲ್ಲಿ ಈ 175 ಮಾರ್ಗಗಳಲ್ಲಿ ಆರು ಸಾವಿರ ಟ್ರಿಪ್ ಸಂಚರಿಸು ತ್ತಿದ್ದ ಬಸ್‍ಗಳು ಇಂದು ಕೇವಲ ಸಾವಿರ ಟ್ರಿಪ್‍ನಲ್ಲಿ ಸಂಚರಿಸಿದವು. ಇಂದು ಪ್ರಯಾಣಿಕರ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ 10 ಬಸ್‍ಗಳು ಸಂಚರಿಸುತ್ತಿದ್ದ ಮಾರ್ಗಗಳಲ್ಲಿ ಎರಡು ಅಥವಾ ಮೂರು ಬಸ್ ಸಂಚಾರ ಕ್ಕಷ್ಟೇ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ ಬಸ್‍ಗಳು ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭಿಸಿದವು.

ಸನ್ನಿವೇಶ ನೋಡಿ ಸಂಚಾರ: ಮೈಸೂರಿನ ಗ್ರಾಮಾಂ ತರ ಬಸ್ ನಿಲ್ದಾಣದಿಂದ ವಿವಿಧೆಡೆಗೆ ಪ್ರಯಾಣಿಸಬೇ ಕಾಗಿದ್ದ ಹಲವು ಬಸ್‍ಗಳು ಬೆಳಿಗ್ಗೆ ಸಂಚಾರ ಸ್ಥಗಿತಗೊಳಿಸಿ ದ್ದವು. ಬೆಳಿಗ್ಗೆ 11 ಗಂಟೆವರೆಗೂ ಒಂದೊಂದೇ ಬಸ್ ಪ್ರಯಾ ಣಿಸುತ್ತಿದ್ದವು. ಡಿಪೋಗಳಿಂದ ಬಸ್ ನಿಲ್ದಾಣಕ್ಕೆ ಬಸ್‍ಗಳು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರಿಂದ, ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದ್ದರಿಂದ ಗ್ರಾಮಾಂತರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೆಲವು ಬಸ್‍ಗಳು ನಿಲ್ದಾಣದ ಒಂದು ಬದಿಯಲ್ಲಿ ಸಾಲಾಗಿ ನಿಂತಿದ್ದವು.

ವಿವಿಧ ನಗರಗಳಿಗೆ ಹೋಗುವ ಕೆಲ ಪ್ರಯಾಣಿಕರು ಬಂದ್ ವಿಷಯ ತಿಳಿಯದೇ ಬಸ್ ನಿಲ್ದಾಣಕ್ಕೆ ಬಂದಿ ದ್ದರು. ಬಸ್ ಸಂಚಾರ ಎಂದಿನಂತೆ ಇಲ್ಲದ ಕಾರಣ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೈಸೂರಿನಿಂದ ಮಳ ವಳ್ಳಿ, ನಂಜನಗೂಡು, ಹೆಚ್.ಡಿ.ಕೋಟೆ, ಹುಣ ಸೂರು, ಕೆ.ಆರ್.ನಗರ, ಬನ್ನೂರು ಸೇರಿದಂತೆ ವಿವಿ ಧೆಡೆಗೆ ಅರ್ಧ ಗಂಟೆಗೆ ಒಂದು ಬಸ್ ಕಳುಹಿಸಲಾಗು ತ್ತಿತ್ತು. ಬೆಂಗಳೂರಿಗೆ ಸಂಜೆವರೆಗೂ ತಡೆರಹಿತ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ನಿಲುಗಡೆ ಸಹಿತ ಬಸ್ ಸಂಚಾರ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಡೆಯುತ್ತಿತ್ತು. ವೋಲ್ವೋ ಸೇರಿ ದಂತೆ ಐಷಾರಾಮಿ ಬಸ್‍ಗಳು ಡಿಪೋದಿಂದ ಹೊರ ಬರಲಿಲ್ಲ. ಮೈಸೂರಿನಿಂದ ಕೇರಳಕ್ಕೆ ಪ್ರಯಾಣಿಸ ಬೇಕಾದ ಕೇರಳ ಸಾರಿಗೆ ಸಂಸ್ಥೆ ಬಸ್‍ಗಳು ಗ್ರಾಮಾಂ ತರ ಬಸ್ ನಿಲ್ದಾಣದಲ್ಲಿಯೇ ಉಳಿದಿದ್ದವು.

ಸ್ವಚ್ಛತಾ ಸಿಬ್ಬಂದಿ ನಿಲ್ದಾಣದ ಫ್ಲಾಟ್ ಫಾರಂ ಗಳನ್ನು ತೊಳೆದು ಸ್ವಚ್ಛಗೊಳಿಸಿದರು. ಅದರಲ್ಲಿಯೂ ಅಂತರಾಜ್ಯ ಬಸ್ ತಂಗುದಾಣದಲ್ಲಿ ಗೋಡೆ ಸೇರಿ ದಂತೆ ವಿವಿಧೆಡೆ ಪ್ರಯಾಣಿಕರು ಎಲೆ ಅಡಿಕೆ ಜಗಿದು ಉಗಿದು ಹದಗೆಡಿಸಿದ್ದ ವಾತಾವರಣವನ್ನು ಶುಚಿಗೊಳಿಸಿದರು.

ಬೆಳಿಗ್ಗೆ 11.30ರ ನಂತರ ನಿಲ್ದಾಣದ ಮೇಲುಸ್ತು ವಾರಿ ಅಧಿಕಾರಿ ಪ್ರಯಾಣಿಕರ ಸಂಖ್ಯೆಗೆ ಅನುಗುಣ ವಾಗಿ ಒಂದೊಂದೇ ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಿದರು. ಇದರಿಂದ ಮಧ್ಯಾಹ್ನ 1.30ರ ನಂತರ ಬಸ್‍ಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚಾಯಿತು. ಆದರೆ ಬಹುತೇಕ ಬಸ್‍ಗಳಲ್ಲಿ ಬೆರಳೆಣಿಕೆ ಪ್ರಯಾಣಿಕರಷ್ಟೇ ಇದ್ದರು.

ಚಾಲಕ, ನಿರ್ವಾಹಕರ ಆಕ್ಷೇಪ: ನಗರ ಬಸ್ ನಿಲ್ದಾಣ ದಲ್ಲಿ ಪ್ರಯಾಣಿಕರು ಇಲ್ಲದಿದ್ದರೂ ಖಾಲಿ ಬಸ್‍ಗಳನ್ನೇ ಚಾಲನೆ ಮಾಡುವಂತೆ ಅಧಿಕಾರಿಗಳು ಸೂಚಿಸುತ್ತಿದ್ದು ದ್ದಕ್ಕೆ ಕೆಲವು ಚಾಲಕರು ಹಾಗೂ ನಿರ್ವಾಹಕರು ಆಕ್ಷೇ ಪಿಸಿದರು. ಪ್ರಯಾಣಿಕರಿಲ್ಲದೆ ಬಸ್ ಸಂಚರಿಸುವು ದರಿಂದ ಸಂಸ್ಥೆಗೆ ನಷ್ಟವಾಗುತ್ತದೆ. ಬಂದ್ ನಡೆಯು ತ್ತಿದೆ ಎಂಬ ಭಯದಿಂದ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಇದರಿಂದ ನಷ್ಟವನ್ನು ತಪ್ಪಿಸುವುದಕ್ಕಾಗಿ ಡಿಪೋಗಳಿಗೆ ಬಸ್ ಕಳುಹಿಸಿ ಎಂದು ಸಲಹೆ ನೀಡುತ್ತಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಅಧಿ ಕಾರಿಗಳು, ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ, ಪ್ರಯಾಣಿಕರು ಇಲ್ಲದಿದ್ದರೂ ಬಸ್ ಸಂಚಾರ ನಡೆಸಿ ಎಂದು ಒತ್ತಾಯಿಸಿದರು. ಇದರಿಂದಾಗಿ ಖಾಲಿ ಖಾಲಿ ಬಸ್‍ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಿದವು.

ಆಟೋ ರಿಕ್ಷಾಗಳಿಗೂ ಬೇಡಿಕೆ ಬರಲಿಲ್ಲ: ಸಾಮಾನ್ಯ ವಾಗಿ ಬಂದ್ ವೇಳೆ ಆಟೋ ರಿಕ್ಷಾ ಚಾಲಕರಿಗೆ ಹಬ್ಬ ವಾಗುತ್ತಿತ್ತು. ಕೆಲವು ಆಟೋ ಚಾಲಕರು, ಹೆಚ್ಚು ಗಳಿಕೆ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ಬಂದ್ ವೇಳೆ ಪ್ರಯಾಣಿಕರಿಲ್ಲದೆ ಆಟೋ ರಿಕ್ಷಾ ಚಾಲಕರು ಪರದಾಡಿದರು.

ಬಿಗಿ ಬಂದೋಬಸ್ತ್: ಮೈಸೂರು ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ತಲಾ ಎರಡೆ ರಡು ತುಕಡಿ ಕೆಎಸ್‍ಆರ್‍ಪಿ ಪೊಲೀಸರು, ಮೌಂಟೆಡ್ ಪೊಲೀಸರನ್ನು ಹಾಗೂ ಎರಡು ಪಿಸಿಆರ್ ವಾಹನ ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

Translate »